ಉತ್ತರಕಾಶಿಯಲ್ಲಿ ರಣಭೀಕರ ಮೇಘಸ್ಫೋಟ – ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಗ್ರಾಮ

ಉತ್ತರಕಾಶಿಯ ಧರಾಲಿ ಗ್ರಾಮವು ಮೇಘಸ್ಫೋಟ ಮತ್ತು ಪ್ರವಾಹದಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಹಲವಾರು ಮನೆಗಳು, ಅಂಗಡಿಗಳು ಕೊಚ್ಚಿಹೋಗಿದ್ದು, ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಭೀಕರ ದುರಂತದಲ್ಲಿ ಸಾಕಷ್ಟು ಜನ ಪ್ರಾಣ ಬಿಟ್ಟಿದ್ದಾರೆ.
ಖೀರ್ ಗಂಗಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹದಿಂದಾಗಿ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ಇದು ಗಂಗೋತ್ರಿ ಧಾಮಕ್ಕೆ ಹೋಗುವ ದಾರಿಯಲ್ಲಿ ಪ್ರಮುಖ ನಿಲ್ದಾಣವಾಗಿದೆ. ಜಿಲ್ಲಾ ಪೊಲೀಸರ ಪ್ರಕಾರ, ಹರ್ಸಿಲ್ ಪ್ರದೇಶದ ಖೀರ್ ಗಢ್ ನೀರಿನ ಮಟ್ಟ ಏರಿಕೆಯಿಂದಾಗಿ ಧರಾಲಿಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ ಎಂದು ವರದಿಯಾಗಿದ್ದು, ಬಹುತೇಕ ಈ ಗ್ರಾಮವೇ ಇರುವುದು ಅನುಮಾನ ಎಂದು ಅಂದಾಜಿಸಿದ್ದಾರೆ. SDRF , ಸೇನೆ ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರು ಸಹಕರಿಸಿ ಮುಷ್ಕರ ಕೈ ಬಿಡಿ – ಡಿಕೆ ಶಿವಕುಮಾರ್
ಧರಾಲಿ ಗ್ರಾಮಕ್ಕೆ ಹರಿದು ಬಂದ ಪ್ರವಾಹದ ನೀರು, ಮನೆಗಳು, ಅಂಗಡಿಗಳು ಮತ್ತು ರಸ್ತೆಗಳನ್ನು ಕೊಚ್ಚಿಹಾಕಿದೆ. ಇಡೀ ಊರಿನ ತುಂಬಾ ಬರೀ ಅವಶೇಷಗಳು ಹಾಗೂ ಮಣ್ಣಿನ ಜಾಡನ್ನು ಮಾತ್ರವೇ ಬಿಟ್ಟಿದೆ. ಇದರ ಭೀಕರತೆ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಲವು ಹೋಟೆಲ್ಗಳು ಮತ್ತು ಹೋಂಸ್ಟೇಗಳು ಪ್ರವಾಹದಲ್ಲಿ ಸಂಪೂರ್ಣವಾಗಿ ನಾಶವಾಗಿವೆ.
ಆಗಸ್ಟ್ 10 ರವರೆಗೆ ಉತ್ತರಾಖಂಡದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ. ಹರ್ಸಿಲ್ ಮತ್ತು ಭಟ್ವಾರಿಯಿಂದ ರಕ್ಷಣಾ ತಂಡಗಳನ್ನು ರವಾನಿಸಲಾಗಿದ್ದು, ಸಿಕ್ಕಿಬಿದ್ದಿರುವವರನ್ನು ಪತ್ತೆ ಹಚ್ಚಲು ಮತ್ತು ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ.

ನೋಡಿರಿ

