ಗಗನಕ್ಕೇರಿದ ತರಕಾರಿ ಬೆಲೆ – ನೂರರ ಗಡಿ ದಾಟಿದ ನುಗ್ಗೆಕಾಯಿ, ಬೀನ್ಸ್
ಬೆಂಗಳೂರು: ಒಂದೆಡೆ ತಾಪಮಾನ ಏರಿಕೆ ಮತ್ತೊಂದೆಡೆ ಇತ್ತೀಚೆಗೆ ಸುರಿದ ಸತತ ಮಳೆಯಿಂದಾಗಿ ತರಕಾರಿ ಮತ್ತು ಸೊಪ್ಪುಗಳ ದರ ಗಗನಕ್ಕೇರಿವೆ. ಟೊಮೇಟೊ ಹೊರತುಪಡಿಸಿ ಇತರ ಎಲ್ಲಾ ಬಗೆಯ ಸೊಪ್ಪು ಮತ್ತು ತರಕಾರಿಗಳ ದರದಲ್ಲಿ ದುಪ್ಪಟ್ಟಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.
ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ತರಕಾರಿ ತರಲು ಮಾರ್ಕೆಟ್ಗೆ ಹೋಗಿದ್ದ ಜನರಿಗೆ ತರಕಾರಿ ಬೆಲೆ ಕೇಳಿ ಶಾಕ್ ಆಗಿದೆ. ಬೀನ್ಸ್ ಬೆಲೆ ಶತಕ ಬಾರಿಸಿದ್ದರೆ, ನುಗ್ಗೆಕಾಯಿರೇಟ್ ಕೂಡ ನೂರರ ಗಡಿ ದಾಟಿದೆ. ಬದನೆಕಾಯಿ ಶತಕದ ಬಳಿ ಬಂದು ನಿಂತಿದೆ. ಅಷ್ಟೇ ಅಲ್ಲ ಸೊಪ್ಪು ತರಕಾರಿ ಬೆಲೆಗಳು ಕೂಡಾ ಗಗನ ಮುಟ್ಟಿವೆ.
ಇದನ್ನೂ ಓದಿ:ನದಿಯಲ್ಲಿ ಬೋಟ್ ಮುಳುಗಿ 103 ಮಂದಿ ಸಾವು – ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಘೋರ ದುರಂತ
ಮಾರುಕಟ್ಟೆಯಲ್ಲಿ ಬೀನ್ಸ್, ನುಗ್ಗೆಕಾಯಿ, ಬದನೆಕಾಯಿ, ಕ್ಯಾರೆಟ್ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಾಗಿದ್ದು ಎಲ್ಲ ತರಕಾರಿ ಬೆಲೆ 50 ರಿಂದ 100ರೂಪಾಯಿ ಮುಟ್ಟಿದೆ. ಕೇವಲ ಈರುಳ್ಳಿ ಮಾತ್ರ ಕೈಗೆಟುಕುತ್ತಿದೆ. ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿರು ಕಾರಣ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಕೆಲ ದಿನಗಳ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿತ್ತು. ಹೀಗಾಗಿ ಇಳುವರಿ ಕಡಿಮೆಯಾಗಿದ್ದು ರಾಜಧಾನಿಗೆ ಪೂರೈಕೆಯಾಗುವ ತರಕಾರಿಗಳ ಬೆಲೆ ಹೆಚ್ಚಾಗಿವೆ. ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ಅಷ್ಟೇ ಅಲ್ಲ, ಹಾಪ್ ಕಾಮ್ಸ್ನಲ್ಲೂ ಕೆಲ ತರಕಾರಿಗಳ ಬೆಲೆ ನೂರರ ಗಡಿ ದಾಟಿದೆ.
ಒಂದು ಕೆಜಿ ಬೀನ್ಸ್ ಹಿಂದೆ 40 ರಿಂದ 50 ರೂಪಾಯಿಗೆ ಸಿಗುತ್ತಿತ್ತು. ಆದರೆ ಈಗ ಬೀನ್ಸ್ ಬೆಲೆ 100 ರ ಗಡಿದಾಟಿದೆ. ಮೈಸೂರು ಬದನೆ 30 ರೂಪಾಯಿಗೆ ಸಿಗುತ್ತಿತ್ತು,ಈಗ 60 ರಿಂದ 80 ರೂಪಾಯಿ ಆಗಿದೆ. ಕ್ಯಾರೆಟ್ 30 ರೂ. ನಿಂದ 60 ರೂಪಾಯಿಗೆ ಏರಿಕೆಯಾಗಿದೆ. ನುಗ್ಗಿಕಾಯಿ 40 ರೂಪಾಯಿ ಇದ್ದಿದ್ದು 100 ರೂಪಾಯಿ ತಲುಪಿದೆ. ತರಕಾರಿ ಮಾತ್ರವಲ್ಲ ಕೊತ್ತಂಬರಿ, ಮೆಂತ್ಯೆ, ಪಾಲಕ್ ಸೇರಿದಂತೆ ಸೊಪ್ಪಿನ ದರಗಳು ಕೂಡಾ ಹೆಚ್ಚಾಗಿವೆ. ಒಟ್ಟಿನಲ್ಲಿಕಳೆದ ವಾರಕ್ಕೆ ಹೋಲಿಸಿದ್ರೆ, ಈ ವಾರ ಶೇಕಡಾ 10 ರಿಂದ 25 ರಷ್ಟು ತರಕಾರಿಗಳ ದರ ದುಪ್ಪಟ್ಟು ಆಗಿದೆ.
ಕಳೆದ ತಿಂಗಳು ಅಧಿಕ ತಾಪಮಾನದಿಂದ ಬೆಳೆಗಳು ಕೈಕೊಟ್ಟಿದ್ದವು. ಹೂವು, ಕಾಯಿಗಳು ಉದುರಿದ್ದವು. ಇದೀಗ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿತ್ತು. ಹೆಚ್ಚು ಮಳೆ ಬಿದ್ದರೆ ಸೊಪ್ಪು-ತರಕಾರಿಗಳು ಕೊಳೆಯುತ್ತದೆ. ಬೇರೆ ತರಕಾರಿಯ ಹೂವು, ಕಾಯಿಗಳು ಉದುರುತ್ತವೆ. ಜತೆಗೆ ಮಳೆಯಿಂದಾಗಿ ತೋಟದಲ್ಲಿ ತರಕಾರಿ ಬಿಡಿಸಲು ಮತ್ತು ಮಾರುಕಟ್ಟೆಗೆ ತರಲೂ ತೊಂದರೆಯಾಗುತ್ತಿದೆ. ಹೀಗಾಗಿ, ಬೆಲೆಗಳು ಏರಿಕೆಯಾಗಿವೆ ಎನ್ನುತ್ತಾರೆ ವ್ಯಾಪಾರಿಗಳು.