ರಾಷ್ಟ್ರೀಯ ಬಾಲ ಪ್ರಶಸ್ತಿ ಪಡೆದ ವೈಭವ್ ಸೂರ್ಯವಂಶಿ – ಈ ಪ್ರಶಸ್ತಿಯ ವಿಶೇಷತೆ ಏನು ಗೊತ್ತಾ?

ರಾಷ್ಟ್ರೀಯ ಬಾಲ ಪ್ರಶಸ್ತಿ ಪಡೆದ ವೈಭವ್ ಸೂರ್ಯವಂಶಿ – ಈ ಪ್ರಶಸ್ತಿಯ ವಿಶೇಷತೆ ಏನು ಗೊತ್ತಾ?

ಕ್ರಿಕೆಟ್‌ನಲ್ಲಿ ಮ್ಯಾಜಿಕ್ ಮಾಡ್ತಿರೋ  14 ವರ್ಷದ ವೈಭವ್ ಸೂರ್ಯವಂಶಿ   ಮತ್ತೊಂದು ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದಕ್ಕಾಗಿ ಅವರಿಗೆ ರಾಷ್ಟ್ರೀಯ ಬಾಲ ಪ್ರಶಸ್ತಿ ನೀಡಲಾಗಿದೆ. ಈ ಪ್ರತಿಷ್ಠಿತ ಗೌರವವನ್ನು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರು ಪ್ರದಾನ ಮಾಡಿದರು.

ರಾಷ್ಟ್ರೀಯ ಬಾಲ ಪ್ರಶಸ್ತಿ ಭಾರತ ಸರ್ಕಾರ ನೀಡುವ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾಗಿದೆ. 15 ರಿಂದ 18 ವರ್ಷದೊಳಗಿನ ಮಕ್ಕಳು ಶೌರ್ಯ, ಕಲೆ, ಸಂಸ್ಕೃತಿ, ಸಮಾಜ ಸೇವೆ, ವಿಜ್ಞಾನ, ನಾವೀನ್ಯತೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದರೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಪದಕ, ಪ್ರಮಾಣಪತ್ರ, ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ಪ್ರಶಸ್ತಿ ನೀಡುತ್ತದೆ.ವೈಭವ್ ಸೂರ್ಯವಂಶಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಬ್ಯಾಟಿಂಗ್ ಮೂಲಕ ದಾಖಲೆಗಳ ಮಳೆ ಸುರಿಸಿದ್ದಾರೆ. 2025ರಲ್ಲಿ ಐಪಿಎಲ್‌ನ ದೊಡ್ಡ ವೇದಿಕೆಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದರೊಂದಿಗೆ ಅವರು ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಎರಡನೇ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದರ ನಂತರ ಅವರ ಬ್ಯಾಟ್ ನಿಲ್ಲಲೇ ಇಲ್ಲ. ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಬಾಂಗ್ಲಾ ವಿರುದ್ಧ ಪ್ರತಿಭಟನೆ – ಶೌಚಾಲಯದಲ್ಲಿ ಬಾಂಗ್ಲಾ ಬಾವುಟ ಅಂಟಿಸಿ ಆಕ್ರೋಶ

ಐಪಿಎಲ್ ಮಾತ್ರವಲ್ಲ, ದೇಶೀಯ ಕ್ರಿಕೆಟ್‌ನಲ್ಲಿಯೂ ವೈಭವ್ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ಈ 14 ವರ್ಷದ ಬಾಲಕ 36 ಎಸೆತಗಳಲ್ಲಿ ಶತಕ, 84 ಎಸೆತಗಳಲ್ಲಿ 190 ರನ್, ಕೇವಲ 56 ಎಸೆತಗಳಲ್ಲಿ 150 ರನ್ ಸಿಡಿಸಿ ಕ್ರಿಕೆಟ್ ವಲಯವನ್ನು ಬೆಚ್ಚಿಬೀಳಿಸಿದ್ದಾರೆ. ಅರುಣಾಚಲ ಪ್ರದೇಶ ವಿರುದ್ಧ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಮುನ್ನುಡಿ ಬರೆದರು. ಜೊತೆಗೆ, ಭಾರತದಿಂದ ವೇಗವಾಗಿ ಶತಕ ಗಳಿಸಿದ ಮೂರನೇ ಆಟಗಾರ ಎಂಬ ಸಾಧನೆಯೂ ಅವರ ಹೆಸರಿಗೆ ಹೆಗ್ಗುರುತಾಯಿತು. ಇದಕ್ಕೂ ಮೊದಲು, ಅಂಡರ್-19 ಏಷ್ಯಾ ಕಪ್ ಮತ್ತು ಉದಯೋನ್ಮುಖ ಏಷ್ಯಾ ಕಪ್‌ನಲ್ಲಿಯೂ ಶತಕ ಬಾರಿಸುವ ಮೂಲಕ ವೈಭವ್ ತಮ್ಮ ಸಾಮರ್ಥ್ಯವನ್ನು ಮರುಮರು ಸಾಬೀತುಪಡಿಸಿದ್ದಾರೆ.

Kishor KV