ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್‌ಐಆರ್‌

ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್‌ಐಆರ್‌

ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯುವತಿಯರ ವಿಡಿಯೋ ಚಿತ್ರೀಕರಿಸಿದ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರಿ ವಿವಾದ ಎಬ್ಬಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

ಉಡುಪಿಯ ನೇತ್ರ  ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕದ್ದುಮುಚ್ಚಿ ಮೊಬೈಲ್ ಫೋನ್ ಇಟ್ಟು ಚಿತ್ರೀಕರಣ ಮಾಡಿದ್ದರು. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿತ್ತು. ಈ ಸಂಬಂಧ ಕಾಲೇಜು ನಿರ್ದೇಶಕಿ ಪತ್ರಿಕಾಗೋಷ್ಠಿ ನಡೆಸಿ ಮೂವರು ವಿದ್ಯಾರ್ಥಿನಿಯರು ತಪ್ಪು ಒಪ್ಪಿಕೊಂಡಿದ್ದಾರೆ. ಮೂವರನ್ನು ಕೂಡಲೇ ಸಸ್ಪೆಂಡ್ ಮಾಡಿದ್ದೇವೆ. ಸಂತ್ರಸ್ತೆ ಯುವತಿ ಭವಿಷ್ಯದ ದೃಷ್ಟಿಯಿಂದ ದೂರು ಕೊಡಲು ಒಪ್ಪಿಲ್ಲ‌ ಎಂದು ಹೇಳಿದ್ದರು.

ಇದನ್ನೂ ಓದಿ: ಕಾಲೇಜು ಶೌಚಗೃಹದಲ್ಲಿ ವಿದ್ಯಾರ್ಥಿನಿ ವಿಡಿಯೋ ಸೆರೆ ಪ್ರಕರಣ – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಈ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ ಪ್ರೇರಿತವಾಗಿ ದೂರು ನೀಡಬೇಕು, ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಗ್ರ ತನಿಖೆಗೆ ಆಗ್ರಹ ವ್ಯಕ್ತವಾದ ಬೆನ್ನಲ್ಲೇ, ಇದೀಗ  ಮಲ್ಪೆ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಿಸಲಾಗಿದೆ. ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಶಬನಾಝ್, ಅಲ್ಫೀಯಾ ಮತ್ತು ಅಲೀಮಾ  ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮಾ ಜಿ.ಬಿ ಅವರು ಸ್ವಯಂ ಪ್ರೇರಿತವಾಗಿ ಎಫ್ ಐಆರ್ ದಾಖಲಿಸಿದ್ದಾರೆ.

ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್‌ ಮಾತನಾಡಿದ್ದು, ಈ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಮೂಲಕ ತನಿಖೆ ನಡೆಸಲಾಗುವುದು. ಈ ಘಟನೆಯ ಬಗ್ಗೆ ಕೂಲಂಕುಶ ತನಿಖೆ ನಡೆಸಲಾಗುವುದು. ಇದು ಅತೀ ಸೂಕ್ಷ್ಮ ವಿಚಾರವಾಗಿದೆ. ಹೆಣ್ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದಾತನ ವಿರುದ್ಧ ದೂರು ದಾಖಲು

ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯುವತಿಯವರ ವಿಡಿಯೋ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ, ಎಡಿಟ್‌ ಮಾಡಿದ ವಿಡಿಯೋವೊಂದು ಯೂಟ್ಯೂಬ್‌ ಚಾನೆಲ್‌ ನಲ್ಲಿ ಆಪ್ಲೋಡ್‌ ಆಗಿದ್ದು, ಇದನ್ನು  ಕಾಲು ಸಿಂಗ್‌ ಚೌಹಣ್‌ ಎನ್ನುವಾತ ಟ್ವಿಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಾನೆ. ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ,  ಕೋಮು ದ್ವೇಷ ಉಂಟು ಮಾಡಿ, ಸೌಹಾರ್ದತೆಗೆ ಭಾದಕವಾಗುವ ಕೃತ್ಯದ ಅಡಿಯಲ್ಲಿ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.

suddiyaana