ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ – ಸರ್ಕಾರಕ್ಕೆ ಎಫ್ಎಸ್ಎಲ್ ವರದಿ ಸಲ್ಲಿಕೆ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಿಧಾನಸೌಧ ಪೊಲೀಸರು ಇಲ್ಲಿಯವರೆಗು ಏಳು ಜನರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ತಿಂಗಳ ಮೊದಲ ದಿನವೇ ಜನರಿಗೆ ಬಿಗ್ಶಾಕ್! – ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 25 ರೂ. ಹೆಚ್ಚಳ
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಪಕ್ಕದಲ್ಲಿ ಇದ್ದ ಬೆಂಬಲಿಗ ಬ್ಯಾಡಗಿ ಮೂಲದ ಮೊಹಮ್ಮದ್ ಶಫಿ ನಾಶಿಪುಡಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಬುಧವಾರ ಬ್ಯಾಡಗಿಗೆ ತೆರಳಿದ್ದ ಪೊಲೀಸರ ತಂಡ, ಮೊಹಮ್ಮೆದ್ ಶಫಿ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು ತಾವು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ. ಏಳು ಮಂದಿ ಪೈಕಿ ಮೂವರ ಧ್ವನಿ ಪರೀಕ್ಷೆ ಮಾಡಿದ ವಿಧಿ ವಿಜ್ಞಾನ ಪ್ರಯೋಗಾಲಯ ತನ್ನ ವರದಿಯನ್ನು ಗೃಹ ಸಚಿವಾಲಯಕ್ಕೆ ನೀಡಿದೆ. ಗುರುವಾರ ಸಂಜೆ ಎಫ್ಎಸ್ಎಲ್ ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು ಯಾವುದೇ ಕ್ಷಣದಲ್ಲಿ ವರದಿ ಮಾಹಿತಿ ಪ್ರಕಟವಾಗುವ ಸಾಧ್ಯತೆಯಿದೆ. ರಾತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಚರ್ಚೆಯಾಗಲಿದೆ.
ಇನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಮೇಲೆ ವಿಧಾನಸೌಧ ಪೊಲೀಸರು 26 ಜನರ ಪಟ್ಟಿ ತಯಾರಿಸಿದ್ದು, ಇನ್ನೂ 19 ಜನರ ವಿಚಾರಣೆ ಬಾಕಿ ಇದೆ.