ಬಿಜೆಪಿ ಜೊತೆಗೆ ವಿಜಯ್ ಕೈ ಜೋಡಿಸುತ್ತಾರಾ ವಿಜಯ್ ತಳಪತಿ?
ತಮಿಳು ಚಿತ್ರರಂಗದ ಮಂದಿ ರಾಜಕೀಯಕ್ಕೆ ಎಂಟ್ರಿಯಾಗ್ತಾ ಇರೋದು ಇದೇ ಮೊದಲೇನಲ್ಲ. ಈ ಹಿಂದೆ ಎಂಜಿಆರ್, ಜಯಲಲಿತಾ, ಕ್ಯಾಪ್ಟನ್ ವಿಜಯಕಾಂತ್, ಕಮಲಹಾಸನ್ ಇವರೆಲ್ಲವೂ ಚಿತ್ರರಂಗದ ಹಿನ್ನೆಲೆಯಿಟ್ಟುಕೊಂಡೇ ರಾಜಕೀಯಕ್ಕೆ ಬಂದವರು. ಈವನ್ ರಜಿನಿಕಾಂತ್ ಕೂಡ ತಮ್ಮದೇ ಪಕ್ಷವನ್ನ ಘೋಷಿಸಿ, ತಮಿಳುನಾಡು ರಾಜಕೀಯದಲ್ಲಿ ಸುನಾಮಿಯೆಬ್ಬಿಸುವ ಮುನ್ಸೂಚನೆ ಕೊಟ್ಟು ಬಳಿಕ ಅಖಾಡದಿಂದ ಹಿಂದೆ ಸರಿದಿದ್ರು. ಇದೀಗ ನಟ ವಿಜಯ್ ಕೂಡ ರಾಜಕೀಯದಲ್ಲಿ ತಮ್ಮ ಭವಿಷ್ಯ ಬರೆಯೋಕೆ ಸಿದ್ಧರಾಗಿದ್ದಾರೆ. ಹಾಗಿದ್ರೆ ಡಿಎಂಕೆ, ಎಐಎಡಿಎಂಕೆ, ಬಿಜೆಪಿ ವಿಜಯ್ ರಾಜಕೀಯ ಎಂಟ್ರಿಯನ್ನ ಯಾವ ರೀತಿ ನೋಡ್ತಾ ಇದೆ. ಬಿಜೆಪಿ ಜೊತೆಗೆ ವಿಜಯ್ ಕೈಜೋಡಿಸ್ಬಹುದಾ? ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ ಫ್ಲಾಪ್ ಶೋ – ಪ್ರಮುಖ ಬ್ಯಾಟರ್ಗಳೇ ಕೈಕೊಟ್ಟರೆ ಮುಂದೇನು?
ವಿಜಯ್ ಒಬ್ಬ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿ. ತಮಿಳುನಾಡಿನಲ್ಲಿ ಉದಯಾರ್ ಸಮುದಾಯ ಸೇರಿದಂತೆ ಹಿಂದುಳಿದ ಸಮುದಾಯಗಳ ಮತವನ್ನ ವಿಜಯ್ ಸೆಳೆಯಬಹುದು ಅಂತಾ ರಾಜಕೀಯ ಪಂಡಿತರು ವಿಶ್ಲೇಷಿಸ್ತಾ ಇದ್ದಾರೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಅನಾಲಿಸಿಸ್ ಕೂಡ ಇದೆ. ತಮಿಳು ಸಿನಿಮಾಗಳನ್ನ ನೋಡೋಕೆ ಥಿಯೇಟರ್ಗೆ ಬರುವ ಜನರಿಂದಲೂ ತಮಿಳುನಾಡಿನಲ್ಲಿ ವೋಟ್ಬ್ಯಾಂಕ್ ಲೆಕ್ಕಾಚಾರ ಹಾಕಲಾಗುತ್ತೆ. ಹೇಗೆ ಅಂತಾ ಹೇಳ್ತೀನಿ ನೋಡಿ. ಈ ಹಿಂದೆ ಆ್ಯಕ್ಟರ್ ಕಂ ಪೊಲಿಟೀಶಿಯನ್ ವಿಜಯ್ಕಾಂತ್ ಸಿನಿಮಾಗಳು ಕ್ಲಾಸ್-ಬಿ, ಕ್ಲಾಸ್-ಸಿ ಥಿಯೇಟರ್ಗಳಲ್ಲಷ್ಟೇ ಹೆಚ್ಚು ಪ್ರದರ್ಶನ ಕಾಣ್ತಾ ಇದ್ವು. ವಿಜಯ್ಕಾಂತ್ಗೆ ಒಂದು ವರ್ಗದ ಫಿಕ್ಸ್ಡ್ ಆಡಿಯನ್ಸ್ ಇತ್ತಷ್ಟೇ. ಅವರು ಸಿನಿಮಾದಲ್ಲಿ ಮಾಸ್ ಆ್ಯಕ್ಟರ್ ಕೂಡ ಆಗಲಿಲ್ಲ. ರಾಜಕೀಯದಲ್ಲಿ ಮಾಸ್ ಲೀಡರ್ ಕೂಡ ಆಗಲಿಲ್ಲ. ಕೆಲ ಗ್ರಾಮೀಣ ಪ್ರದೇಶದ ವೋಟ್ಗಳಷ್ಟೇ ವಿಜಯ್ಕಾಂತ್ಗೆ ಬರ್ತಿದ್ವು. ಆದ್ರೆ ತಳಪತಿ ವಿಜಯ್ ಹಾಗಲ್ಲ. ವಿಜಯ್ ಸಿನಿಮಾವನ್ನ ಎಲ್ಲಾ ಕ್ಲಾಸ್ನ ಜನರು ಕೂಡ ನೋಡ್ತಾರೆ. ಮಲ್ಟಿಪ್ಲೆಕ್ಸ್ ಥಿಯೇಟರ್ಗಳಿಂದ ಹಿಡಿದು ಕ್ಲಾಸ್-ಸಿ ಥಿಯೇಟರ್ವರೆಗೂ ವಿಜಯ್ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣ್ತವೆ. ಅವರೊಬ್ಬ ಪ್ಯೂರ್ ಮಾಸ್ ಹೀರೋ. ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲೂ ವಿಜಯ್ ಸ್ಟಾರ್ಡಮ್ ಹವಾ ಜೋರಾಗಿದೆ. ಈ ಥಿಯೇಟರ್ ಲೆಕ್ಕಾಚಾರಗಳನ್ನ ಕೂಡ ಮಾಡಿಯೇ ಈಗ ರಾಜಕೀಯದಲ್ಲೂ ಮಾಸ್ ಲೀಡರ್ ಆಗೋಕೆ ತಳಪತಿ ವಿಜಯ್ ನಿರ್ಧರಿಸಿದ್ದಾರೆ.
ಹಾಗಂತಾ ತಮಿಳುನಾಡಿನಲ್ಲಿ ಎಲೆಕ್ಷನ್ ಗೆಲ್ಲೋಕೆ ಪಾಪ್ಯುಲಾರಿಟಿ ಇದ್ರಷ್ಟೇ ಸಾಕಾಗೋದಿಲ್ಲ. ಒಂದು ನಿರ್ದಿಷ್ಟ, ಅರ್ಥಪೂರ್ಣ ಸಿದ್ಧಾಂತವನ್ನ ಹೊಂದಿರೋದು ಕೂಡ ತುಂಬಾನೆ ಇಂಪಾರ್ಟೆಂಟ್. ತಳಪತಿ ವಿಜಯ್ ತಮ್ಮ ಪಕ್ಷವನ್ನ ಲಾಂಚ್ ಮಾಡಿ ಮಾತನಾಡೋವಾಗ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ರು. ಪಿರಪ್ಪುಕ್ಕುಮ್ ಎಲ್ಲಾ ಉಯಿರುಕ್ಕುಮ್ ಅನ್ನೋದಾಗಿ. ಅಂದ್ರೆ ಹುಟ್ಟಿಗಾಗಿ ಮತ್ತು ಎಲ್ಲಾ ಜೀವಗಳಿಗಾಗಿ ಅಂತಾ ಅರ್ಥ. ಈ ಸೆಂಟೆನ್ಸ್ನಲ್ಲೇ ವಿಜಯ್ ಸಿದ್ಧಾಂತ ಏನು ಅನ್ನೋದನ್ನ ಅರ್ಥಮಾಡಿಕೊಳ್ಳಬಹುದು ಅಂತಿದ್ದಾರೆ ನಟನ ಬೆಂಬಲಿಗರು. ಅಂದ್ರೆ ಹುಟ್ಟು-ಸಾವಿನ ಕಾಲಚಕ್ರದಲ್ಲಿ ಎಲ್ಲರೂ ಸಮಾನ. ಅಹಿಂಸಾವಾದ, ಎಲ್ಲಾ ಜೀವಗಳಿಗೂ ಗೌರವ ನೀಡೋದೆ ನಮ್ಮ ಸಿದ್ಧಾಂತ ಅನ್ನೋದಾಗಿ ವಿಜಯ್ ಆಪ್ತರೊಬ್ಬರು ವಿವರಿಸಿದ್ದಾರೆ. ಧರ್ಮ, ಜಾತಿ ರಾಜಕೀಯ, ಒಡೆದು ಆಳುವ ನೀತಿ, ಭ್ರಷ್ಟಾಚಾರ ಇವೆಲ್ಲವನ್ನೂ ಮೀರಿ ರಾಜಕೀಯಕ್ಕೆ ಹೊಸ ದಿಕ್ಕು ಕಲ್ಪಿಸೋಕೆ ತಳಪತಿ ವಿಜಯ್ ಮುಂದಾಗಿದ್ದಾರಂತೆ.
ಆದ್ರೆ ಚುನಾವಣೆ ಗೆಲ್ಲೋದು ವಿಜಯ್ಗೆ ಅಷ್ಟೊಂದು ಸುಲಭ ಇಲ್ಲ. ಯಾಕಂದ್ರೆ ಕೇವಲ ವಿಜಯ್ ಫೇಸ್ನ್ನ ಇಟ್ಕೊಂಡೇ ಮತ ಸೆಳೆಯೋಕೆ ಆಗೋದಿಲ್ಲ. ವಿಜಯ್ ಪಕ್ಷಕ್ಕೆ ಪ್ರಭಾವಿ ನಾಯಕರ ಅವಶ್ಯಕತೆ ಕೂಡ ಇದೆ. ಮೊದಲು ತಮ್ಮ ಪಕ್ಷವನ್ನ ಗಟ್ಟಿಗೊಳಿಸೋದೆ ವಿಜಯ್ ಮುಂದಿರೋ ಮೇನ್ ಟಾಸ್ಕ್. ಕಾರ್ಯಕರ್ತರಿಗೇನೋ ಕೊರತೆ ಆಗಲಿಕ್ಕಿಲ್ಲ. ಆದ್ರೆ ತಮ್ಮ ಜೊತೆ ನಾಯಕರ ಪಡೆ ಕಟ್ಟಬೇಕಾದ ಸವಾಲು ವಿಜಯ್ಗೆ ಇದೆ. ಸದ್ಯ ವಿಜಯ್ ತಮ್ಮ ಪಾರ್ಟಿಯಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ಒಂದಷ್ಟು ನಿವೃತ್ತ ಅಧಿಕಾರಿಗಳನ್ನೂ ಸೇರಿಕೊಳ್ಳೋಕೆ ನಿರ್ಧರಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಏನೇ ಕ್ರಾಂತಿಯುಂಟುಮಾಡಬೇಕಿದ್ರೂ ವಿಜಯ್ಗೆ ಒಂದಷ್ಟು ಸಮಯಾವಕಾಶ ಬೇಕೇ ಬೇಕು. ಈಗಿಂದೀಗಲೇ ಎಲ್ಲಾ ಬುಡಮೇಲು ಮಾಡೋಕೆ ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಈ ಬಾರಿಯ ಲೋಕಸಭೆ ಚುನಾವಣೆ ನಮ್ಮ ಟಾರ್ಗೆಟ್ ಅಲ್ಲ. 2026ರ ವಿಧಾನಸಭೆ ಚುನಾವಣೆಯಲ್ಲೇ ಫುಲ್ ಫ್ಲೆಡ್ಜ್ ಆಗಿ ಸ್ಪರ್ಧಿಸ್ತೀವಿ ಅಂತಾ ಈಗಾಗ್ಲೇ ವಿಜಯ್ ಸ್ಪಷ್ಟಪಡಿಸಿದ್ದಾರೆ. ಅಂದ್ರೆ ಎಂಕೆ ಸ್ಟಾಲಿನ್ರ ಡಿಎಂಕೆಯನ್ನ ಅಧಿಕಾರದಿಂದ ಇಳಿಸೋದು ವಿಜಯ್ ವನ್ ಪಾಯಿಂಟ್ ಅಜೆಂಡಾ ಆಗ್ಬಹುದೋ ಏನೊ.
ಹಾಗಿದ್ರೆ ಸ್ಟಾರ್ ತಳಪತಿ ವಿಜಯ್ ರಾಜಕೀಯ ಎಂಟ್ರಿಗೆ ಅಧಿಕಾರದಲ್ಲಿರೋ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ಯಾವ ರೀತಿ ರಿಯಾಕ್ಟ್ ಮಾಡಬಹುದು ಅನ್ನೋದು ತುಂಬಾನೆ ಕುತೂಹಲ ಮೂಡಿಸಿದೆ. ಆಲ್ಮೋಸ್ಟ್ ಎಲ್ಲಾ ಪಕ್ಷಗಳು ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಸೈಲೆಂಟ್ ಆಗಿವೆ. ನೆಗೆಟಿವ್ ಸ್ಟೇಟ್ಮೆಂಟ್ಗಳನ್ನ ನೀಡೋ ಧೈರ್ಯವನ್ನ ಸದ್ಯಕ್ಕೆ ಯಾರೂ ಮಾಡೋದಿಲ್ಲ ಬಿಡಿ. ಯಾಕಂದ್ರೆ ವಿಜಯ್ ಯಾವ ರೇಂಜಿಗೆ ಫ್ಯಾನ್ ಫಾಲೋವರ್ಸ್ಗಳನ್ನ ಹೊಂದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋದೆ. ಸುಮ್ನೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಕೆಲಸಕ್ಕೆ ಈ ಹಂತದಲ್ಲಿ ಯಾರೂ ಕೈ ಹಾಕಲಿಕ್ಕಿಲ್ಲ.
ಬಿಜೆಪಿ ಜೊತೆ ಕೈಜೋಡಿಸ್ತಾರಾ ತಳಪತಿ ವಿಜಯ್?
ವಿಜಯ್ ತಮ್ಮ ಪಾರ್ಟಿಯನ್ನ ಘೋಷಣೆ ಮಾಡಿದ ದಿನವೇ ಎಐಎಡಿಎಂಕೆ ನಾಯಕರೊಬ್ಬರು ಒಂದು ಸಂಚಲನಕಾರಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಗೆ ಸಿನಿಮಾ ವಲಯದಿಂದ ಒಬ್ಬರು ಫೇಸ್ ಬೇಕಿದೆ. ಹೀಗಾಗಿ ವಿಜಯ್ ಜೊತೆಗೆ ಕೆಲಸ ಮಾಡೋಕೆ ಬಿಜೆಪಿ ಬಯಸಬಹುದು ಅಂತಾ ಎಐಎಡಿಎಂಕೆ ನಾಯಕ ಕೋವಲ್ ಸತ್ಯನ್ ಹೇಳಿದ್ದಾರೆ. ಈ ಹಿಂದೆ ರಜಿನಿಕಾಂತ್ರನ್ನ ರಾಜಕೀಯಕ್ಕೆ ಎಳೆದು ತರೋಕೆ ಬಿಜೆಪಿ ಯತ್ನಿಸಿದ್ವು. ಆದ್ರೆ ರಜಿನಿ ಎಸ್ಕೇಪ್ ಆಗಿಬಿಟ್ರು. ಆದ್ರೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋ ವಿಜಯ್ ಮೇಲೆ ಬಿಜೆಪಿ ಫೋಕಸ್ ಮಾಡಬಹುದು ಅಂತಾ ಕೋವಲ್ ಸತ್ಯನ್ ಹೇಳಿದ್ದಾರೆ. ಇನ್ನು ಕೇಸರಿ ಕಲಿ ಅಣ್ಣಾ ಮಲೈ ಕೂಡ ಬ್ರದರ್ ವಿಜಯ್ ಅಂತಾ ಉಲ್ಲೇಖಿಸಿ ಪಕ್ಷ ಸ್ಥಾಪನೆಗೆ ವಿಶ್ ಮಾಡಿದ್ದಾರೆ. ಭ್ರಷ್ಟ ರಾಜಕಾರಣಿಗಳ ವಿರುದ್ಧ ವಿಜಯ್ ಹೋರಾಡ್ತಾರೆ ಅನ್ನೋ ನಂಬಿಕೆ ಇದೆ ಅಂತಾನೂ ಅಣ್ಣಾಮಲೈ ಬರೆದುಕೊಂಡಿದ್ದಾರೆ. ಆದ್ರೆ ಸೈದ್ಧಾಂತಿಕವಾಗಿ ನೋಡೋದಾದ್ರೆ ತಳಪತಿ ವಿಜಯ್ ಬಿಜೆಪಿ ಜೊತೆಗೆ ದೋಸ್ತಿ ಮಾಡಿಕೊಳ್ಳೋದು ಡೌಟೇ. ಆದ್ರೆ ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಹತ್ತಿರ ಹತ್ತಿರ ಎರಡು ವರ್ಷ ಇದೆ. ಆ ವೇಳೆಗೆ ಏನು ಬೇಕಾದ್ರೂ ಬದಲಾವಣೆಗಳಾಗಬಹುದು. ಯಾಕಂದ್ರೆ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇದೇ ಆಗುತ್ತೆ ಅಂತಾ ಭವಿಷ್ಯ ನುಡಿಯೋಕೂ ಸಾಧ್ಯವಿಲ್ಲ. ವೋಟು ಬರೋವರೆಗಷ್ಟೇ ಸಿದ್ಧಾಂತ.. ಅಧಿಕಾರ ಅಂತಾ ಬಂದಾಗ ಅಲ್ಲಿ ಲೆಕ್ಕಾಚಾರವೇ ಬೇರೆಯಾಗಿರುತ್ತೆ. ಅಂತೂ ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ಸಿನಿಮಾ ಸ್ಟಾರ್ನ ಪ್ರವೇಶ ಆಗಿದೆ.