ಆಕಾಶದಲ್ಲಿ ಗುರು, ಶುಕ್ರ ಜೋಡಿಯ ಚಮತ್ಕಾರ – ಬರಿಗಣ್ಣಿಗೂ ಕಾಣುತ್ತಿದೆ ಪ್ರಕೃತಿಯ ವಿಸ್ಮಯ!
ಖಗೋಳದಲ್ಲಿ ನಡೆಯುವ ವಿಸ್ಮಯಗಳು ವಿಜ್ಞಾನಲೋಕಕ್ಕೂ ಸವಾಲ್ ಹುಟ್ಟಿಸುತ್ತವೆ. ಸದ್ಯ ಇಂಥದ್ದೇ ಚಕಿತವೊಂದು ಈಗ ಸೌರಮಂಡಲದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಿದೆ. ಪಶ್ಚಿಮ ಆಕಾಶದಲ್ಲಿ ಕೆಲ ದಿನಗಳಿಂದ ಸಂಜೆಯಾಗುತ್ತಿದ್ದಂತೆ ಅಕ್ಕಪಕ್ಕದಲ್ಲಿ ಗುರು ಮತ್ತು ಶುಕ್ರ ಗ್ರಹಗಳು ಹೊಳೆಯುತ್ತಿವೆ.
ಇದನ್ನೂ ಓದಿ : ಹೊಸ ಮೈಲುಗಲ್ಲಿನತ್ತ ಇಸ್ರೋ – ಚಂದ್ರಯಾನ-3ರ ಪ್ರಮುಖ ಎಂಜಿನ್ ಪರೀಕ್ಷೆಯಲ್ಲಿ ಪಾಸ್
ಮಾರ್ಚ್ 1ರಂದು ಈ ಗುರು ಗ್ರಹ ಶುಕ್ರ ಗ್ರಹದ ಅರ್ಧ ಡಿಗ್ರಿ ಸಮೀಪ ಕಾಣಿಸಲಿದೆ. ಬರಿ ಕಣ್ಣಿಗೆ ಕಾಣುವ ಅತಿ ಸುಂದರ ಗ್ರಹಗಳಾದ ಗುರು ಹಾಗೂ ಶುಕ್ರರ ಜೋಡಿ ಆಟ ಆಕಾಶದಲ್ಲಿ ಹೊಸ ಚಿತ್ತಾರ ಮೂಡಿಸಿದೆ. ಇದೊಂದು ಅಪರೂಪದ ವಿದ್ಯಮಾನವಾಗಿದೆ. ಅವುಗಳಲ್ಲೂ ನಾನೇ ಚೆಂದ ವೆಂದು ಹೊಳೆಯುತ್ತಿರುವ ಶುಕ್ರ, ಭೂಮಿಯಿಂದ ಈಗ ಸುಮಾರು 20.5 ಕೋಟಿ ಕಿಮೀ ದೂರದಲ್ಲಿದ್ದರೆ, ಗುರು ಗ್ರಹವೀಗ ಭೂಮಿಯಿಂದ 86 ಕೋಟಿ ಕಿಮೀ ದೂರವಿದೆ. ಗುರು ಗ್ರಹದ ಗಾತ್ರ ಶುಕ್ರನಿಗಿಂತ ಸುಮಾರು 1,400 ಪಟ್ಟು ದೊಡ್ಡದು. ಆದರೂ ಶುಕ್ರ ಫಳಫಳ ಹೊಳೆಯುತ್ತಿದೆ. ಶುಕ್ರ ಹೊಳೆಯಲು ಆ ಗ್ರಹದ ವಾತಾವರಣವೇ ಕಾರಣ. ಸ್ವಯಂಪ್ರಭೆ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ನ ಅಕ್ಸೈಡುಗಳು ಹಾಗೂ ಸಲ್ಫರ್ ಡೈಆಕ್ಸೈಡ್ ನ ತೆಳು ಕವಚ ಸುಮಾರು 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುವುದೇ ಕಾರಣವಾಗಿದೆ.
ಶುಕ್ರ ಆಗಸ್ಟ್ ವರೆಗೂ ಸಂಜೆ ಆಕಾಶದಲ್ಲಿ ಬೇರೆ ಬೇರೆ ಎತ್ತರದಲ್ಲಿ ಹೊಳೆಯಲಿದೆ. ಆದರೆ ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ. ಸಂಜೆಯ ಸೂರ್ಯಾಸ್ತ ಹಾಗೂ ಸೂರ್ಯೋದಯ ಕೆಂಬಣ್ಣದ ಬಣ್ಣ ಈಗ ಅತಿ ಸುಂದರವಾಗಿದ್ದು ಎಲ್ಲರೂ ನೋಡಿ ಆನಂದಿಸಬಹುದು ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.