ಬಾಲ ತುಳಿದ ಸಿಟ್ಟೋ.. ಬಾಲಕನ ಮೇಲೆ ದ್ವೇಷವೋ? – ಹುಡುಕಿಕೊಂಡು ಬಂದು 9 ಬಾರಿ ಕಚ್ಚಿಹೋದ ವಿಷಸರ್ಪ..!
ಹಾವಿನ ದ್ವೇಷ ಹನ್ನೆರಡು ವರುಷ ಅಂತಾರೆ. ಸರ್ಪದ್ವೇಷಕ್ಕೆ ಹೆದರಿದ ಜನ ನಾಗದೋಷ ಪರಿಹಾರಕ್ಕೆ ಪೂಜೆ ಮಾಡಿಸುತ್ತಾರೆ. ಇನ್ನು ಕೆಲವರಿಗೆ ಕನಸಲ್ಲಿ ನಾಗರ ಕಂಡರೂ ಸಾಕು. ಅದೇನೋ ಭಯ. ಆದರೆ, ಇಲ್ಲೊಬ್ಬ ಬಾಲಕನಿದ್ದಾನೆ. ಆತ ಒಂದೇ ಹಾವನ್ನು 9 ಬಾರಿ ಕಂಡಿದ್ದಾನೆ. ಅದೇ ಹಾವು. ಅದೇ ಗೋದಿಬಣ್ಣದ ಸರ್ಪ. ಆ ನಾಗರಹಾವು ಇವನ ಕಣ್ಣಿಗೆ ಮಾತ್ರ ಕಾಣುತ್ತದೆ. ಅಷ್ಟೇ ಅಲ್ಲ, ಹಾವು ಸಿಕ್ಕಾಗಲೆಲ್ಲಾ ಕಚ್ಚದೆ ಬಿಡುವುದೂ ಇಲ್ಲ. ಹಾವು ಕಚ್ಚಿದೆ ಎಂಬ ಗುರುತು ಬಾಲಕನ ಮೈಮೇಲೆ ಇರುತ್ತದೆ. ಜೊತೆಗೆ ಆ ಜಾಗದಲ್ಲಿ ರಕ್ತ ಚಿಮ್ಮಿ ಬರುತ್ತದೆ. ಆದರೆ, ಆ ಗೋದಿ ಬಣ್ಣದ ಸರ್ಪ ಬಾಲಕನಿಗೆ ಬಿಟ್ಟರೆ ಇದುವರೆಗೂ ಯಾರ ಕಣ್ಣಿಗೂ ಬಿದ್ದಿಲ್ಲ.
ಇದನ್ನೂ ಓದಿ: ನಾಗಿನ್ ಡ್ಯಾನ್ಸ್ ಮಾಡುತ್ತಿದ್ದ ವೇಳೆ ನಾಗರಹಾವು ಪ್ರತ್ಯಕ್ಷ! – ಹುಟ್ಟುಹಬ್ಬದಂದೇ ಆಸ್ಪತ್ರೆ ಸೇರಿದ ಯುವಕ!
ಕಲಬುರಗಿ ಚಿತ್ತಾಪುರ ತಾಲೂಕಿನ ಹಲಕರ್ಟಿ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದಲ್ಲಿ ನಡೆಯುತ್ತಿರುವ ಈ ವಿಚಿತ್ರ ಘಟನೆ ಗ್ರಾಮಸ್ಥರನ್ನೇ ಬೆಚ್ಚಿಬೀಳಿಸಿದೆ. ಹಲಕರ್ಟಿ ಗ್ರಾಮದ ವಿಜಯಕುಮಾರ್-ಉಷಾ ದಂಪತಿಯ ಪುತ್ರ ಪ್ರಜ್ವಲ್ ಈಗ ಹೈಸ್ಕೂಲು ಓದುತ್ತಿದ್ದಾನೆ. ಒಂದು ದಿನ ಅಂದರೆ ಜುಲೈ 3ನೇ ತಾರೀಕು ಪ್ರಜ್ವಲ್ ಮನೆ ಹಿಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡಲು ಬಂದಾಗ ಗೊತ್ತಾಗದೇ ಹಾವಿನ ಬಾಲ ತುಳಿದಿದ್ದ. ಆ ಗೋದಿ ಬಣ್ಣದ ಹಾವನ್ನು ಪ್ರಜ್ವಲ್ ನೋಡಿದ್ದಾನೆ. ಬಾಲ ತುಳಿದ ಸಿಟ್ಟೋ ಏನೋ, ಆ ಕ್ಷಣವೇ ಹಾವು ಪ್ರಜ್ವಲ್‌ಗೆ ಕಚ್ಚಿತ್ತು. ತಕ್ಷಣ ಪೋಷಕರು ಪ್ರಜ್ವಲ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು.
ಒಮ್ಮೆ ಕಚ್ಚಿದ ಹಾವು ಪದೇ ಪದೇ ಕಚ್ಚುತ್ತಿತ್ತು..!
ಜುಲೈ 3 ರಂದು ಮೊದಲ ಬಾರಿಗೆ ಕಚ್ಚಿದ ಅದೇ ಹಾವು ಕೇವಲ ಮೂರೇ ದಿನದಲ್ಲಿ ಮತ್ತೆ ಪ್ರಜ್ವಲ್‌ನನ್ನು ಹುಡುಕಿಕೊಂಡು ಬಂದಿದೆ. ಜುಲೈ 6ರಂದು ಪ್ರಜ್ವಲ್ ಆಟವಾಡುತ್ತಿದ್ದಾಗ ಪ್ರತ್ಯಕ್ಷವಾದ ಅದೇ ಹಾವು ಮತ್ತೆ ಕಚ್ಚಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದ ಪ್ರಜ್ವಲ್‌ಗೆ ಏನು ಗೊತ್ತಿತ್ತು. ಆ ಹಾವು ಮತ್ತೆ ತನ್ನ ಹುಡುಕಿ ಬಂದೇ ಬರುತ್ತದೆ ಅನ್ನೋದು. ಜುಲೈ 12ಕ್ಕೆ ಮತ್ತೆ ಅದೇ ಹಾವು ಕಚ್ಚಿದೆ. ಇಷ್ಟಕ್ಕೆ ಬಿಡಲಿಲ್ಲ ಆ ಗೋದಿ ಬಣ್ಣದ ಸರ್ಪ. ಆಗಸ್ಟ್ ನಾಲ್ಕರಂದು ಸೀದಾ ಮನೆಯೊಳಗೆ ಬಂದಿದೆ. ಮಲಗಿದ್ದ ಪ್ರಜ್ವಲ್ ನನ್ನು ಕಚ್ಚಿದೆ. ಪದೇ ಪದೇ ಮಗನಿಗೆ ಹಾವು ಕಚ್ಚುವುದು. ಮತ್ತೆ ಆ ಹಾವು ಮತ್ಯಾರ ಕಣ್ಣಿಗೆ ಬೀಳದೇ ಇರುವುದು ಸಹಜವಾಗಿಯೇ ಹೆತ್ತವರಿಗೆ ಆತಂಕ ತಂದಿದೆ. ಹೀಗಾಗಿ ಪ್ರಜ್ವಲ್ ತಂದೆ ತಾಯಿ ಮಗನನ್ನು ಹಾವಿನಿಂದ ಉಳಿಸಲು ಮನೆಯನ್ನೇ ಬಿಟ್ಟಿದ್ದರು. ಹಲಕರ್ಟಿ ಬಿಟ್ಟು ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದರು. ಆದರೆ, ವಿಚಿತ್ರ ಏನು ಗೊತ್ತಾ.. ಆ ಹಾವು ಇಲ್ಲಿಯೂ ಬಂದು ಪ್ರಜ್ವಲ್‌ಗೆ ಕಚ್ಚಿದೆ. ಕೇವಲ ಎರಡು ತಿಂಗಳಲ್ಲಿ 9 ಬಾರಿ ಪ್ರಜ್ವಲ್‌ಗೆ ಅದೇ ಹಾವು ಕಚ್ಚಿದೆ. 6 ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, 3 ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಎರಡ್ಮೂರು ದಿನದಲ್ಲೆ ಮತ್ತೆ ಹಾವು ಕಡಿಯುತ್ತಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಪ್ರಜ್ವಲ್‌ಗೆ ಚಿಕಿತ್ಸೆ ಮುಂದುವರಿದಿದೆ.
ಮಗನಿಗೆ ಹಾವು ಪದೇ ಪದೇ ಕಚ್ಚುತ್ತಿರುವುದು ನೋಡಿ ಹೆದರಿದ ಪೋಷಕರು ದೇವರ ಮೊರೆಹೋಗಿದ್ದಾರೆ. ತಾಯಮ್ಮ ದೇವಸ್ಥಾನ ಕೂಡಾ ಕಟ್ಟಿಸಿದ್ದಾರೆ. ಇಷ್ಟಾದರೂ ಆ ಹಾವು ಮತ್ತೆ ಪ್ರಜ್ವಲ್‌ನನ್ನು ಕಾಡುತ್ತಿದೆ. ಇದು ವಿಚಿತ್ರವೇ.. ಆದರೆ, ಹಾವು ಕಚ್ಚಿದ್ದು ಮಾತ್ರ ಸತ್ಯವೇ…