ಕಾಶಿ ವಿಶ್ವನಾಥ ದೇಗುಲದಲ್ಲಿ ಇನ್ಮುಂದೆ ಲಡ್ಡು ಪ್ರಸಾದ ಸಿಗಲ್ಲ – ಯಾಕೆ ಗೊತ್ತಾ?
ವಾರಣಾಸಿ: ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಿರಿಧಾನ್ಯಗಳು ಉತ್ತಮ ಅಂತಾ ಜನರು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಸಿರಿಧಾನ್ಯಗಳನ್ನು ಬಳಕೆ ಮಾಡುವಂತೆ ಉತ್ತೇಜಿಸುತ್ತಿದೆ. ಇದಕ್ಕೆ ಈಗ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲ ಆಡಳಿತ ಮಂಡಳಿ ಕೈ ಜೋಡಿಸಿದ್ದು, ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಪ್ರಸಾದ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ: 12 ಗಂಟೆಗಳ ಅವಧಿಯಲ್ಲೇ 3 ಸಲ ಭೂಕಂಪ – ಉತ್ತರಕಾಶಿ ಬಗ್ಗೆ ತಜ್ಞರು ಕೊಟ್ಟ ಎಚ್ಚರಿಕೆ ಏನು..?
ಇಷ್ಟು ದಿನಗಳ ಕಾಲ ಕಾಶಿ ವಿಶ್ವನಾಥ ದೇವಾಲಯದಲ್ಲಿ ಲಡ್ಡು ಪ್ರಸಾದ ವಿತರಿಸಲಾಗಿತ್ತು. ಸಿರಿಧಾನ್ಯ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ “ಲಡ್ಡು ಪ್ರಸಾದ” ದ ಬದಲಾಗಿ ಇನ್ನುಮುಂದೆ “ಸಿರಿಧಾನ್ಯ ಲಡ್ಡು” ನೀಡಲಾಗುತ್ತದೆ. ಸಿರಿಧಾನ್ಯಗಳನ್ನು ಪ್ರಧಾನಿ ಮೋದಿ ಅವರು “ಶ್ರೀ ಅನ್ನ” ಎಂದು ಇತ್ತೀಚೆಗೆ ಹೆಸರಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ವಾರಣಾಸಿ ಮುಖ್ಯ ಅಭಿವೃದ್ಧಿ ಅಧಿಕಾರಿ ಹಿಮಾಂಶು ನಾಗ್‌ಪಾಲ್, ಉತ್ತರ ಪ್ರದೇಶ ಸರ್ಕಾರದ ಆದೇಶದ ಅನುಸಾರ ಇನ್ನು ಮುಂದೆ ಭಕ್ತಾಧಿಗಳಿಗೆ ಸಿರಿಧಾನ್ಯ ಲಡ್ಡು ನೀಡಲಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು “ಶ್ರೀ ಅನ್ನ” ಪ್ರಸಾದ ತಯಾರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿರಿಧಾನ್ಯ, ಬೆಲ್ಲ, ಎಳ್ಳು, ಗೋಡಂಬಿ, ಬಾದಾಮಿ, ಶುದ್ಧ ತುಪ್ಪ ಮತ್ತು ಖೋವಾದಿಂದ ಪ್ರಸಾದ ತಯಾರಿಸಲಾಗುತ್ತದೆ. ಪ್ರಸಾದದ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಹಿಮಾಂಶು ತಿಳಿಸಿದ್ದಾರೆ.