ಮದುವೆ ಮನೆಯಲ್ಲಿ ರಸಗುಲ್ಲಕ್ಕಾಗಿ ಮಾರಾಮಾರಿ – 6 ಮಂದಿಗೆ ಗಂಭೀರ ಗಾಯ
ಮದುವೆ ಅಂದ್ರೆ ಗಂಡು, ಹೆಣ್ಣಿನ ನಡುವೆ ಹೊಂದಾಣಿಕೆ ಇದ್ರೆ ಅಷ್ಟೇ ಸಾಕಾಗೋದಿಲ್ಲ, ಆ ಗಂಡು ಹಾಗೂ ಹೆಣ್ಣಿನ ಕುಟುಂಬದ ನಡುವೆಯೂ ಹೊಂದಾಣಿಕೆ ಇರಬೇಕು. ಹೀಗಿದ್ರೆ ಮಾತ್ರ ಮದುವೆ ಮನೆಯಲ್ಲಿ ಸಡಗರದಿಂದ ಇರಲು ಸಾಧ್ಯವಾಗುತ್ತೆ. ಇನ್ನು ಮದುವೆ ಮನೆಯಲ್ಲಿ ಊಟ, ಉಪಚಾರದಲ್ಲಿ ಯಾವುದೂ ಕಡಿಮೆಯಾಗಬಾರದು ಅನ್ನೋದು ಇದ್ದೇ ಇರುತ್ತೆ. ಹೀಗಾಗಿ ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು ಅಂತಾ ಕಾಳಜಿ ವಹಿಸುತ್ತಾರೆ. ಆದ್ರೆ ಕೆಲವರು ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ಮದುವೆ ಮನೆಯಲ್ಲಿ ದೊಡ್ಡಸೀನ್ ಕ್ರಿಯೇಟ್ ಮಾಡ್ತಾರೆ. ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ರಸಗುಲ್ಲಾ ಸಿಕ್ಕಿಲ್ಲಾ ಅಂತಾ ಮಾರಾಮಾರಿ ನಡೆದಿದೆ.
ಮದುವೆ ಸಮಾರಂಭದಲ್ಲಿ ಊಟ ಕಡಿಮೆಯಾಯಿತು ಎಂದು ಜಗಳ ತೆಗೆದು ಮದುವೆ ಮುರಿದ ಘಟನೆಗಳು ಸಾಕಷ್ಟು ಇದೆ ಅದೇ ರೀತಿ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೆಲವರಿಗೆ ರಸಗುಲ್ಲಾ ಸಿಗಲಿಲ್ಲ ಎಂಬ ಕಾರಣಕ್ಕೆ ಜಗಳ ನಡೆದು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಭಾನುವಾರ ಆಗ್ರಾದ ಬ್ರಿಜ್ಭಾನ್ ಕುಶ್ವಾಹಾ ಎಂಬುವವರ ಮನೆಯಲ್ಲಿ ಮದುವೆ ಸಮಾರಂಭ ನಡೆಯುತಿತ್ತು. ಈ ವೇಳೆ ಮದುವೆಗೆ ಗಂಡು ಹೆಣ್ಣಿನ ಕಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದರು. ಈ ವೇಳೆ ಊಟನೂ ಶುರುವಾಗಿದೆ. ಈ ವೇಳೆ ಓರ್ವ ವ್ಯಕ್ತಿ ಊಟದ ನಡುವೆ ಸ್ವೀಟ್ ತಿನ್ನಲೆಂದು ರಸಗುಲ್ಲಾ ಕೌಂಟರ್ ಇರುವಲ್ಲಿಗೆ ತೆರಳಿದ್ದಾನೆ. ಆದರೆ ಅಲ್ಲಿ ರಸಗುಲ್ಲಾ ಖಾಲಿಯಾಗಿತ್ತು. ಇದರಿಂದ ಕೋಪಗೊಂಡ ವ್ಯಕ್ತಿ ಊಟ ಬಡಿಸುವ ವ್ಯಕ್ತಿಯ ಜೊತೆಗೆ ಜಗಳವಾಡಿದ್ದಾನೆ. ಅದಕ್ಕೆ ಊಟ ಬಡಿಸುವ ವ್ಯಕ್ತಿಯೂ ಸಮಾಧಾನದಲ್ಲಿ ಸಿಹಿ ಖಾದ್ಯ ಖಾಲಿಯಾಗಿರುವ ವಿಚಾರ ಹೇಳಿದ್ದಾನೆ. ಆದರೆ ಸಮಾಧಾನಗೊಳ್ಳದ ವ್ಯಕ್ತಿ ಜಗಳ ಶುರುಮಾಡಿ ಮಾತಿಗೆ ಮಾತು ಬೆಳೆದು ಅಲ್ಲಿದ್ದ ಕೆಲವರು ತಮಗೂ ರಸಗುಲ್ಲಾ ಬೇಕು ಎಂದು ಹೇಳಿ ಜಗಳ ಅತಿರೇಖಕ್ಕೆ ಹೋಗಿ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗಳ ಹೆಚ್ಚಾಗುತ್ತಿದ್ದಂತೆ ಮದುವೆ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಪಡಿಸುವ ಮೂಲಕ ಜಗಳ ಅಂತ್ಯವಾಗಿದೆ.