11 ಕೊಠಡಿಗಳು, ಬಾಲ್ಕನಿ, ಮಸೀದಿ, ಬಾವಿ – 12 ವರ್ಷಗಳ ಕಾಲ ಭೂಮಿ ಅಗೆದು 2 ಅಂತಸ್ತಿನ ಮನೆ ಕಟ್ಟಿದ ಸಾಹಸಿ
ಜೀವನದಲ್ಲಿ ಸುಂದರವಾದ ಮನೆ ಕಟ್ಟಬೇಕೆಂಬುದು ಪ್ರತಿಯೊಬ್ಬರ ಕನಸು. ಅದಕ್ಕಾಗಿ ವರ್ಷಗಟ್ಟಲೆ ಹಣ ಕೂಡಿರುತ್ತಾರೆ. ಸಾಲ ಸೋಲ ಮಾಡಿ ಸೂರು ನಿರ್ಮಿಸಿಕೊಳ್ಳುತ್ತಾರೆ. ಹಾಗೆಯೇ ಈತನೂ ಮನೆ ಕಟ್ಟಿದ್ದಾನೆ. ಆದರೆ ಇವನ ಮನೆ ನೋಡಿದ್ರೆ ನೀವು ಬೆರಗಾಗೋದು ಪಕ್ಕಾ. ಯಾಕಂದರೆ ಈ ಮನೆ ಭೂಮಿಯ ಮೇಲೆ ಇಲ್ಲ. ಭೂಮಿ ಒಳಗಡೆ ಇದೆ.
ಇದನ್ನೂ ಓದಿ : 60 ವರ್ಷದ ವರ.. 30 ವರ್ಷದ ವಧು – ಆಂಜನೇಯನ ಸನ್ನಿಧಿಯಲ್ಲಿ ನಡೆಯಿತು ಅಪರೂಪದ ಕಲ್ಯಾಣ
ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಛಲ ಇದ್ದರೆ ಹಣ ಇರಬೇಕೆಂದೇ ಏನಿಲ್ಲ. ಹೇಗಾದರೂ ಸಾಧಿಸಬಹುದು. ಹೀಗೆಯೇ ಹಠತೊಟ್ಟ ಉತ್ತರ ಪ್ರದೇಶದ ವೀರನೊಬ್ಬ ಮನೆ ಕಟ್ಟಿಕೊಂಡಿದ್ದಾನೆ. ಇದು ಅಂತಿಂಥಾ ಮನೆಯಲ್ಲ, ಭೂಮಿಯನ್ನೇ ಅಗೆದು, ನೆಲದೊಳಗೇ ನಿರ್ಮಾಣವಾಗಿರೋ 2 ಅಂತಸ್ತಿನ ಸುಂದರ ಅರಮನೆ. ನೆಲದೊಳಗೆ ಇರುವ ಈ ಅರಮನೆಯಲ್ಲಿ ಬರೋಬ್ಬರಿ 11 ಕೊಠಡಿಗಳಿವೆ, ಬಾಲ್ಕನಿ ಇದೆ, ಮೆಟ್ಟಿಲುಗಳಿವೆ, ಮನೆಯೊಳಗೊಂದು ಮಸೀದಿಯೂ ಇದೆ. ಭೂಮಿ ಕೆಳಗಿನ ಈ ಅರಮನೆಯೊಳಗೇ ಒಂದು ಬಾವಿಯನ್ನೂ ತೊಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಇರ್ಫಾನ್ ಈ ಸಾಹಸಿ. ಈ ಸುಂದರವಾದ ಅರಮನೆ ಕಟ್ಟಿದ್ದು ಸಾವಿರಾರು ಕಾರ್ಮಿಕರಲ್ಲ, ಬದಲಾಗಿ ಇರ್ಫಾನ್ ಒಬ್ಬನೇ ಈ ಮನೆ ಕಟ್ಟಿಕೊಂಡಿದ್ದಾನೆ. ಪಪ್ಪು ಬಾಬಾ ಅಲಿಯಾಸ್ ಇರ್ಫಾನ್, 2011ರಲ್ಲಿ ನಿರ್ಮಿಸಲು ಪ್ರಾರಂಭಿಸಿದ ಈ ಭೂಗತ ಅರಮನೆಯನ್ನು ಬರೋಬ್ಬರಿ 12 ವರ್ಷಗಳ ಶ್ರಮದಿಂದ ಇದನ್ನು ನಿರ್ಮಿಸಿದ್ದಾನೆ. ಬರೋಬ್ಬರಿ 12 ವರ್ಷಗಳ ಕಾಲ ತಾನೊಬ್ಬನೇ ಸಣ್ಣದೊಂದು ಗುದ್ದಲಿ ಬಳಸಿ ನಿತ್ಯವೂ ಒಂದೊಂದೇ ಕೆಲಸ ಮಾಡಿ ಹೊಸ ರೂಪ ಕೊಟ್ಟಿದ್ದಾನೆ.
ಯಾರ ಸಹಾಯವೂ ಇಲ್ಲದೇ ವರ್ಷಗಟ್ಟಲೆ ಕಟ್ಟಿದ್ದಾನೆ ಇರ್ಫಾನ್. ಹಗಲಿನ ಹೊತ್ತು ಮನೆ ಕಟ್ಟುತ್ತಿದ್ದರು, ರಾತ್ರಿ ಮನೆಗೆ ಬಂದು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು. 2010 ರವರೆಗೆ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ತಂದೆ ಮರಣದ ನಂತರ ಇರ್ಫಾನ್ ಜೀವನ ಹೊಸ ರೂಪವನ್ನೇ ಪಡೆಯಿತು. ಕೃಷಿಗೆ ಕೈ ಹಾಕಿದರು, ಎಲೆಕ್ಷನ್‌ಗೆ ನಿಂತರು.. ಯಾವುದೂ ಫಲ ನೀಡದಿದ್ದಾಗ ಕೃಷಿ ಮಾಡುತ್ತಿದ್ದ ಜಮೀನಿನಲ್ಲೇ ನೆಲ ಮಾಳಿಗೆ ಮಾಡಿ ಈ ಸುಂದರ ಅರಮನೆ ಕಟ್ಟಿದ್ದಾರೆ. ಬರೋಬ್ಬರಿ 12 ವರ್ಷಗಳ ಶ್ರಮದ ಪ್ರತಿಫಲ ಇದೀಗ ನೆಲದೊಳಗೆ ಅರಳಿ ನಿಂತಿದೆ.