ಶಿವಣ್ಣ ರೀ ಎಂಟ್ರಿ ರಿವೀಲ್! – ಯಕ್ಷಲೋಕ ಸೃಷ್ಟಿಸುತ್ತಾರಾ?
ರವಿ ಬಸ್ರೂರು ಶೂಟಿಂಗ್ ಮುಗಿಸಿದ್ರಾ?
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸದ್ಯ ಅಮೇರಿಕದಲ್ಲಿದ್ದಾರೆ. ಇದೀಗ ಶಿವಣ್ಣನ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದೆ ವೀರ ಚಂದ್ರಹಾಸ ಸಿನಿಮಾ ಟೀಮ್. ಇದುವರೆಗೆ ಜಗಮೆಚ್ಚಿದ ಅಣ್ಣನಾಗಿ, ಮಚ್ಚು ಹಿಡಿದ ಜೋಗಿಯಾಗಿ, ಭೈರತಿ ರಣಗಲ್ ನ ಖಡಕ್ ವ್ಯಕ್ತಿಯಾಗಿ, ಹೀಗೆ ಬೇರೆ ಬೇರೆ ರೂಪದಲ್ಲಿ ಶಿವಣ್ಣನ ಪಾತ್ರ ನೋಡಿರೋ ಫ್ಯಾನ್ಸ್ ಮತ್ತೊಂದು ಹೊಸ ಪಾತ್ರದಲ್ಲಿ ಶಿವಣ್ಣನ ನೋಡಲಿದ್ದಾರೆ. ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಯಕ್ಷಗಾನ ಕಲಾವಿದನ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಮುಂದೆ ಮಂಡಿಯೂರಿತಾ ಹಮಾಸ್?
ಸಂಗೀತ ಮಾಂತ್ರಿಕ ರವಿ ಬಸ್ರೂರ್ ಅವರ 12 ವರ್ಷಗಳ ಕನಸು ಈಗ ತೆರೆ ಮೇಲೆ ಬರಲು ರೆಡಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ರೆಡಿಯಾಗಿದೆ ವೀರ ಚಂದ್ರಹಾಸ’ ಸಿನಿಮಾ. ಚಿತ್ರರಂಗದ ಇತಿಹಾಸದಲ್ಲೆ ಮೊಟ್ಟ ಮೊದಲ ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿತೆರೆ ಮೇಲೆ ಬರಲಿದೆ. ಕ್ಯಾನ್ಸರ್ಗೆ ಸರ್ಜರಿ ಆದ ಬಳಿಕ ಶಿವಣ್ಣ ಸದ್ಯ ಅಮೆರಿಕಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೇ ತಿಂಗಳು 26ಕ್ಕೆ ಭಾರತಕ್ಕೆ ಬರಲಿದ್ದಾರೆ. ಶಿವಣ್ಣನ ಆರೋಗ್ಯದ ಬಗ್ಗೆ ಚಿಂತೆಯಲ್ಲಿದ್ದ ಫ್ಯಾನ್ಸ್ ಈಗ ಸಂಭ್ರಮದಲ್ಲಿದ್ದಾರೆ. ಜೊತೆಗೆ ಶಿವಣ್ಣನ ಯಕ್ಷಗಾನ ಗೆಟಪ್ ನೋಡಿ ಫುಲ್ ಖುಷಿಯಾಗಿದ್ದಾರೆ.
ವೀರ ಚಂದ್ರಹಾಸ ಚಿತ್ರವು ನಟ ಶಿವಣ್ಣರ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ. ವೀರ ಚಂದ್ರಹಾಸ ಚಿತ್ರವನ್ನು ರವಿ ಬಸ್ರೂರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನ ರೋಲ್ ಕೂಡಾ ಈಗ ರಿವೀಲ್ ಆಗಿದೆ. ನಾಡ ಪ್ರಭು ಶಿವಪುಟ್ಟ ಸ್ವಾಮಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಲ್ಲರ ಪ್ರೀತಿಯ ಶಿವಣ್ಣ.
ವೀರ ಚಂದ್ರಹಾಸ ಸಿನಿಮಾದಲ್ಲಿ ಕುಂತಲ ಸಾಮ್ರಾಜ್ಯದ ಚಂದ್ರಹಾಸನ ಕಥೆಯಿದೆ. ಇದು ಮಹಾಭಾರತಕ್ಕೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಅನ್ನೋದನ್ನ ಸಿನಿಮಾ ಹೇಳಲಿದ್ದು, ಯಕ್ಷಗಾನದೊಂದಿಗೆ ಐತಿಹಾಸಿಕ ಅಂಶಗಳನ್ನು ಸಂಯೋಜಿಸಲಾಗಿದೆ. ನಟ ಶಿವರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಾಡಪ್ರಭು ಶಿವ ಪುಟ್ಟಸ್ವಾಮಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ನಟ ಶಿವರಾಜ್ಕುಮಾರ್ ಅವರ ನಿಜವಾದ ಹೆಸರು ಕೂಡಾ ನಾಗರಾಜು ಶಿವ ಪುಟ್ಟಸ್ವಾಮಿ ಆಗಿದ್ದು, ಚಿತ್ರಕ್ಕೆ ವೈಯಕ್ತಿಕ ಟಚ್ ನೀಡಲಾಗಿದೆ. ವೀರ ಚಂದ್ರಹಾಸ ಕನಸು ನನಸಾಗಿದೆ. ಚಿತ್ರದಲ್ಲಿ ಶಿವಣ್ಣನ ಪಾತ್ರ ವಿಶೇಷವಾಗಿದೆ. ಯಕ್ಷಗಾನದ ವೇಷಭೂಷಣದಲ್ಲಿ ಶಿವಣ್ಣನ ಲುಕ್ ನೋಡೋದೇ ಚೆಂದ ಎಂದು ಹೇಳಿರುವ ರವಿ ಬಸ್ರೂರು ಕರಾವಳಿಯ ಈ ಕಲೆಗೆ ಶಿವಣ್ಣ ಕೊಟ್ಟಿರುವ ಗೌರವದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಒಂದೆರಡು ತಿಂಗಳ ಹಿಂದೆ, ಚಿಕಿತ್ಸೆಯಲ್ಲಿದ್ದಾಗಲೂ ಶಿವಣ್ಣ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇಂತಹ ಪಾತ್ರಗಳು ಜೀವನದಲ್ಲಿ ಒಮ್ಮೆ ಬರುತ್ತವೆ ಎಂದು ಸ್ವತಃ ಶಿವಣ್ಣನೇ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ಈ ಯಕ್ಷಗಾನದ ಉಡುಗೆಯನ್ನು ಒಂದು ಗಂಟೆ ಧರಿಸಿ ರಂಗಸ್ಥಳದಲ್ಲಿ ಕುಣಿಯುತ್ತಾರೆ. ಜೊತೆಗೆ ಈ ಉಡುಗೆ ಭಾರವಾಗಿರುತ್ತೆ. ಆದರೆ, ಶಿವಣ್ಣ ಬೆಳಿಗ್ಗೆಯಿಂದ ಸಂಜೆ 6:30 ರವರೆಗೆ ವಿರಾಮವಿಲ್ಲದೆ ಈ ಉಡುಗೆಯಲ್ಲೇ ಇದ್ರು. ಜೊತೆಗೆ ಚಿತ್ರೀಕರಣ ಮುಗಿಯುವವರೆಗೂ ಮಧ್ಯಾಹ್ನದ ಊಟವನ್ನು ಸಹ ಮಾಡಲಿಲ್ಲ ಎಂದು ರವಿ ಬಸ್ರೂರು ಶಿವಣ್ಣನ ಬದ್ಧತೆಯನ್ನ ಹಾಡಿಹೊಗಳಿದ್ದಾರೆ. ಇದೀಗ ವೀರ ಚಂದ್ರಹಾಸ ಸಿನಿಮಾದಲ್ಲಿ ನಟ ಶಿವರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ರಿವೀಲ್ ಆಗಿದೆ. ಜೊತೆಗೆ ಚಿತ್ರದ ಬಗೆಗಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.