ವೈಭವ್‌ಗೆ ವಯಸ್ಸೇ ಮುಳುವಾಯ್ತಾ? ಟೀಂ ಇಂಡಿಯಾದಲ್ಲಿ ಸಿಗಲ್ವಾ ಚಾನ್ಸ್!?
ಸೂರ್ಯವಂಶಿಗೆ ICC ಅಗ್ನಿಪರೀಕ್ಷೆ!!

ವೈಭವ್‌ಗೆ ವಯಸ್ಸೇ ಮುಳುವಾಯ್ತಾ?   ಟೀಂ ಇಂಡಿಯಾದಲ್ಲಿ ಸಿಗಲ್ವಾ ಚಾನ್ಸ್!?ಸೂರ್ಯವಂಶಿಗೆ ICC ಅಗ್ನಿಪರೀಕ್ಷೆ!!

ಆರ್‌ಆರ್‌ ಪರ ಸ್ಪೋಟಕ ಸೆಂಚುರಿ ಸಿಡಿಸಿ ವೈಭವ್ ಸೂರ್ಯವಂಶಿ ಕ್ರಿಕೆಟ್​ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.  ಅನುಭವಿ ವೇಗಿಗಳನ್ನೇ ಲೀಲಾಜಾಲವಾಗಿ ಎದುರಿಸಿರುವ 14 ವರ್ಷದ ಯುವ ದಾಂಡಿಗ ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕನಸು ಕಟ್ಟಿಕೊಂಡಿದ್ದಾರೆ. ಇಂತಹದೊಂದು ಪ್ರದರ್ಶನ ಮುಂದುವರೆದರೆ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವೇನಲ್ಲ. ಆದರೆ ಅದು ಸದ್ಯಕ್ಕೆ ಸಾಧ್ಯವಾಗುವುದು ಡೌಟ್‌..

ವೈಭವ್ ಸೂರ್ಯವಂಶಿಗೆ ಈಗ 14 ವರ್ಷ. ಐಸಿಸಿ ನಿಯಮದ ಪ್ರಕಾರ ರಾಷ್ಟ್ರೀಯ ತಂಡದ ಪರ ಆಡುವ ಆಟಗಾರನಿಗೆ ಕನಿಷ್ಠ 15 ವರ್ಷ ತುಂಬಿರಬೇಕು. 2020 ರಲ್ಲಿ, ಐಸಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕನಿಷ್ಠ ವಯಸ್ಸಿನ ನಿಯಮವನ್ನು ರೂಪಿಸಿದೆ. ಈ ನಿಯಮದ ಪ್ರಕಾರವಷ್ಟೇ ರಾಷ್ಟ್ರೀಯ ಆಟಗಾರರ ಆಯ್ಕೆ ನಡೆಯುತ್ತದೆ. ವೈಭವ್ ಸೂರ್ಯವಂಶಿ ಅವರ  ಪ್ರಸ್ತುತ ವಯಸ್ಸು 14 ವರ್ಷ. ಅಂದರೆ ಮುಂದಿನ ವರ್ಷ ಮಾರ್ಚ್ 27 ರಂದು ಅವರಿಗೆ 15 ವರ್ಷ ತುಂಬಲಿದೆ. ಅ ಬಳಿಕವಷ್ಟೇ ಅವರು ರಾಷ್ಟ್ರೀಯ ತಂಡದ ಆಯ್ಕೆಗೆ ಅರ್ಹರಾಗಲಿದ್ದಾರೆ. ಈ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಕನಿಷ್ಠ ವಯೋಮಿತಿ ಇರಲಿಲ್ಲ. ಇದರಿಂದಾಗಿ ಪಾಕಿಸ್ತಾನದ ಹಸನ್ ರಾಜಾ ಕೇವಲ 14 ವರ್ಷ  227 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಈ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎನ್ನಬಹುದು.

14ನೇ ವಯಸ್ಸಿನಲ್ಲಿ ಆಡಬೇಕೆಂದರೆ ಏನು ಮಾಡಬೇಕು?

 ಒಂದು ವೇಳೆ ಬಿಸಿಸಿಐ ಮನಸ್ಸು ಮಾಡಿದರೆ, ವೈಭವ್ ಸೂರ್ಯವಂಶಿ ಅವರನ್ನು 14ನೇ ವಯಸ್ಸಿನಲ್ಲೇ ಕಣಕ್ಕಿಳಿಸಬಹುದು. ಏಕೆಂದರೆ ಐಸಿಸಿ ವಯೋಮಿತಿಯ ನಿಯಮಗಳಲ್ಲಿ ಒಂದು ನಿಬಂಧನೆ ಇದ್ದು, ಈ ನಿಬಂಧನೆಯ ಮೂಲಕ ಆಯ್ಕೆಗೆ ಅರ್ಹತೆ ಪಡೆಯಬಹುದು. ಇದಕ್ಕಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಬೇಕಾಗುತ್ತದೆ. ಅಂದರೆ ಕ್ರಿಕೆಟ್ ಮಂಡಳಿಯು 15 ವರ್ಷದೊಳಗಿನ ಆಟಗಾರನಿಗೆ ತಮ್ಮ ಪರವಾಗಿ ಆಡಲು ಅವಕಾಶ ನೀಡುವಂತೆ ಐಸಿಸಿಗೆ ಅರ್ಜಿ ಸಲ್ಲಿಸಬೇಕು. ಆ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನ ಬೇಡಿಕೆಗಳನ್ನು ಎದುರಿಸಲು ಆಟಗಾರನು ಸಮರ್ಥನಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಐಸಿಸಿ ಪರೀಕ್ಷಿಸಲಿದೆ. ಈ ವೇಳೆ ಆಟಗಾರನ ಆಟದ ಅನುಭವ, ಮಾನಸಿಕ ಬೆಳವಣಿಗೆ ಮತ್ತು ಆರೋಗ್ಯವನ್ನು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಐಸಿಸಿ ಅನುಮತಿ ನೀಡಲಿದೆ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ, ಐಸಿಸಿಯ ಪರೀಕ್ಷೆಯಲ್ಲಿ ಪಾಸಾದರೆ ವೈಭವ್ ಸೂರ್ಯವಂಶಿಗೆ ಈ ವರ್ಷವೇ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಅವಕಾಶ ಸಿಗಬಹುದು.

ಭಾರತದ ಪರ ಆಡಿದ ಕಿರಿಯ ಆಟಗಾರ ಯಾರು?

ಒಂದು ವೇಳೆ 2 ವರ್ಷಗಳ ಒಳಗೆ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಮೂಲಕ. ಅಂದರೆ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಸಚಿನ್ ತೆಂಡೂಲ್ಕರ್. ಸಚಿನ್, ಟೀಮ್ ಇಂಡಿಯಾ ಪರ ಮೊದಲ ಟೆಸ್ಟ್ ಪಂದ್ಯವನ್ನು ಆಡಿದಾಗ ಅವರಿಗೆ ಕೇವಲ 16 ವರ್ಷ, 205 ದಿನಗಳು. ಇದರ ಬೆನ್ನಲ್ಲೇ ಅವರು ಮೊದಲ ಏಕದಿನ ಪಂದ್ಯವನ್ನೂ ಸಹ ಆಡಿದ್ದರು. ಈ ದಾಖಲೆ ಮುರಿಯುವ ಉತ್ತಮ ಅವಕಾಶ ವೈಭವ್ ಸೂರ್ಯವಂಶಿಗೆ ಇದೆ. ಇದಕ್ಕಾಗಿ ಅವರು ಈ ಬಾರಿಯ ಐಪಿಎಲ್​ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ. ಈ ಪ್ರದರ್ಶನದೊಂದಿಗೆ ಮುಂದಿನ 2 ವರ್ಷಗಳೊಳಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ, ಭಾರತ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ ವೈಭವ್ ಸೂರ್ಯವಂಶಿಗೆ ಒಳ್ಳೆಯ ಅವಕಾಶವಿದ್ದು, ಅದಕ್ಕೆ ಬಿಸಿಸಿಐ ಎಷ್ಟರ ಮಟ್ಟಿಗೆ ಸಾಥ್ ನೀಡುತ್ತೆ ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ..

Kishor KV

Leave a Reply

Your email address will not be published. Required fields are marked *