ನೀವು ಹೆಚ್ಚು ಹೊತ್ತು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ? – ಸದಾ ಮೊಬೈಲ್ ಬಳಸ್ತಾನೇ ಇದ್ದರೆ ಈ ಕಾಯಿಲೆ ಒಕ್ಕರಿಸೋದು ಗ್ಯಾರಂಟಿ!
ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ಹೆಚ್ಚಿನವರಿಗೆ ಕೈಯಲ್ಲಿ ಮೊಬೈಲ್ ಇರ್ಲೇ ಬೇಕು. ಒಂದು ಕ್ಷಣ ಮೊಬೈಲ್ ಇಲ್ಲ ಅಂದ್ರೂ ತಲೆ ಕೆಟ್ಟು ಹೋದಂತಾಗುತ್ತೆ. ಮೊಬೈಲ್, ಟ್ಯಾಬ್ಲೆಟ್ ನಂತಹ ಟಚ್ ಸ್ಕ್ರೀನ್ ಗಳನ್ನು ನಾವು ಅತೀ ಎನ್ನುವಷ್ಟು ಬಳಸುತ್ತಿದ್ದೇವೆ. ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ಶಾಪಿಂಗ್ ಮಾಲ್ ಹೀಗೆ ಎಲ್ಲೇ ಹೋದರೂ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತೆ. ಬಹುತೇಕ ಮಂದಿಯ ಕೈಯಲ್ಲಿ ಇಂದು ನಾವು ಸ್ಮಾರ್ಟ್ ಫೋನ್ ಗಳನ್ನೇ ನೋಡ್ತೇವೆ. ಆದ್ರೆ ಈ ಚಟ ಕೂಡ ಮನುಷ್ಯನಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿದೆ.
ಮೊಬೈಲ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ಟ್ರಿಗರ್ ಫಿಂಗರ್ ಸಮಸ್ಯೆ ಕೂಡ ಒಂದು. ಮೊಬೈಲ್ ಹಾಗೂ ಇನ್ನಿತರ ಟಚ್ ಸ್ಕ್ರೀನ್ ಬಳಕೆ ಮಾಡುವಾಗ ನಮ್ಮ ಬೆರಳುಗಳನ್ನು ಬಳಸುತ್ತೇವೆ. ಇದರಿಂದ ಬೆರಳುಗಳಲ್ಲಿ ನೋವು ಹಾಗೂ ಕೈಗಳ ನೋವು ಮುಂತಾದವು ಎದುರಾಗುತ್ತವೆ. ಮೊಬೈಲ್ ಬಳಕೆಯಿಂದ ಉಂಟಾಗುವ ಇಂತಹ ಕೈ ಅಥವಾ ಸ್ನಾಯುಗಳ ನೋವಿಗೆ ಟ್ರಿಗರ್ ಫಿಂಗರ್ ಎನ್ನುತ್ತಾರೆ.
ಇದನ್ನೂ ಓದಿ: ಸ್ಮಾರ್ಟ್ ಫೋನ್ ಗಳನ್ನು ಹಾಳಾಗುವವರೆಗೂ ಉಪಯೋಗಿಸಬಹುದಾ – ಎಷ್ಟು ವರ್ಷಕ್ಕೊಮ್ಮೆ ಮೊಬೈಲ್ ಗಳನ್ನ ಬದಲಿಸಬೇಕು?
ಈ ಟ್ರಿಗರ್ ಫಿಂಗರ್ ಕೈ ನೋವಿನ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಮೊಬೈಲ್ ಸ್ಕ್ರೀನ್ ಮೇಲೆ ನಮ್ಮ ಬೆರಳುಗಳನ್ನು ಇಟ್ಟು ಬ್ರೌಸ್ ಮಾಡುತ್ತಾ ಇರುವುದರಿಂದ ಬೆರಳಿನ ನೋವು, ಕೈಗಳ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಪ್ರಪಂಚದಲ್ಲಿ ಶೇ. 2ರಷ್ಟು ಜನರು ಈ ಟ್ರಿಗರ್ ಫಿಂಗರ್ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಸಮಸ್ಯೆ ಉಂಟಾದರೆ ನಿಮಗೆ ಹೆಬ್ಬೆರಳು ಮತ್ತಿತರೆ ಬೆರಳುಗಳನ್ನು ಸುಲಭವಾಗಿ ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ. ಬೆರಳು ಬಿಗಿದಂತೆ ಭಾಸವಾಗುತ್ತದೆ. ನೀವು ಟಚ್‌ಸ್ಕ್ರೀನ್ ಅನ್ನು ಎಷ್ಟು ಸಮಯ ಬಳಸುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಟ್ರಿಗರ್ ಫಿಂಗರ್ ಸಮಸ್ಯೆಯ ಲಕ್ಷಣಗಳ ತೀವ್ರತೆ ನಿರ್ಧರಿತವಾಗುತ್ತದೆ.
ಈ ಟ್ರಿಗರ್ ಫಿಂಗರ್ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ 6 ಪಟ್ಟು ಹೆಚ್ಚು ಎಂದು ಅಧ್ಯಯನಗಳು ತಿಳಿಸಿವೆ. ಟ್ರಿಗರ್ ಫಿಂಗರ್ ಸಮಸ್ಯೆ ಉಂಟಾದರೆ, ಫಿಜಿಯೋಥೆರಪಿಸ್ಟ್‌ಗಳನ್ನು ಭೇಟಿ ಮಾಡಿ. ಫಿಸಿಯೋಥೆರಪಿಸ್ಟ್ಗಳು ಹೇಳುವ ಬೆರಳಿನ ವ್ಯಾಯಾಮಗಳು ಪೀಡಿತ ಸ್ನಾಯುರಜ್ಜುಗಳನ್ನು ಬಲಪಡಿಸಲು ಮತ್ತು ಹೆಚ್ಚಿನ ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.