Watch: ಸೇತುವೆ ಮೇಲೆ ದಟ್ಟ ಮಂಜು – ಚೀನಾದಲ್ಲಿ 200ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ

Watch: ಸೇತುವೆ ಮೇಲೆ ದಟ್ಟ ಮಂಜು – ಚೀನಾದಲ್ಲಿ 200ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ

ಬೀಜಿಂಗ್: ಚೀನಾದ ಸೇತುವೆಯೊಂದರಲ್ಲಿ ಭಾರೀ ಮಂಜಿನಿಂದಾಗಿ ರಸ್ತೆಗಳು ಕಾಣದೇ ನೂರಾರು ವಾಹನಗಳು ಅಪಘಾತಕ್ಕೀಡಾಗಿದ್ದಲ್ಲದೇ ಹತ್ತಾರು ವಾಹನಗಳು ಒಂದರಮೇಲೊಂದು ರಾಶಿ ಬಿದ್ದಿರುವ ಘಟನೆ ಬುಧವಾರ ನಡೆದಿದೆ.

ಚೀನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿ ಸೇತುವೆಯೊಂದರ ಮೇಲೆ ಭಾರಿ ಮಂಜಿನಿಂದಾಗಿ ಸರಣಿ ಅಪಘಾತ ಸಂಭವಿಸಿದೆ. ಕಾರು, ಟ್ರಕ್ ಸೇರಿದಂತೆ ಹಲವಾರು ವಾಹನಗಳು ಅಪಘಾತಕ್ಕೀಡಾಗಿ, ಒಂದಕ್ಕೊಂದು ಅಂಟಿಕೊಂಡು ರಾಶಿ ಬಿದ್ದಿವೆ. ಟ್ರಾಫಿಕ್‌ನಿಂದ ಹೊರಬರಲಾಗದ ಸ್ಥಿತಿಯಿಂದಾಗಿ ಜನರು ಬಾನೆಟ್ ಮೇಲೆ ನಿಂತುಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ತೈವಾನ್ ಪ್ರಜೆಗಳಿಗೆ 1 ವರ್ಷ ಮಿಲಿಟರಿ ಸೇವೆ ಕಡ್ಡಾಯ

ನೂರಾರು ವಾಹನಗಳ ಸರಣಿ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಹಲವರು ವಾಹನಗಳಲ್ಲೇ ಸಿಲುಕಿದ್ದು, ಹೊರ ಬರಲಾರದೆ ಒದ್ದಾಡುತ್ತಿದ್ದಾರೆ. ರಾಶಿ ಬಿದ್ದ ವಾಹನಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಂದಾಜಿನ ಪ್ರಕಾರ, ಸರಣಿ ಅಪಘಾತದಲ್ಲಿ 200ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ ಎನ್ನಲಾಗಿದ್ದು, ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.

ಸ್ಥಳೀಯ ಅಗ್ನಿಶಾಮಕ ಇಲಾಖೆ ತಕ್ಷಣವೇ 11 ಅಗ್ನಿಶಾಮಕ ವಾಹನಗಳು ಹಾಗೂ 66 ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ. ಝೆಂಗ್‌ಝೌನ ಸೇತುವೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

suddiyaana