ವಿಜಯ್ ಹಝಾರೆ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಆರ್ಭಟ – 8 ಸಿಕ್ಸ, 9 ಬೌಂಡರಿ ಬಾರಿಸಿ ಶತಕ ಸಿಡಿಸಿದ ಹಿಟ್‌ಮ್ಯಾನ್

ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎಂಟು ವರ್ಷಗಳ ಬಳಿಕ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಮೂಲಕ ದೇಶಿ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಲ್ಲಿ ಸ್ಪೋಟಕ ಶತಕವನ್ನು ಬಾರಿಸಿದ್ದಾರೆ. ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ಮುಂಬೈ ಬ್ಯಾಟ್ಸ್‌ಮನ್ 8 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಶತಕವನ್ನು ಸಿಡಿಸಿದ್ದಾರೆ. ಇದು ಇವರ ಲಿಸ್ಟ್ ಎ ಕ್ರಿಕೆಟ್‌ನಲ್ಲಿನ 37ನೇ ಶತಕವಾಗಿದೆ. ಜೈಪುರದ ಸಾವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಅವರ ಶತಕದ ಬಲದಿಂದ ಸಿಕ್ಕಿಂ ನೀಡಿದ್ದ 237 ರನ್‌ಗಳನ್ನು ಮುಂಬೈ ಸುಲಭವಾಗಿ ಚೇಸ್ ಮಾಡಿದೆ.
ಇದನ್ನೂ ಓದಿ: PBKS ಲಕ್ ಬದಲಿಸಿದ ಶ್ರೇಯಸ್ – ಚೇಂಜಸ್ ಇಲ್ಲದೇ ಡೇಂಜರಸ್ ಆದ್ರಾ?
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಅತ್ಯಂತ ವೇಗದ ಶತಕ ಇದಾಗಿದೆ. ಇದಕ್ಕೂ ಮುನ್ನ 2023ರಲ್ಲಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ 63 ಎಸೆತಗಳಲ್ಲಿ ಸೆಂಚುರಿಯನ್ನು ಬಾರಿಸಿದ್ದರು. ರೋಹಿತ್ ಶರ್ಮಾ ಅವರ ಇನಿಂಗ್ಸ್ ಅನ್ನು ಜೈಪುರದಲ್ಲಿ 12000 ಕ್ಕೂ ಅಧಿಕ ಕ್ರಿಕೆಟ್ ಪ್ರೇಮಿಗಳು ಕಣ್ತುಂಬಿಸಿಕೊಂಡಿದ್ದರು. 2018ರ ಬಳಿಕ ರೋಹಿತ್ ಶರ್ಮಾ ಅವರ ಪಾಲಿಗೆ ಇದು ಮೊದಲನೇ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯವಾಗಿದೆ. ಮೊದಲನೇ ಎಸೆತ ಬೌಲ್ ಮಾಡುವುದಕ್ಕೂ ಮುನ್ನ ಸಾವಿರಾರು ಮಂದಿ ಮೈದಾನದಲ್ಲಿ ರೋಹಿತ್, ರೋಹಿತ್ ಹಾಗೂ ಮುಂಬೈ ರಾಜ ಎಂಬ ಮಾತನ್ನು ಕೂಗುತ್ತಿದ್ದರು.
ರೋಹಿತ್ ಶರ್ಮಾಗೆ ಬೌಲಿಂಗ್ ಕೊಡಿ ಎಂದು ಮತ್ತೊಂದು ಗುಂಪು ಆಗ್ರಹಿಸುತ್ತಿತ್ತು. ಆ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕನನ್ನು ನೋಡುವ ಮೂಲಕ ರಾಜಸ್ಥಾನ ಕ್ರಿಕೆಟ್ ಅಭಿಮಾನಿಗಳು ಹರ್ಷಭರಿತರಾದರು. ಅಂದ ಹಾಗೆ ಈ ಪಂದ್ಯವನ್ನು ವೀಕ್ಷಣೆಯು ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ನೀಡಲಾಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳ ನಿರೀಕ್ಷೆಯನ್ನು ರೋಹಿತ್ ಶರ್ಮಾ ಹುಸಿಗೊಳಿಸಲಿಲ್ಲ. ಅವರು ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಮಿಡ್ ವಿಕೆಟ್ ಮೇಲೆ ಪುಲ್ ಶಾಟ್ ಮೂಲಕ ಬೌಂಡರಿ ಬಾರಿಸಿದ್ದರು. ಆ ಮೂಲಕ ಸಿಕ್ಕಿಂ ಬೌಲರ್‌ಗಳಿಗೆ ಭೀತಿ ಹುಟ್ಟಿಸಿದ್ದರು.

ನೋಡಿರಿ

