ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿಂದು RCB Vs LSG ಫೈಟ್ – ಎಲ್ಲೆಲ್ಲಿ ಸಂಚಾರ ನಿಷೇಧ.. ಬದಲಿ ಮಾರ್ಗಗಳ್ಯಾವುವು?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಬೆಂಗಳೂರು ಹಾಗೂ ಲಕ್ನೋ ವಿರುದ್ಧ ಐಪಿಎಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೆ ಈ ಮ್ಯಾಚ್ ಅತ್ಯಂತ ಮಹತ್ವದ್ದಾಗಿದೆ. ತವರಿನಲ್ಲೇ ಈ ಪಂದ್ಯ ನಡೆಯುತ್ತಿರುವುದರಿಂದ ಬೆಂಗಳೂರು ತಂಡ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿದೆ. ಆರ್ ಸಿಬಿ ಟೀಂಗೆ ಸಪೋರ್ಟ್ ಮಾಡಲು ಸಾಕಷ್ಟು ಅಭಿಮಾನಿಗಳು ಸ್ಟೇಡಿಯಂಗೆ ಲಗ್ಗೆ ಇಡೋದ್ರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ನಗರ ಸಂಚಾರ ಪೊಲೀಸರು ಬದಲಿ ಸಂಚಾರ ಮಾರ್ಗವನ್ನು ತಿಳಿಸಿದ್ದಾರೆ. ಏಪ್ರಿಲ್ 10ರಂದು ಸಂಜೆ 4ರಿಂದ ರಾತ್ರಿ 11 ಗಂಟೆವರೆಗೆ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾಗಲಿದೆ.
ಇದನ್ನೂ ಓದಿ : ವಾಂಖೆಡೆ ಸ್ಟೇಡಿಯಂನಲ್ಲಿ ‘ಧೋನಿ’ ಆಸನ – ವಿಜಯ ಸ್ಮಾರಕ ಉದ್ಘಾಟಿಸಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್
ಐಪಿಎಲ್ 16ನೇ ಸೀಸನ್ನ 15ನೇ ಪಂದ್ಯದಲ್ಲಿ ಇಂದು ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RCB vs LSG) ಮುಖಾಮುಖಿ ಆಗಲಿದೆ. ಪಂದ್ಯ ಹಿನ್ನೆಲೆಯಲ್ಲಿ ಇಂದು ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಮ್ಯೂಸಿಯಂ ರೋಡ್, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್ ರೋಡ್, ಅಂಬೇಡ್ಕರ್ ರಸ್ತೆ, ಟ್ರಿನಿಟಿ ಜಂಕ್ಷನ್, ವಿಟ್ಟಲ್ ಮಲ್ಯ ರಸ್ತೆ, ಎಂಜಿ ರೋಡ್, ರಾಜಭವನ ರಸ್ತೆ, ಕಸ್ತೂರ್ಬಾ ರಸ್ತೆ, ಲ್ಯಾವೆಲ್ಲೆ ರೋಡ್, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ನೃಪತುಂಗ ರಸ್ತೆಯ ಸುತ್ತಮುತ್ತ ವಾಹನಗಳನ್ನ ಪಾರ್ಕ್ ಮಾಡುವಂತಿಲ್ಲ. ಕಂಠೀರವ ಸ್ಟೇಡಿಯಂ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣ, ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ, ಹಳೆ ಕೆಜಿಐಡಿ ಕಟ್ಟಡ, ಕಿಂಗ್ಸ್ ರಸ್ತೆ, ಬಿಆರ್ವಿ ಗ್ರೌಂಡ್ ಸುತ್ತಮುತ್ತ, ಓಲ್ಡ್ ಕೆಜಿಐಡಿ ಬಿಲ್ಡಿಂಗ್ಸಮೀಪ ವಾಹನ ನಿಲುಗಡೆ ಮಾಡಲು ಅವಕಾಶ ನೀಡಲಾಗಿದೆ. ಇನ್ನು, ನಾಯಂಡಹಳ್ಳಿ, ಪಿಇಎಸ್ ವಿಶ್ವವಿದ್ಯಾಲಯ ಮತ್ತು ಕೆರೆಕೋಡಿ ಕಡೆಯಿಂದ ಬರುವ ವಾಹನಗಳನ್ನು ತಾತ್ಕಾಲಿಕವಾಗಿ ಏಕಮುಖ ಮಾರ್ಗವಾಗಿ ಬದಲಾಯಿಸಲಾಗಿದೆ. ನಾಯಂಡಹಳ್ಳಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ವೀರಭದ್ರನಗರ ಸಿಗ್ನಲ್ ದಾಟಿ ಪಿಇಎಸ್ ವಿಶ್ವವಿದ್ಯಾಲಯ ಜಂಕ್ಷನ್ನಲ್ಲಿ ಬಲಕ್ಕೆ ಪ್ರಯಾಣಿಸಲು ಸೂಚಿಸಲಾಗಿದೆ.
ಈಗಾಗಲೇ ಆರ್ಸಿಬಿ 2 ಪಂದ್ಯಗಳನ್ನ ಆಡಿದ್ದು, 1ರಲ್ಲಿ ಗೆದ್ದು ಇನ್ನೊಂದರಲ್ಲಿ ಸೋಲನುಭವಿಸಿದೆ. ಹೀಗಾಗಿ ಇಂದಿನ ಲಕ್ನೋ ವಿರುದ್ಧದ ಪಂದ್ಯ ಬೆಂಗಳೂರು ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಕಳೆದ ಪಂದ್ಯ ಸೋತಿರುವ ಆರ್ಸಿಬಿ ಐಪಿಎಲ್ 2023ರ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದಲ್ಲಿ ಟಾಪ್ 5 ಒಳಗೆ ಬರುವ ಸಾಧ್ಯತೆ ಇದೆ. ಇನ್ನು, ಲಕ್ನೋ ತಂಡದ ವಿರುದ್ಧ ಆರ್ಸಿಬಿಯ ಇಬ್ಬರು ಆಟಗಾರರು ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದೆ. ಜೋಶ್ ಹ್ಯಾಝಲ್ವುಡ್ ಮತ್ತು ವನಿಂದು ಸಹರಂಗ ಕಣಕ್ಕಿಳಿಯುವುದು ಡೌಟ್ ಎನ್ನಲಾಗಿದೆ. ಗಾಯದ ಕಾರಣದಿಂದ ಹ್ಯಾಝಲ್ವುಡ್ ಏ.14ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ. ಇತ್ತ ಕಿವೀಸ್ ಸರಣಿ ಮುಗಿಸಿ ಇಂದು ಹಸರಂಗ ಆರ್ಸಿಬಿ ಪಾಳಯ ಸೇರಲಿದ್ದಾರೆ. ಆದರೆ ಲಕ್ನೋ ವಿರುದ್ಧ ಕಣಕ್ಕಿಳಿಯುವುದು ಅನುಮಾನವಾಗಿದೆ. ಮತ್ತೊಂದೆಡೆ ಆರ್ಸಿಬಿ ತಂಡದಲ್ಲಿ ಇಂದಾದರೂ ಕನ್ನಡಿಗನಿಗೆ ಅವಕಾಶ ಸಿಗುತ್ತದೆಯೇ ಎಂಬ ನಿರೀಕ್ಷೆಯಿದೆ. ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್ ಇಂದು ಲಕ್ನೋ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ. ರಜತ್ ಪಟೆದಾರ್ ಬದಲಿಗೆ ವೈಶಾಖ್ ಅವರನ್ನು ಆಯ್ಕೆ ಮಾಡಲಾಗಿದೆ.