ಆಸ್ತಿಗಾಗಿಯೇ ಗಂಡನ ಮನೆಯ ನಾಲ್ವರನ್ನ ಕೊಂದಳಾ ಹೆಮ್ಮಾರಿ – ಉತ್ತರಕನ್ನಡ ಹತ್ಯಾಕಾಂಡದ ಅಸಲಿಯತ್ತೇನು?
ಹೆಣ್ಣು, ಹೊನ್ನು, ಮಣ್ಣಿಗಾಗಿ ಜನ ಮನುಷ್ಯತ್ವವನ್ನೇ ಮರೆತು ವರ್ತಿಸುತ್ತಿದ್ದಾರೆ. ಸಂಪತ್ತಿಗೆ ಕೊಡುವ ಮಹತ್ವವನ್ನ ಸಂಬಂಧಗಳಿಗೆ ಕೊಡ್ತಿಲ್ಲ. ಇದೇ ವಿಚಾರಕ್ಕೆ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ಯಾಕಾಂಡವೇ ನಡೆದು ಹೋಗಿದೆ. ಒಂದೇ ಕುಟುಂಬದ ನಾಲ್ವರನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಹಾಡವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನ ಹತ್ಯೆ ಮಾಡಲಾಗಿದೆ. ಪ್ರಕರಣ ಭೇದಿಸಲು ಭಟ್ಕಳ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ 3 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಸಂಸ್ಕಾರದ ಕಡೆ ಗಮನ ಹರಿಸಲಾಗುತ್ತಿದೆ. ಒಂದು ತಂಡ ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. 3 ತಂಡಗಳು ಆರೋಪಿಗಳ ಪತ್ತೆ ಮತ್ತು ಕೊಲೆಗೆ ಕಾರಣ ತಿಳಿಯಲು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಪ್ರಕರಣದ ಹಿಂದೆ ಇರೋ ಎಲ್ಲರನ್ನು ಶೀಘ್ರವಾಗಿ ಬಂಧಿಸಲಾಗುತ್ತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ.
ಇದನ್ನೂ ಓದಿ : ₹25 ಲಕ್ಷ ಸಾಲ ಮಾಡಿ ಮಗಳ ಮದುವೆ ಮಾಡಿದ್ರು – ಹೆತ್ತವರ ಜೊತೆ ನವವಿವಾಹಿತೆಯೂ ಸಾವು..!
ಅಷ್ಟಕ್ಕೂ ಒಂದೇ ಕುಟುಂಬದ ನಾಲ್ವರ ಹತ್ಯೆ ಹಿಂದೆ ಆಸ್ತಿ ಕಲಹ ಇದೆ ಎನ್ನಲಾಗಿದೆ. ಕುಟುಂಬದ ಹಿರಿಯ ಶಂಭು ಭಟ್(65) ಶಂಭು ಭಟ್ ಪತ್ನಿ ಮಾದೇವಿ ಭಟ್(40) ಮಗ ರಾಜೀವ್ ಭಟ್(34) ಸೊಸೆ ಕುಸುಮಾ ಭಟ್(30) ಎನ್ನುವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಅದೃಷ್ಟವಶಾತ್ ಕುಸುಮಾ ದಂಪತಿಯ ಮಗು ಬಚಾವ್ ಆಗಿದೆ. ಹಿರಿಯ ಸೊಸೆ ಕುಮ್ಮಕ್ಕಿನಿಂದಲೇ ನಾಲ್ವರನ್ನು ಕೊಂದಿರುವ ಆರೋಪ ಕೇಳಿ ಬಂದಿದೆ.
3-4 ತಿಂಗಳ ಹಿಂದಷ್ಟೆ ಶಂಭು ಭಟ್ರ ಹಿರಿಯ ಮಗ ಶ್ರೀಧರ್ ಭಟ್ ನಿಧನರಾಗಿದ್ದರು. ಈ ವೇಳೆ ಶ್ರೀಧರ್ ಭಟ್ ಪತ್ನಿ ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆಸ್ತಿ ವಿಚಾರವಾಗಿ ಗಂಡನ ಕುಟುಂಬದ ಜೊತೆ ವಿದ್ಯಾ ಭಟ್ ಗಲಾಟೆ ಮಾಡಿದ್ದರು ಎನ್ನಲಾಗುತ್ತಿದೆ. ಗಂಡನ ಮನೆಯವರು 6 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ 1 ಎಕರೆ 9 ಗುಂಟೆ ಭೂಮಿ ನೀಡಿದ್ದರು. ಆದರೆ ಸೊಸೆ ವಿದ್ಯಾ 3 ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಜಗಳ ನಡೆದಿತ್ತು. ಈ ಹಿನ್ನೆಲೆ ಸೊಸೆ ವಿದ್ಯಾ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ಶ್ರೀಧರ್ ಭಟ್ ಸಾವಿಗೆ ಪತ್ನಿ ವಿದ್ಯಾ ಭಟ್ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಶಂಭು ಭಟ್ ಇವರ ಮೊದಲ ಮಗ ಶ್ರೀಧರ್ ಭಟ್. ಶ್ರೀಧರ್ ಭಟ್ ಜೊತೆ ಪಕ್ಕದ ಊರಿನ ವಿದ್ಯಾ ಭಟ್ ಜೊತೆ ವಿವಾಹವಾಗಿತ್ತು. ಮುಂದೆ ಶ್ರೀಧರ್ ಭಟ್ ಕಿಡ್ನಿ ವೈಫಲ್ಯದಿಂದ ಜ್ವರ ಬಂದು ಸಾವನ್ನಪ್ಪಿದರು. ಪತಿಯ ಸಾವಿಗೆ ಪತ್ನಿ ವಿದ್ಯಾ ಭಟ್ ಕಾರಣ ಎಂದು ಶ್ರೀಧರ್ ಭಟ್ ಸಹೋದರಿಯರಾದ ಜಯಾ ಮತ್ತು ಸುನೀತಾ ಆರೋಪ ಮಾಡಿದ್ದಾರೆ. ಶ್ರೀಧರ್ ಭಟ್ ಅವರ ಕಿಡ್ನಿ ವೈಫಲ್ಯವಾಗಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪತ್ನಿ ವಿದ್ಯಾ ಆಯುರ್ವೇದ ಚಿಕಿತ್ಸೆ ಕೊಡಿಸುವುದಾಗಿ ಹೇಳಿ, ಗುಣಮುಖವಾಗುವ ಮುಂಚೆಯೇ, ಮನೆಯವರ ಮಾತು ವಿರೋಧಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದರು. ಮುಂದೆ ಶ್ರೀಧರ್ ಗೆ ಗುಣಮಟ್ಟದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದರು. ಈ ಸಾವಿಗೆ ವಿದ್ಯಾನೇ ಕಾರಣ, ಪತಿ ಸಾಯಲಿ ಎಂದೇ ಈ ರೀತಿ ಮಾಡಿದ್ದಾಳೆ ಎಂದು ಶ್ರೀಧರ ಭಟ್ ಸಹೋದರಿಯರು ಆರೋಪ ಮಾಡಿದ್ದಾರೆ.