ಏಕಕಾಲಕ್ಕೆ 9 ದೇಶಗಳ ಸಮಯ ತೋರಿಸುತ್ತೆ ಈ ಗಡಿಯಾರ – ಅಯೋಧ್ಯೆ ರಾಮ ಮಂದಿರಕ್ಕೆ ವಿಶೇಷ ಉಡುಗೊರೆ ನೀಡಿದ ತರಕಾರಿ ವ್ಯಾಪಾರಿ

ಏಕಕಾಲಕ್ಕೆ 9 ದೇಶಗಳ ಸಮಯ ತೋರಿಸುತ್ತೆ ಈ ಗಡಿಯಾರ – ಅಯೋಧ್ಯೆ ರಾಮ ಮಂದಿರಕ್ಕೆ ವಿಶೇಷ ಉಡುಗೊರೆ ನೀಡಿದ ತರಕಾರಿ ವ್ಯಾಪಾರಿ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಎಲ್ಲೆಲ್ಲೂ ಶ್ರೀರಾಮ ಜಪ ಆರಂಭವಾಗಿದೆ. ಜನವರಿ 22 ರಂದು ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ದೇಶ ಮತ್ತು ವಿದೇಶಗಳಿಂದ ರಾಮಲಲ್ಲಾಗೆ ಭಕ್ತರು ಕಾಣಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಲಕ್ನೋದ ತರಕಾರಿ ವ್ಯಾಪಾರಿಯೊಬ್ಬರು  ಒಂಬತ್ತು ದೇಶಗಳ ಸಮಯವನ್ನು ಏಕಕಾಲದಲ್ಲಿ ಹೇಳುವ ವಿಶ್ವ ಗಡಿಯಾರವನ್ನು ಸಿದ್ಧಪಡಿಸಿದ್ದು, ಅಯೋಧ್ಯೆಗೆ ನೀಡಲಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಆಧಾರ್ ಕಡ್ಡಾಯ, ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ!

ಹೌದು, ಲಕ್ನೋದಲ್ಲಿ ವಾಸಿಸುವ ಅನಿಲ್ ಕುಮಾರ್ ಸಾಹು ಅವರು ತರಕಾರಿ ವ್ಯಾಪಾರ ಮಾಡುತ್ತಾರೆ. ಅವರು ರಾಮನಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದು, 5 ವರ್ಷಗಳ ಕಠಿಣ ಪರಿಶ್ರಮ ವಹಿಸಿ ಅವರು ಗಡಿಯಾರವನ್ನು ಪ್ರಸ್ತುತಪಡಿಸಿದ್ದಾರೆ. ಭಾರತ ಸರ್ಕಾರದಿಂದ ಪೇಟೆಂಟ್ ಪಡೆದ ನಂತರ, ತರಕಾರಿ ವ್ಯಾಪಾರಿ ಅನೀಲ್ ಈ ವಿಶ್ವ ಗಡಿಯಾರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಶ್ವ ಗಡಿಯಾರವನ್ನು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಇರಿಸಲು ದಾನಿ ವಿನಂತಿಸಿದ್ದಾರೆ. ಚಂಪತ್ ರೈ ಅವರು ಇದನ್ನು ಕರಸೇವಕ ಪುರಂನಲ್ಲಿರುವ ಕಚೇರಿಯಲ್ಲಿ ಸ್ವೀಕರಿಸಿದ್ದಾರೆ‌ ಎಂದು ವರದಿಯಾಗಿದೆ.

ಏಕಕಾಲದಲ್ಲಿ ಒಂಬತ್ತು ದೇಶಗಳ ಸಮಯವನ್ನು ಹೇಳುವ ಗಡಿಯಾರವನ್ನು ತಯಾರಿಸಲಾಗಿದೆ. ಇದನ್ನು ನಿರ್ಮಿಸಲು 5 ವರ್ಷಗಳ ಶ್ರಮ ಬೇಕಾಯಿತು. ಇದಲ್ಲದೇ ಭಾರತ ಸರ್ಕಾರದಿಂದ ಪೇಟೆಂಟ್ ಕೂಡ ಪಡೆದೆ. ಭಾರತವನ್ನು ಹೊರತುಪಡಿಸಿ, ಈ ಗಡಿಯಾರವು ಏಕಕಾಲದಲ್ಲಿ ಮೆಕ್ಸಿಕೊ, ಜಪಾನ್, ಟೋಕಿಯೊ, ದುಬೈ, ವಾಷಿಂಗ್ಟನ್ ಸಮಯವನ್ನು ಹೇಳುತ್ತದೆ ಎಂದು ಅನಿಲ್ ಕುಮಾರ್ ಸಾಹು ಮಾಹಿತಿ ನೀಡಿದ್ದಾರೆ.

ಅನಿಲ್ ಕುಮಾರ್ ಸಾಹು ಅವರು ರಾಮ ಜನ್ಮಭೂಮಿಯಲ್ಲದೆ, ಪ್ರಸಿದ್ದ ಸಿದ್ದ ಪೀಠ ಹನುಮಾನ್ ಗರ್ಹಿ ಮತ್ತು ಅಯೋಧ್ಯೆ ಜಂಕ್ಷನ್​​​ ರೈಲು ನಿಲ್ದಾಣಕ್ಕೂ ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಗಳಿಂದ ಬರುವ ಭಕ್ತರು ಸುಲಭವಾಗಿ ಸಮಯವನ್ನು ನೋಡಬಹುದಾಗಿದೆ.

Shwetha M