ಸಮಾಜದಲ್ಲಿ ಪರಿವರ್ತನೆ ತಂದ ವಚನ ಸಾಹಿತ್ಯದ ಮಹತ್ವ – ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರ
ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರವೇ ವಚನ ಸಾಹಿತ್ಯ. ವಚನ ಸಾಹಿತ್ಯ ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ.
ಇದನ್ನೂ ಓದಿ: ಕನ್ನಡಿಗರು ಎಂದೆಂದಿಗೂ ಮರೆಯದ ಮಹಾಪುರುಷ -ಆಧುನಿಕ ಕರ್ನಾಟಕದ ನಾಟಕ ಪಿತಾಮಹ ಶಾಂತಕವಿ
ವಚನ ಸಾಹಿತ್ಯ ಕನ್ನಡದ ಅತ್ಯಂತ ಪ್ರಮುಖ ಸಾಹಿತ್ಯ ಪ್ರಕಾರ.. ಛಂದಸ್ಸು.. ಪ್ರಾಸಗಳು ಸೇರಿದಂತೆ ವ್ಯಾಕರಣ ಬದ್ಧವಾಗಿ ಸಂಸ್ಕೃತ ಲೇಪಿತ ಹಳಗನ್ನಡದಲ್ಲಿ ರೂಪು ಪಡೆದು ವಿಸ್ತಾರ ಪಡೆಯುತ್ತಾ ಬಂದಿದ್ದ ಕನ್ನಡ ಸಾಹಿತ್ಯವನ್ನು ಏಕಾಏಕಿ ಜನಸಾಮಾನ್ಯರ ನಡುವೆ ನುಗ್ಗಿಸಿದ್ದು ವಚನಕಾರರು..ಜನರಾಡುತ್ತಿದ್ದ ಮಾತುಗಳ ಮೂಲಕ ಒಳಗೊಂದು ಹೊರಗೊಂದು ಎಂಬುದು ಇಲ್ಲದೆ ನಡೆ-ನುಡಿ ಸಿದ್ಧಾಂತವನ್ನು ರೂಪಿಸಿದ ಬಸವಾದಿ ಶರಣರು ವಚನಗಳ ಮೂಲಕ ಇಡೀ ಸಮಾಜದಲ್ಲೊಂದು ಪರಿವರ್ತನೆ ತರುವ ಪ್ರವರ್ತಕರಾದರು… ವಚನ ಸಾಹಿತ್ಯವನ್ನು ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು. ವಚನ ಸಾಹಿತ್ಯ ಲಿಂಗಾಯತ ಪರಂಪರೆಯನ್ನು ಹುಟ್ಟುಹಾಕಿತು. ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿವೆ. ಹಲವಾರು ಕವಿಗಳು, ಜನಸಾಮಾನ್ಯರು, ಸಾಹಿತ್ಯ ರಚಿಸಿದ್ದರೂ, ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕ್ರಿತಿಯಲ್ಲೇ ಅತಿ ಮುಖ್ಯವಾದುದು. ವಚನ ಸಾಹಿತ್ಯದಲ್ಲಿ ನೂರಾರು ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ಅಲ್ಲಮ ಪ್ರಭು ‘ಗುಹೇಶ್ವರ’ ಎಂದು ಬಳಸಿದರೆ, ಅಕ್ಕಮಹಾದೇವಿಯು ‘ಚೆನ್ನಮಲ್ಲಿಕಾರ್ಜುನ’ ಹಾಗು ಬಸವಣ್ಣನವರು ‘ಕೂಡಲ ಸಂಗಮದೇವ’ ಎಂದು ಬಳಸಿದ್ದಾರೆ. ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕವ್ವ, ಹೆಂಡದ ಮಾರಯ್ಯ ಮುಂತಾದ ೧೫೦ಕ್ಕೂ ಹೆಚ್ಚು ಶರಣರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಶೇಷವೆಂದರೆ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಕೊಟ್ಟಿದ್ದು ಕೂಡ ನಮ್ಮ ವಚನಕಾರರು.. ಬಸವಣ್ಣನ ಕಾಲದಲ್ಲಿ ರೂಪುಗೊಂಡಿದ್ದ ಅನುಭವ ಮಂಟಪವನ್ನು ಸಂಸದೀಯ ವ್ಯವಸ್ಥೆಯ ಅಡಿಗಲ್ಲು ಅಂದರೆ ತಪ್ಪಾಗಲಾರದು.. ಆಧುನಿಕ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಹೆಮ್ಮೆಯಿಂದ ಮಾತಾಡುವ ನಾವು ಇಡೀ ಪ್ರಜಾಪ್ರಭುತ್ವದ ಪರಿಕಲ್ಪನೆ ರೂಪುಗೊಂಡಿದ್ದು ಕೂಡ ನಮ್ಮ ಕರುನಾಡಿನಲ್ಲಿ ಮತ್ತು ಕನ್ನಡ ಭಾಷೆಯಲ್ಲಿ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು..