ಕಾಂಗ್ರೆಸ್ ಮತ್ತು ನೆಹರು ವಂದೇ ಮಾತರಂಗೆ ಅನ್ಯಾಯ ಮಾಡಿದರು – ಲೋಕಸಭೆಯಲ್ಲಿ ಗುಡುಗಿದ ನರೇಂದ್ರ ಮೋದಿ

ಕಾಂಗ್ರೆಸ್ ಮತ್ತು ನೆಹರು ವಂದೇ ಮಾತರಂಗೆ ಅನ್ಯಾಯ ಮಾಡಿದರು –  ಲೋಕಸಭೆಯಲ್ಲಿ ಗುಡುಗಿದ ನರೇಂದ್ರ ಮೋದಿ

ಲೋಕಸಭೆಯಲ್ಲಿ ಸೋಮವಾರ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ಚರ್ಚೆ ಪ್ರಧಾನಿ ಮೋದಿ ಒಂದು ಗಂಟೆಗಳ ಕಾಲ ಮಾತನಾಡಿದ್ರು.  ತಮ್ಮ ಒಂದು ಗಂಟೆಯ ಭಾಷಣದಲ್ಲಿ, “ವಂದೇ ಮಾತರಂ ಬ್ರಿಟಿಷರಿಗೆ ಸೂಕ್ತ ಉತ್ತರವಾಗಿತ್ತು; ಈ ಘೋಷಣೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿದೆ. ಸ್ವಾತಂತ್ರ್ಯದ ಸಮಯದಲ್ಲಿ ಮಹಾತ್ಮ ಗಾಂಧಿಯವರು ಕೂಡ ಇದನ್ನು ಇಷ್ಟಪಟ್ಟಿದ್ದರು. ಅವರು ಈ ಹಾಡನ್ನು ರಾಷ್ಟ್ರಗೀತೆಯಾಗಿ ನೋಡಿದರು ಎಂದು ಹೇಳಿದರು.ಈ ಹಾಡು ತಮಗೆ ಅಪಾರ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಹಾಗಿದ್ದಲ್ಲಿ ಕಳೆದ ದಶಕಗಳಲ್ಲಿ ಈ ಗೀತೆ ಅನ್ಯಾಯ ಅನುಭವಿಸಿದ್ದು ಏಕೆ? ವಂದೇ ಮಾತರಂಗೆ ಏಕೆ ದ್ರೋಹ ಬಗೆದರು? ಪೂಜ್ಯ ಬಾಪು ಅವರ ಭಾವನೆಗಳನ್ನು ಸಹ ಮೀರಿಸಿದ್ದ ಆ ಶಕ್ತಿ ಯಾವುದು? ಎಂದು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದರು.

1936 ಅಕ್ಟೋಬರ್ 15 ರಂದು ಲಕ್ನೋದಿಂದ ಮೊಹಮ್ಮದ್ ಅಲಿ ಜಿನ್ನಾ ವಂದೇ ಮಾತರಂ ವಿರುದ್ಧ ಘೋಷಣೆ ಕೂಗಿದರು. ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಅವರು ತಮ್ಮ ಸಿಂಹಾಸನ ಅಲುಗಾಡುವುದನ್ನು ಮೊದಲ ಬಾರಿಗೆ ನೋಡಿದರು ಎಂದು ಮೋದಿ ಹೇಳಿದ್ದಾರೆ. ಮುಸ್ಲಿಂ ಲೀಗ್‌ನ ಆಧಾರರಹಿತ ಹೇಳಿಕೆಗಳಿಗೆ ನೆಹರೂ ಸೂಕ್ತ ಉತ್ತರ ನೀಡುವ ಮತ್ತು ಅವುಗಳನ್ನು ಖಂಡಿಸುವ ಬದಲು, ಇದಕ್ಕೆ ವಿರುದ್ಧವಾಗಿರುವುದನ್ನೇ ಮಾಡಿದರು ಎಂದು ಪ್ರಧಾನಿ ಹೇಳಿದರು. ಅವರು ವಂದೇ ಮಾತರಂ ಬಗ್ಗೆಯೇ ತನಿಖೆ ನಡೆಸಲು ಪ್ರಾರಂಭಿಸಿದರು.

ಇದನ್ನೂ ಓದಿ: 200ಕ್ಕೂ ಹೆಚ್ಚು ರೈತರನ್ನ ಬಲಿ ಪಡೆದಿದ್ದೇ ನಿಮ್ಮ ಕೊಡುಗೆ – ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಗುಡುಗು

ದೇಶದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ಮತ್ತು ಸ್ಫೂರ್ತಿ ನೀಡಿದ ಮತ್ತು ತ್ಯಾಗ ಮತ್ತು ತಪಸ್ಸಿನ ಮಾರ್ಗವನ್ನು ತೋರಿಸಿದ ಮಂತ್ರ, ಘೋಷಣೆಯಾದ ವಂದೇ ಮಾತರಂ ಅನ್ನು ಸ್ಮರಿಸುವುದು ಈ ಸದನದ ನಮಗೆಲ್ಲರಿಗೂ ಒಂದು ದೊಡ್ಡ ಸೌಭಾಗ್ಯ ಎಂದ್ರು.  ಇನ್ನೂ ಒಂದು ಗಂಟೆಯ ಭಾಷಣದಲ್ಲಿ ಪ್ರಧಾನಿ ಮೋದಿ, ವಂದೇ ಮಾತರಂ ಶಬ್ದವನ್ನು 121 ಬಾರಿ, ದೇಶ 50 ಬಾರಿ, ಭಾರತ 35 ಬಾರಿ, ಬ್ರಿಟಿಷರನ್ನು 34 ಬಾರಿ, ಬಂಗಾಳವನ್ನು 17 ಬಾರಿ ಮತ್ತು ಕಾಂಗ್ರೆಸ್ ಅನ್ನು 13 ಬಾರಿ ಉಲ್ಲೇಖಿಸಿದ್ದಾರೆ. ವಂದೇ ಮಾತರಂನ ಲೇಖಕ ಬಂಕಿಮ್ ಚಂದ್ರ ಚಟರ್ಜಿಯನ್ನು 10 ಬಾರಿ, ನೆಹರುವನ್ನು 7 ಬಾರಿ, ಮಹಾತ್ಮ ಗಾಂಧಿಯನ್ನು 6 ಬಾರಿ, ಮುಸ್ಲಿಂ ಲೀಗ್ ಅನ್ನು 5 ಬಾರಿ, ಜಿನ್ನಾವನ್ನು 3 ಬಾರಿ, ಸಂವಿಧಾನವನ್ನು 3 ಬಾರಿ, ಮುಸ್ಲಿಮರನ್ನು 2 ಬಾರಿ ಮತ್ತು ತುಷ್ಟೀಕರಣವನ್ನು 3 ಬಾರಿ ಅವರು ಉಲ್ಲೇಖಿಸಿದ್ದಾರೆ.

1905 ರಲ್ಲಿ ಮಹಾತ್ಮ ಗಾಂಧಿಯವರು ರಾಷ್ಟ್ರಗೀತೆಯಾಗಿ ಕಂಡ ವಂದೇ ಮಾತರಂ ತುಂಬಾ ಶ್ರೇಷ್ಠವಾಗಿತ್ತು, ಅದರ ಭಾವನೆ ತುಂಬಾ ಶ್ರೇಷ್ಠವಾಗಿತ್ತು, ಹಾಗಾದರೆ ಕಳೆದ ಶತಮಾನದಲ್ಲಿ ಅದಕ್ಕೆ ಇಷ್ಟೊಂದು ದೊಡ್ಡ ಅನ್ಯಾಯ ಏಕೆ ಮಾಡಲಾಯಿತು? ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ವಂದೇ ಮಾತರಂಗೆ ಏಕೆ ದ್ರೋಹ ಬಗೆದರು? ವಂದೇ ಮಾತರಂನಂತಹ ಪವಿತ್ರ ಭಾವನೆಯನ್ನು ವಿವಾದಗಳಿಗೆ ಎಳೆದ, ಪೂಜ್ಯ ಬಾಪು ಅವರ ಭಾವನೆಗಳನ್ನು ಮೀರಿಸಿದ ಆ ಶಕ್ತಿ ಯಾವುದು?’ ಎಂದು ಪ್ರಶ್ನಿಸಿದರು.

 

Kishor KV