ಸ್ಯಾಂಡಲ್‌ವುಡ್‌ನ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ನಿಧನರಾಗಿದ್ದಾರೆ. ನಟನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ: ರಾಜಸ್ಥಾನ್ ವಿರುದ್ಧ ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟನಿಗೆ ತಡರಾತ್ರಿ ರಾತ್ರಿ ಏಕಾಏಕಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆತಂದಿದ್ದಾದರೂ ಫಲಕಾರಿಯಾಗದೇ ತಡರಾತ್ರಿ 2:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಪಾರ್ಥಿವ ಶರೀರವನ್ನ ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಬೆಳಗ್ಗೆ 10:30 ರಿಂದ ಸಂಜೆ 4 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಹಿಂದೆ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಟ ಬ್ಯಾಂಕ್ ಜನಾರ್ಧನ್ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ರಂಗಭೂಮಿ ಕಲಾವಿದರು ಯೋಗಕ್ಷೇಮ ವಿಚಾರಿಸಿದ್ದರು. ಇನ್ನು, ಹಾಸ್ಯನಟ ಬ್ಯಾಂಕ್ ಜನಾರ್ಧನ್ ಅವರಿಗೆ ಮೂರನೇ ಬಾರಿ ಹೃದಯಾಘಾತ ಆಗಿತ್ತು ಎಂದು ಹೇಳಲಾಗ್ತಿದೆ.
ನಟ ಬ್ಯಾಂಕ್ ಜನಾರ್ಧನ್ ಅವರು 1948ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದರು. ಬ್ಯಾಂಕ್ ಜನಾರ್ದನ್ ಅವರು ಹೊಳಲ್ಕೆರೆಯಲ್ಲೇ ತಮ್ಮ ಬಾಲ್ಯ ಕಳೆದಿದ್ದರು. ಬಳಿಕ ಅಲ್ಲಿಯೇ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಶಾಲೆ ಹಾಗೂ ಕಾಲೇಜು ದಿನಗಳಲ್ಲೇ ನಾಟಕದ ಗೀಳು ಅಂಟಿಸಿಕೊಂಡಿದ್ದರು. ನಾಟಕಗಳಲ್ಲಿ ಅಭಿನಯ ಮಾಡುತ್ತಾ 1991ರಿಂದ ಸಿನಿಮಾರಂಗದ ಕಡೆ ಮುಖ ಮಾಡಿದ್ದರು. ಬ್ಯಾಂಕ್ ಜನಾರ್ದನ್ ಕನ್ನಡದ ಪ್ರಖ್ಯಾತ ಹಾಸ್ಯನಟರಲ್ಲಿ ಒಬ್ಬರಾಗಿದ್ದಾರೆ.
ಶಂಕರ್‌ನಾಗ್, ಅನಂತ್‌ನಾಗ್, ರವಿಚಂದ್ರನ್, ಜಗ್ಗೇಶ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹೀಗೆ ಘಟಾನುಘಟಿಗಳ ಜೊತೆಗೆ ನಟಿಸಿ ಪ್ರಖ್ಯಾತಿ ಹೊಂದಿದ್ದರು. ನಟ ಬ್ಯಾಂಕ್ ಜನಾರ್ದನ್ ಅಭಿನಯದ ಶ್! ತರ್ಲೆ ನನ್ಮಗ, ಸೂಪರ್ ನನ್ ಮಗ, ಭಂಡ ನನ್ ಗಂಡ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು.
ಈವೆರೆಗೂ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಸಿನಿಮಾ ಮಾತ್ರವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹಾಸ್ಯ ನಟರಾಗಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಇಷ್ಟೇ ಅಲ್ಲದೇ ಪಾಪಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲೂ ನಟಿಸಿದ್ದರು.