ಕಂದನಿಗೆ ರಸ್ತೆ ದಾಟಲು ಅಮ್ಮನ ಪಾಠ – ಮರಿಯಾನೆಗೆ ತಾಯಿಯೇ  ಗುರು

ಕಂದನಿಗೆ ರಸ್ತೆ ದಾಟಲು ಅಮ್ಮನ ಪಾಠ – ಮರಿಯಾನೆಗೆ ತಾಯಿಯೇ  ಗುರು

ಮಗುವಿನ ಬೆಳವಣಿಗೆಯ ಪ್ರತೀ ಹಂತದಲ್ಲೂ ಹೆತ್ತವರ ಪಾತ್ರ ಇದ್ದೇ ಇರುತ್ತೆ. ಯಾವುದಾದರೊಂದು ಅಪಾಯವಿದೆ ಎಂಬುವುದು ತಮ್ಮ ಅರಿವಿಗೆ ಬಂದರೆ ಪೋಷಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾಪಾಡುತ್ತಾರೆ. ಅಲ್ಲದೇ ಕಷ್ಟಗಳನ್ನು ಹೇಗೆ ಎದುರಿಸಬೇಕು. ಜೀವನದಲ್ಲಿ ಕಲಿಯಬೇಕಾದ ಪ್ರತಿಯೊಂದು ವಿಚಾರಗಳನ್ನು ಹೆತ್ತವರು ತಮ್ಮ ಮಕ್ಕಳಿಗೆ ಹೇಳಿಕೊಡುತ್ತಾರೆ. ಇದು ಪ್ರಾಣಿಗಳಲ್ಲೂ ಹೊರತಾಗಿಲ್ಲ. ಇತ್ತೀಚೆಗಷ್ಟೇ ಮುಳ್ಳುಹಂದಿಗಳು ತಮ್ಮ ಮರಿಗಳನ್ನು ಚಿರತೆಯಿಂದ ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಆನೆಯೊಂದು ತನ್ನ ಮರಿಯನ್ನು ರಸ್ತೆ ದಾಟಲು ಹೇಳಿಕೊಡುವ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಠಾಣೆಯಲ್ಲಿ ಊಟ ಕದ್ದು ತಿಂದ ನಾಯಿ – ಪೊಲೀಸರು ಏನ್ ಮಾಡಿದ್ರು ಗೊತ್ತಾ?

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಾಣಿಗಳ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾಯಿ ಆನೆ ತನ್ನ ಮರಿಯನ್ನು ರಸ್ತೆ ದಾಟಿಸುವ ದೃಶ್ಯವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಾಡಿನ ನಡುವೆ ಇರುವ ರಸ್ತೆಯ ಪಕ್ಕದಲ್ಲಿ ಆನೆಗಳ ಗುಂಪು  ಇರುತ್ತದೆ. ಈ ಬಳಗದಲ್ಲಿ ಒಂದು ಪುಟಾಣಿ ಆನೆ ಕೂಡಾ ಇದೆ. ತನ್ನ ತಾಯಿಯನ್ನೇ ಹಿಂಬಾಲಿಸುತ್ತಿರುತ್ತದೆ. ಇತ್ತ ತಾಯಿ ಕೂಡಾ ಕಂದನೊಂದಿಗೆ ಎಚ್ಚರಿಕೆಯಿಂದಲೇ ರಸ್ತೆ ದಾಟಿಸುವ ಯತ್ನದಲ್ಲಿರುತ್ತಾಳೆ. ಈ ದೃಶ್ಯದಲ್ಲಿ  ತಾಯಿ ತನ್ನ ಕಂದನಿಗೆ ಸುರಕ್ಷಿತವಾಗಿ ರಸ್ತೆ ದಾಟುವ ಬಗ್ಗೆ ಹೇಳಿಕೊಡುತ್ತಿದ್ದಾಳೆ. ಈ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.

`ತಾಯಿ ಆನೆ ತನ್ನ ಮಗುವಿಗೆ ರಸ್ತೆ ದಾಟುವುದು ಹೇಗೆಂದು ಹೇಳಿಕೊಡುತ್ತಿರುವಂತೆ ಕಾಣುತ್ತಿದೆ’ ಎಂದು ಬರೆದುಕೊಂಡಿರುವ ಸುಪ್ರಿಯಾ ಸಾಹು ಒಂದು ದುಃಖದ ವಾಸ್ತವ ಎಂದೂ ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಸಾಕಷ್ಟು ಮಂದಿ ಇದು ಭಾವನಾತ್ಮಕ ದೃಶ್ಯ ಎಂದು ಬರೆದುಕೊಂಡರೆ, ಇನ್ನೊಂದಷ್ಟು ಮಂದಿ ಅಭಿವೃದ್ಧಿಯ ನಾಗಾಲೋಟದಲ್ಲಿ ವನ್ಯಜೀವಿಗಳು ಎಷ್ಟು ಕಷ್ಟಪಡುತ್ತಿವೆ ಎಂದು ಮರುಕ ವ್ಯಕ್ತಪಡಿಸಿದ್ದಾರೆ.

suddiyaana