ಭಾರತೀಯ ಸಿರಪ್ ಕಂಪನಿಗಳಿಗೆ ಬಿಗ್ ಶಾಕ್ – ಮೂವರು ಅರೆಸ್ಟ್!
ಲಕ್ನೋ: ಕಳೆದ ಡಿಸೆಂಬರ್ ನಲ್ಲಿ ಭಾರತೀಯ ಮೂಲದ ಔಷಧೀಯ ಕಂಪನಿ ತಯಾರಿಸಿದ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಕೇಂದ್ರ ಸರ್ಕಾರ ಮರಿಯನ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ಮಕ್ಕಳಿಗೆ ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಸೇವನೆಯಿಂದ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದರು. ಈ ಸಿರಪ್ ನಲ್ಲಿ ಎಥಿಲೀನ್ ಗ್ಲೈಕೋಲ್‌ನ ವಿಷಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿತ್ತು. 1940ರ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಉತ್ತರ ಪ್ರದೇಶದ ಗೌತಮ ಬುದ್ಧ ನಗರ 3ನೇ ಹಂತದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಭಾರತೀಯ ಯೋಧರಿಗೆ ಜೆಟ್ ಪ್ಯಾಕ್ ಸೂಟ್ – ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿದ್ದೇಗೆ?
ಬಂಧಿತ ಆರೋಪಿಗಳನ್ನು ಅತುಲ್ ರಾವತ್, ತುಹಿನ್ ಭಟ್ಟಾಚಾರ್ಯ ಮತ್ತು ಮೂಲ್ ಸಿಂಗ್ ಎಂದು ಗುರುತಿಸಲಾಗಿದೆ.
ಇಂತಹ ಪ್ರಕರಣಗಳನ್ನು ನಡೆದಿರುವುದು ಹೊಸದೇನಲ್ಲ. ಈ ಹಿಂದೆಯೂ ಕೂಡ ಭಾರತೀಯ ಮೂಲದ ಕಂಪನಿಯ ಕೆಮ್ಮಿನ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನಿಯಮ ಉಲ್ಲಂಘನೆ ಮಾಡಿರುವ ಆರು ಕೆಮ್ಮಿನ ಸಿರಪ್ ತಯಾರಕ ಕಂಪನಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.
ಈಗಾಗಲೇ 108 ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಗಳಲ್ಲಿ 84 ಕಂಪನಿಗಳ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘಿಸಿರುವ 17 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಬೇರೆ ರಾಜ್ಯಗಳಿಗೆ ಔಷಧಗಳನ್ನು ರಫ್ತು ಮಾಡುವಾಗ ವಿಶ್ವ ಆರೋಗ್ಯ ಸಂಸ್ಥೆಯ ಜಿಎಂಪಿ ನಿಯಮವನ್ನು ಅನುಸರಿಸುತ್ತಿದ್ದೇವೆ. ರಾಜ್ಯದ 996 ಅಲೋಪತಿ ಔಷಧ ತಯಾರಿಕ ಘಟಕದಿಂದ 514 ಉತ್ಪನ್ನಗಳು ರಫ್ತಾಗುತ್ತಿವೆ ಎಂದು ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಹೇಳಿದ್ದಾರೆ.