ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ – ನಿವೃತ್ತಿ ಘೋಷಿಸಿದ ವೇದಾ ಕೃಷ್ಣಮೂರ್ತಿ

ಕರ್ನಾಟಕದ ಹೆಮ್ಮೆಯ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇದಾ ಕೃಷ್ಣಮೂರ್ತಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೆರಿಯರ್‌ಗೆ ಗುಡ್‌ಬೈ ಹೇಳಿದ್ದಾರೆ.
ಇದನ್ನೂ ಓದಿ:ಪೆಟ್ಟು ತಿಂದಲ್ಲೇ ರಿಷಭ್ ಪಂತ್ ಅರ್ಧಶತಕ – ನೋವಲ್ಲೇ ಆಡಿದ್ದರು ಕುಂಬ್ಳೆ, ಸಚಿನ್!
2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವೇದಾ ಕೃಷ್ಣಮೂರ್ತಿ ಕಾಲಿಟ್ಟಿದ್ದರು. 48 ಏಕದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ ವೇದಾ, ಭಾರತ ಮಹಿಳಾ ತಂಡದ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ. ಭಾರತ ಮಹಿಳಾ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಬ್ಯಾಟ್ ಬೀಸುತ್ತಿದ್ದರು.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವೇದಾ, ‘ದೊಡ್ಡ ಕನಸುಗಳನ್ನು ಹೊತ್ತು ಸಣ್ಣ ಪಟ್ಟಣದ ಹುಡುಗಿಯೊಬ್ಬಳು ಹೆಮ್ಮೆಯಿಂದ ಭಾರತೀಯ ತಂಡದ ಜೆರ್ಸಿಯನ್ನು ಧರಿಸುವವರೆಗೆ. ಕ್ರಿಕೆಟ್ ನನಗೆ ನೀಡಿದ ಎಲ್ಲಾ ಪಾಠಗಳು, ಜನರು ಮತ್ತು ನೆನಪುಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಈಗ ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ’ ಎಂದು ಬರೆದುಕೊಂಡಿದ್ದಾರೆ. ವೇದಾ ಕೃಷ್ಣಮೂರ್ತಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. ವೇದಾ 2011 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ 2018 ರವರೆಗೆ ತಂಡದಲ್ಲಿದ ವೇದಾ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಸಹ ಇದೇ ಇಂಗ್ಲೆಂಡ್ ವಿರುದ್ಧ ಆಡಿದ್ದರು. ತಮ್ಮ ವೃತ್ತಿಜೀವನದಲ್ಲಿ ಟೀಂ ಇಂಡಿಯಾ ಪರ 48 ಏಕದಿನ ಪಂದ್ಯಗಳನ್ನಾಡಿರುವ ವೇದಾ, 25.90 ಸರಾಸರಿಯಲ್ಲಿ 829 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿದ್ದು ಅವರ ಅತ್ಯುತ್ತಮ ಸ್ಕೋರ್ 71 ರನ್ ಆಗಿದೆ. ಹಾಗೆಯೇ 76 ಟಿ20 ಪಂದ್ಯಗಳನ್ನಾಡಿರುವ ಅವರು 18.61 ಸರಾಸರಿಯಲ್ಲಿ 875 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದು ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 57 ರನ್ ಆಗಿದೆ. 2020 ರಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡಿದ್ದ ವೇದಾ ಅವರಿಗೆ ಇದೇ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ವೇದಾ ಕೃಷ್ಣಮೂರ್ತಿ ಅವರು 2023 ರಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರನ್ನು ವಿವಾಹವಾದರು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡಿದ್ದ ವೇದಾ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ ಪರ ತಮ್ಮ ಕೊನೆಯ WPL ಪಂದ್ಯವನ್ನು ಆಡಿದ್ದರು.

ನೋಡಿರಿ

