ರೈಲಿನ ಬೋಗಿಯಲ್ಲಿ ನೇತಾಡಿದ್ರೆ ಹುಷಾರ್‌! – ಒಳಗೆ ಹೋಗಿ ಅಂತಾ ಪ್ರಯಾಣಿಕರಿಗೆ ನಿಯಮ ಹೇಳಿಕೊಡುತ್ತೆ ಈ ಶ್ವಾನ!

ರೈಲಿನ ಬೋಗಿಯಲ್ಲಿ ನೇತಾಡಿದ್ರೆ ಹುಷಾರ್‌! – ಒಳಗೆ ಹೋಗಿ ಅಂತಾ ಪ್ರಯಾಣಿಕರಿಗೆ ನಿಯಮ ಹೇಳಿಕೊಡುತ್ತೆ ಈ ಶ್ವಾನ!

ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನಗಳು. ಮಾನವರ ಉತ್ತಮ ಸ್ನೇಹಿತ ಶ್ವಾನ ಅಂತಾನೇ ಹೇಳಬಹುದು. ಒಂದು ಬಾರಿ ಊಟ ಹಾಕಿದ್ರೂ ಸಾಕು, ಅವುಗಳು ಕೊನೆವರೆಗೂ ಮರೆಯಲ್ಲ. ಸಾಯುವವರೆಗೂ  ನೆನಪಲ್ಲಿ ಇಟ್ಟುಕೊಳ್ಳುತ್ತವೆ. ಸಾಕಷ್ಟು ಸಂದರ್ಭದಲ್ಲಿ ಶ್ವಾನಗಳು ಮನುಷ್ಯರಿಗೆ ನೆರವಾಗುತ್ತವೆ. ಶ್ವಾನಗಳು ತೋರಿಸುವ ಪ್ರೀತಿ, ಕಾಳಜಿ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಸಾಕ್ಷಿಯಾದ ಸಾಕಷ್ಟು ದೃಶ್ಯಗಳೂ ಸದಾ ನಮಗೆ ಇಂಟರ್‌ನೆಟ್‌ನಲ್ಲಿ ಕಾಣಸಿಗುತ್ತವೆ. ಇದೀಗ ಇಲ್ಲೊಂದು ನಾಯಿ ರೈಲು ಪ್ರಯಾಣಿಕರಿಗೆ ಟ್ರಾಫಿಕ್‌ ನಿಯಮ ಪಾಲನೆಯನ್ನು ಹೇಳಿಕೊಡುತ್ತಿದೆ. ರೈಲಿನ ಬೋಗಿಯಲ್ಲಿ ನೇತಾಡುವ ಪ್ರಯಾಣಿಕರನ್ನು ಒಳಗೆ ಕಳುಹಿಸುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ₹12 ಲಕ್ಷ ಖರ್ಚು ಮಾಡಿ ಶ್ವಾನದಂತೆ ಬದಲಾದ – ನಾಯಿಯಂತೆ ಬದಲಾದ ಮೇಲೆ ಆತನ ಪಾಡು ಅಯ್ಯೋಪಾಪ

ಬೆಳಗ್ಗೆ ಸಂಜೆ ಎಲ್ಲಾ ಸಾರಿಗೆಗಳಲ್ಲೂ ಜನಜಂಗುಳಿ ಇದ್ದೇ ಇರುತ್ತೆ, ಬಸ್‌, ರೈಲಿನಲ್ಲೂ ಜನರು ನೇತಾಡಿಗೊಂಡು ಹೋಗುವುದು ಸಾಮಾನ್ಯ ಅನ್ನುವಂತಾಗಿ ಬಿಟ್ಟಿದೆ. ಲೇಟ್‌ ಆಗುತ್ತೆ ಅನ್ನೋ ಕಾರಣಕ್ಕೆ ಜೀವದ ಹಂಗು ತೊರೆದು ವಾಹನಗಳಲ್ಲಿ ನೇತಾಡಿಕೊಂಡು ಹೋಗುತ್ತಾರೆ. ಹೀಗೆ ಪ್ರಯಾಣಿಕರು ನೇತಾಡುವ ಕಾರಣದಿಂದ ಏನೆಲ್ಲಾ ಅವಾಂತರಗಳು ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದರಿಂದ ಹಲವರು ಕಷ್ಟಕ್ಕೆ ಗುರಿಯಾಗಿದ್ದೂ ಇದೆ. ಆದರೆ, ಇಲ್ಲೊಂದು ಶ್ವಾನ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳುತ್ತಿರುವ ವಿಡಿಯೋವೊಂದು ಭಾರಿ ವೈರಲ್‌ ಆಗುತ್ತಿದೆ.

ರೈಲ್ವೇ ಅಧಿಕಾರಿ ಅನಂತ್ ರೂಪನಗುಡಿ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಲಿಸುತ್ತಿರುವ ರೈಲಿನ ಬೋಗಿಯಲ್ಲಿ ನೇತಾಡುವ ಪ್ರಯಾಣಿಕರನ್ನು ಶ್ವಾನ ಒಳಗೆ ಕಳುಹಿಸುವಂತಹ ದೃಶ್ಯವನ್ನು ಅವರು ಪೋಸ್ಟ್‌ ಮಾಡಿದ್ದಾರೆ. ಇದು ಭಾರಿ ವೈರಲ್‌ ಆಗುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಚಲಿಸುತ್ತಿರುವ ಬೋಗಿಯಲ್ಲಿ ಬಾಗಿಲಿನತ್ತ ಓಡಿ ಬರುವ ಶ್ವಾನ ಅಲ್ಲಿ ನೇತಾಡುತ್ತಿರುವವರನ್ನು ಬಲವಂತವಾಗಿ ಒಳಗೆ ತರಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಸುರಕ್ಷತಾ ದೃಷ್ಟಿಯಿಂದ ಜನರು ಹೀಗೆ ನೇತಾಡುವುದು ಒಳ್ಳೆಯದಲ್ಲ. ಇದೇ ಕಾರಣದಿಂದ ಶ್ವಾನದ ಈ ಕಾರ್ಯ ಗಮನ ಸೆಳೆದಿದೆ. `ಫುಟ್‌ಬೋರ್ಡ್ ಪ್ರಯಾಣದ ವಿರುದ್ಧದ ಅಭಿಯಾನದಲ್ಲಿ ಅತ್ಯುತ್ತಮ ಸಹಕಾರ’ ಎಂಬ ಕ್ಯಾಪ್ಸನ್‌ನೊಂದಿಗೆ ಇವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಹಜವಾಗಿಯೇ ಇಂಟರ್‌ನೆಟ್ ಬಳಕೆದಾರರು ಈ ಶ್ವಾನದ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಒಂದಷ್ಟು ಮಂದಿ ಈ ಶ್ವಾನವನ್ನು ಕೆಲಸಕ್ಕೆ ಸೇರಿಸಿಕೊಳ್ಳಿ ಎಂದೂ ಹೇಳಿಕೊಂಡಿದ್ದಾರೆ. ಕೆಲವರು ಈ ಶ್ವಾನವನ್ನು ಹೀರೋ ಎಂದೂ ಬಣ್ಣಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.

Shwetha M