ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ – ಹಬ್ಬದ ಹಿನ್ನೆಲೆ ಏನು? ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ – ಹಬ್ಬದ ಹಿನ್ನೆಲೆ ಏನು? ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಶ್ರಾವಣ ಮಾಸ ಬಂತು ಅಂದ್ರೆ ಸಾಕು. ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಹೆಂಗೆಳೆಯರಿಗಂತೂ ಹೊಸಬಟ್ಟೆ ಖರೀದಿ, ದಿನದಿನವೂ ಮನೆಯಲ್ಲಿ ವಿಶೇಷ ಪೂಜೆ, ರುಚಿ ರುಚಿ ಖಾದ್ಯಗಳ ತಯಾರಿಕೆ ಎಂದು ಸಂಭ್ರಮವೋ ಸಂಭ್ರಮ. ಪ್ರತಿವರ್ಷ ಶ್ರವಣ ಮಾಸದ ಶುಕ್ಲ ಪಕ್ಷದ (ಇಂದು) ಎರಡನೇ ಶುಕ್ರವಾರದಂದು ದೇಶದಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮೀ ಹಬ್ಬ ಹೆಸರೇ ಸೂಚಿಸುವಂತೆ ಇದು ಲಕ್ಷ್ಮೀ ದೇವಿಯನ್ನು ಪೂಜಿಸುವ, ಆರಾಧಿಸುವ ದಿನ. ಹಬ್ಬಗಳಲ್ಲೇ ವರಮಹಾಲಕ್ಷ್ಮೀ ಹಬ್ಬ ಎಂದರೆ ಗೃಹಿಣಿಯರಿಗೆ ಒಂದು ರೀತಿಯ ಸಂಭ್ರಮ. ಹಲವಾರು ನಾಮಗಳಿಂದ ಕರೆಯಲ್ಪಡುವ ಲಕ್ಷ್ಮೀಯನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ವ್ರತ ಆಚರಿಸಿ ಪೂಜಿಸುವುದರಿಂದ  ಲಕ್ಷ್ಮೀಯು ಸಂತೃಪ್ತಳಾಗಿ ಭಕ್ತರ ಬಯಕೆಗಳನ್ನು ಈಡೇರಿಸುತ್ತಾಳೆ ಮತ್ತು ತನ್ನ ಭಕ್ತರಿಗೆ ಉತ್ತಮ ಸಂಪತ್ತನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿಯೇ ವರಮಹಾಲಕ್ಷ್ಮೀ ಹಬ್ಬ ದಕ್ಷಿಣ ಭಾರತೀಯರಿಗೆ ಅದರಲ್ಲಿಯೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಪ್ರಮುಖ ಆಚರಣೆಯಾಗಿದೆ. ಅಷ್ಟಕ್ಕೂ ಈ ಹಬ್ಬದ ವೈಶಿಷ್ಟ್ಯವೇನು? ವರಮಹಾಲಕ್ಷ್ಮೀ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ ಎಂಬುವುದರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ..

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಏನು?

ಪುರಾಣಗಳ ಪ್ರಕಾರ ಲಕ್ಷ್ಮೀಯು ಕ್ಷೀರ ಸಾಗರದಿಂದ ಅವತಾರ ತಾಳಿದಳು ಎಂದು ಹೇಳಲಾಗುತ್ತದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸಕಿಯ ಸಹಾಯದೊಂದಿಗೆ ಮಂದರ ಕಡಿಯುತ್ತಿರುವಾಗ ಕ್ಷೀರ ಸಾಗರದಲ್ಲಿ ಪರಿಶುದ್ಧವಾಗಿ ಶ್ವೇತ ವರ್ಣದಲ್ಲಿ ಲಕ್ಷ್ಮೀ ಉದ್ಭವಿಸಿದಳೆಂದು ಹೇಳಲಾಗುತ್ತದೆ. ಹಾಗಾಗಿ ಈ ವರಮಹಾ ಲಕ್ಷ್ಮೀಯ ದಿನ ತಾಯಿಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಈ ವರಮಹಾಲಕ್ಷ್ಮೀ ಹಬ್ಬವನ್ನು ಯಾರು ಬಹಳ ನಿಷ್ಠೆಯಿಂದ ಮಾಡುವರೋ ಅವರಿಗೆ ಹಾಗೂ ಅವರ ಕುಟುಂಬದವರೆಲ್ಲರಿಗೂ ಒಳಿತಾಗುವುದು. ಹೀಗಾಗಿ ನಮ್ಮ ಪೂರ್ವಿಕರು ಹೇಳುವ ಹಾಗೆ ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀ ತಾಂಡವವಾಡುತ್ತಾಳೆ.

ಇನ್ನು ಈ ಆಚರಣೆಗೆ ಇನ್ನೊಂದು ಕಥೆ ಇದೆ. ಚಾರುಮತಿ ಎಂಬ ಮಹಿಳೆಯ ಕಥೆ ಈ ಪೂಜೆಗೆ ಪ್ರೇರಣೆಯಾಗಿದೆ. ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಲ್ಲಿ ಒಂದು ಬೇಡಿಕೆ ಇಟ್ಟಳಂತೆ. ವಿವಾಹವಾದ ಬಳಿಕ ಓರ್ವ ಮಹಿಳೆ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೇಗೆ ಪಡೆಯಬಹುದು? ಅಂದರೆ ಪತಿಯ ಪ್ರೇಮ, ಮಕ್ಕಳ ಸುಖ, ಮೊಮ್ಮಕ್ಕಳ ಸುಖ ಮತ್ತು ಸಾಕಷ್ಟು ಧನಸಂಪತ್ತು ಎಲ್ಲವನ್ನೂ ಹೇಗೆ ಪಡೆಯುವುದು ಎಂದು ಕೇಳಿದಳಂತೆ. ಅದಕ್ಕೆ ಉತ್ತರಿಸಿದ ಶಿವ ಯಾವ ಸಾಧ್ವಿ ವರಮಹಾಲಕ್ಷ್ಮಿಪೂಜೆಯನ್ನು ನೆರವೇರಿಸುತ್ತಾಳೆಯೋ ಆಕೆಗೆ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತವೆ ಎಂದು ಹೇಳಿ ಚಾರುಮತಿಯ ಕಥೆಯನ್ನು ಪ್ರಾರಂಭಿಸಿದನಂತೆ.

ಮಗಧರಾಜ್ಯದಲ್ಲಿ ಚಾರುಮತಿ ಎಂಬ ಅತಿ ದೈವಭಕ್ತೆಯುಳ್ಳ ಮಹಿಳೆಯೊಬ್ಬಳಿದ್ದಳು. ತನ್ನ ಸದ್ಗುಣಗಳಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಆದರ್ಶ ಸತಿ, ಸೊಸೆ ಮತ್ತು ತಾಯಿಯ ಪಾತ್ರವನ್ನು ಅತಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಳು. ಈಕೆಯ ಗುಣದಿಂದ ಪ್ರಸನ್ನಳಾದ ದೇವತೆ ಲಕ್ಷ್ಮೀ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ತನ್ನನ್ನು ಪೂಜಿಸುವಂತೆ ತಿಳಿಸಿ, ಒಂದು ವೇಳೆ ಈ ಪೂಜೆ ಪರಿಪೂರ್ಣವಾದರೆ ಆಕೆಗೆ ಜೀವನದಲ್ಲಿ ಏನು ಬೇಕೋ ಅವೆಲ್ಲಾ ಸಿಗುವ ವರ ನೀಡುತ್ತೇನೆ ಎಂದು ವಾಗ್ಧಾನ ನೀಡಿದಳು. ಈ ಕೋರಿಕೆಯನ್ನು ಪರಿಪೂರ್ಣವಾಗಿ ನೆರವೇರಿಸಿದ ಚಾರುಮತಿ ತನ್ನೊಂದಿಗೆ ತನ್ನ ನೆರೆಹೊರೆಯ ಮತ್ತು ಆಪ್ತರನ್ನೂ ಸೇರಿಸಿಕೊಂಡಳು. ಪೂಜೆ ಪೂರ್ಣವಾದ ಬಳಿಕ ಆಕೆಯ ಜೊತೆಗಿದ್ದ ಎಲ್ಲಾ ಮಹಿಳೆಯರ ಮೈ ಮೇಲೆ ಬಂಗಾರದ ಆಭರಣಗಳು ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಅವರ ಮನೆಗಳೂ ಚಿನ್ನದ್ದಾದವು. ಈ ಎಲ್ಲಾ ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಪೂಜೆಯನ್ನು ನೆರವೇರಿಸುತ್ತಾ ಉತ್ತಮ ಜೀವನವನ್ನು ಪಡೆದರು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗೃಹಿಣಿಯರು ಈ ವ್ರತಾಚರಣೆ ಮಾಡುತ್ತಾ ಬಂದಿದ್ದಾರೆ.

ವ್ರತಕ್ಕೆ ಸಿದ್ಧತೆ ಹೇಗೆ?

ಶ್ರಾವಣ ಹುಣ್ಣಿಮೆಗೂ ಎರಡನೇ ಶುಕ್ರವಾರದಂದು ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ ದೇವರ ಕೋಣೆಯನ್ನು ಶುದ್ಧೀಕರಿಸಬೇಕು. ರಂಗೋಲಿ ಬಿಡಿಸಿ, ನಂತರ ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ(ಕೆಲವೆಡೆ ಸ್ಟೀಲ್ ಅನ್ನೂ ಉಪಯೋಗಿಸುತ್ತಾರೆ) ಕಳಶ ಇಡಬೇಕು. ಕಳಶದಲ್ಲಿ ನೀರನ್ನು ತುಂಬಿ ಅದಕ್ಕೆ ಸ್ವಲ್ಪ ಒಣದ್ರಾಕ್ಷಿ, ಖರ್ಜೂರಗಳನ್ನು ಹಾಕಬೇಕು. ಕಳಶದಲ್ಲಿ ಮಾವಿನ ಎಲೆ ಮತ್ತು ವೀಳ್ಯದೆಲೆಗಳನ್ನು ಜೋಡಿಸಿ, ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನ ಕಾಯಿಯನ್ನು ಇಡಬೇಕು. ಕೆಲವರು ಆ ತೆಂಗಿನ ಕಾಯಿಯನ್ನೇ ದೇವಿಯ ರೂಪದಲ್ಲಿ ಚಿತ್ರಿಸುತ್ತಾರೆ.

ಅರಿಶಿನ ಮೆತ್ತಿ, ದೇವಿಯ ಆಕಾರ ಬರೆದ ಕಳಶಕ್ಕೆ ಸೀರೆ ಉಡಿಸುವುದು ಮತ್ತೊಂದು ಕ್ರಿಯಾಶೀಲ ಕೆಲಸ. ಈ ಹಬ್ಬದ ಅಲಂಕಾರಕ್ಕೆ ಎಷ್ಟೋ ಜನ ಸಾಕಷ್ಟು ಮಹತ್ವ ಕೊಡುತ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಅಲಂಕಾರ ನಡೆಯುತ್ತಿದೆ. ಕೆಲವರು ದುಬಾರಿ ಸೀರೆ ಉಡಿಸಿದರೆ, ಕೆಲವರು ಸಾಧಾರಣ ಸೀರೆ ಉಡಿಸುತ್ತಾರೆ. ದೇವಿಗೆ ಬೇಕಾಗಿರುವುದು ಶ್ರದ್ಧೆಯಷ್ಟೆ!

ಪೂಜೆ ಮಾಡುವುದು ಹೇಗೆ?

ಯಾವುದೇ ಶುಭಕಾರ್ಯಕ್ಕೂ ಮುನ್ನ ವಿಘ್ನನಾಶಕ ಗಣಪತಿಯ ಆರಾಧನೆ ಸಂಪ್ರದಾಯ. ಅಂತೆಯೇ ಗಣೇಶನನ್ನು ಆರಾಧಿಸಿ, ನಂತರ ಭಕ್ತಿಯಿಂದ ದೇವಿಯನ್ನು ಧ್ಯಾನಿಸುತ್ತ ಪೂಜೆ ಆರಂಭಿಸಲಾಗುತ್ತದೆ. ದೇವಿ ಬಿಲ್ವ ವೃಕ್ಷದಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿ ಇರುವುದರಿಂದ ಬಿಲ್ವ ಪತ್ರೆ ಶ್ರೇಷ್ಠ, ಜೊತೆಗೆ ಹೂವುಗಳನ್ನು ಬಳಸಿ ದೇವಿಯನ್ನು ಅಲಂಕರಿಸಲಾಗುತ್ತದೆ. ಕುಂಕುಮಾರ್ಚನೆಯೊಂದಿಗೆ ಲಕ್ಷ್ಮಿ ದೇವಿಯ ಆವಾಹನೆ ಮಾಡಲಾಗುತ್ತದೆ. ನಂತರ ಹನ್ನೆರಡು ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ, ಆನಂತರ ಆ ದಾರವನ್ನು ಸುಮಂಗಲಿಯರು ಕೈಗೆ ಕಂಕಣದಂತೆ ಕಟ್ಟಿಕೊಳ್ಳುವ ರೂಡಿ ಇದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಒಂಬತ್ತು ವರ್ಷಗಳ ಕಾಲ ಸತತವಾಗಿ ಮಾಡುವುದರಿಂದ ಫಲಲಭಿಸುತ್ತದೆ ಎಂಬ ನಂಬಿಕೆ ಇದೆ.

ಬೆಲ್ಲ-ತುಪ್ಪದ ತಿನಿಸು ಶ್ರೇಷ್ಠ ಈ ದಿನ ಬೆಲ್ಲ ಮತ್ತು ತುಪ್ಪದಿಂದ ತಯಾರಿಸಿದ ತಿನಿಸು ಶ್ರೇಷ್ಠ. ಹಬ್ಬ ಮುಗಿದ ನಂತರ ದಾನ-ಧರ್ಮ ಮಾಡುವುದು ಮತ್ತು ಒಂದಷ್ಟು ಜನರಿಗೆ ಊಟ ಹಾಕಿಸುವುದು ಶ್ರೇಷ್ಠ. ಹಿರಿಯ ಮುತ್ತೈದೆಯರಿಗೆ ಬಾಗಿನ ನೀಡುವುದರಿಂದ ಸಮೃದ್ಧಿ ಪ್ರಾಪ್ತಿಸುತ್ತದೆ ಎಂಬ ನಂಬಿಕೆ ಇದೆ. ಈ ವ್ರತದಲ್ಲಿ ಲಕ್ಷ್ಮಿ ಮತ್ತು ನಾರಾಯಣ ಇಬ್ಬರನ್ನೂ ಪೂಜಿಸಿದರೆ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ.

suddiyaana