ಚಿನ್ನ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. – ಸ್ಪಂದನಾ ನೆನಪಲ್ಲಿ ಮನದಾಳ ಬಿಚ್ಚಿಟ್ಟ ರಾಘು

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರ ಬದುಕಿನಲ್ಲಿ ಅದೊಂದು ದುರಂತ ಸಂಭವಿಸದೇ ಇದ್ದರೆ, ಇಂದು ಆ ಕುಟುಂಬದಲ್ಲಿ ಸಂಭಮದಲ್ಲಿ ತೇಲಾಡುತ್ತಿರುತ್ತಿತ್ತು. ಆದರೆ ವಿಧಿಯ ಘೋರ ಆಟಕ್ಕೆ ರಾಘು ಪತ್ನಿ ಸ್ಪಂದನಾ ಅವರು ಬಲಿಯಾಗಿದ್ದಾರೆ. ತಮ್ಮ ಮುದ್ದಿನ ಮಡದಿಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದಾರೆ. ಸ್ಪಂದನಾ ಅವರು ಇಂದು ಬದುಕಿದ್ದರೆ ವಿಜಯ್ ರಾಘವೇಂದ್ರ ಅವರು 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಖುಷಿ ಖುಷಿಯಿಂದ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಬೇಕಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ: ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ…- ನಾನೆಂದೂ ನಿನ್ನವ ಎಂದು ಚಿನ್ನಾರಿಮುತ್ತನ ಮನಮಿಡಿಯುವ ಪೋಸ್ಟ್
16 ವರ್ಷಗಳ ಹಿಂದೆ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಇಂದು (ಶನಿವಾರ) 16ನೇ ವಿವಾಹ ವಾರ್ಷಿಕೋತ್ಸವವಾಗಿದ್ದು, ಪತ್ನಿಯನ್ನು ಕಳೆದುಕೊಂಡಿರುವ ರಾಘು ಮಾತೇ ಹೊರಡದಂತಹ ಸ್ಥಿತಿಯಲ್ಲಿ ಇದ್ದಾರೆ. ಮಡದಿಯ ಮರಣದ ನಂತರ ಯಾರ ಬಳಿಯೂ ವಿಜಯ್ ಹೆಚ್ಚು ಮಾತನಾಡುತ್ತಿಲ್ಲ. ಪತ್ನಿ ಸ್ಪಂದನಾ ನೆನಪಲ್ಲೇ ದಿನ ದೂಡುತ್ತಿದ್ದಾರೆ. ಮದುವೆಯ ವಾರ್ಷಿಕೋತ್ಸವದಂದು ಪತ್ನಿಯನ್ನು ನೆನೆದು ಭಾವುಕರಾಗಿದ್ದಾರೆ. ಪ್ರೀತಿಯ ಮಡದಿಗಾಗಿ ಪ್ರೀತಿಯ ಸಾಲುಗಳನ್ನು ಒಳಗೊಂಡ ಪ್ರೇಮ ಪತ್ರವನ್ನು ಬರೆದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚಿನ್ನ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ
ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬರೆತು ಜೀವಂತವಾದೆ
ಮುದ್ದಾದ ನಗುನಲ್ಲಿ ಇದ್ದ ನಗು ಪರ್ವತದಷ್ಟು..
ಮರೆಯದೇ… ತೊರೆಯದೇ… ಎದೆಗೊತ್ತಿ ಪ್ರೀತಿಸುವೆ, ಶೌರ್ಯದಲ್ಲಿ ನಾನು ಬಿಗಿದಪ್ಪುವಷ್ಟು
ಇಲ್ಲದ ಮಡದಿಗೆ ಪತ್ರ ಬರೆಯುವ ಮೂಲಕ ನಟ ವಿಜಯ್ ರಾಘವೇಂದ್ರ ಭಾವುಕರಾಗಿದ್ದಾರೆ. 16ನೇ ವಾರ್ಷಿಕೋತ್ಸವ. ಐ ಲವ್ ಯು ಚಿನ್ನ ಎಂದು ವಿಡಿಯೋಗೆ ಅಡಿಬರಹ ನೀಡಿದ್ದಾರೆ.
ಸ್ಪಂದನಾ ಅವರು ಆ.7ರಂದು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅವರ ಅಂತ್ಯಕ್ರಿಯೆ ಆ.9ರಂದು ಈಡಿಗ ಸಂಪ್ರದಾಯದಂತೆ ಮಲ್ಲೇಶ್ವರಂ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿತು.