ಒಂದು ಕನ್ನಡಕದ ಪೆಟ್ಟಿಗೆ.. ಎರಡು ಕೊಲೆ.. – ಅಮ್ಮ, ಮಗಳ ಹತ್ಯೆ ರಹಸ್ಯ ಬಯಲಾಗಿದ್ದು ಹೇಗೆ?

ಒಂದು ಕನ್ನಡಕದ ಪೆಟ್ಟಿಗೆ.. ಎರಡು ಕೊಲೆ.. – ಅಮ್ಮ, ಮಗಳ ಹತ್ಯೆ ರಹಸ್ಯ ಬಯಲಾಗಿದ್ದು ಹೇಗೆ?

ಕೊಲೆ, ದರೋಡೆ ನಡೆದ ವೇಳೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಏನಾದರೂ ಕ್ಲೂ ಸಿಗುತ್ತದೆಯಾ ಅಂತಾ ಹುಡುಕುತ್ತಾರೆ. ಕೊಲೆ ಆದ ಜಾಗದಲ್ಲಿ ಸಿಗುವ ಸಣ್ಣ ಪುಟ್ಟ ವಸ್ತುಗಳನ್ನು ಪರಿಶೀಲಿಸುತ್ತಾರೆ. ಏಕೆಂದರೆ ಅಲ್ಲಿ ಸಿಕ್ಕ ಸಣ್ಣ ವಸ್ತುಗಳಿಂದಲೂ ಆರೋಪಿ ಸುಳಿವು ಸಿಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪೊಲೀಸರು ತನಿಖೆ ವೇಳೆ ಮೈಯೆಲ್ಲಾ ಕಣ್ಣಾಗಿಸಿ ಇಟ್ಟುಕೊಳ್ಳುತ್ತಾರೆ. ಇದೀಗ ಮುಂಬೈನಲ್ಲಿ ಎರಡು ಕೊಲೆ ಪ್ರಕರಣಗಳನ್ನು ಕನ್ನಡಕದ ಬಾಕ್ಸ್‌ ನೆರವಿನಿಂದ ಪತ್ತೆ ಪತ್ತೆ ಮಾಡಲಾಗಿದೆ!

ನವಿ ಮುಂಬಯಿ ಸಮೀಪದ ಉರಾನ್‌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಉರಾನ್‌ ಪಟ್ಟಣದ ಪಿರ್ಕಾನ್‌-ಸರ್ದೇಗಾಂವ್‌ ರಸ್ತೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಕುರಿತು ದಾರಿಹೋಕರು ಜುಲೈ 10ರಂದು ನವಿ ಮುಂಬಯಿನ ಪೊಲೀಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ನವಿ ಮುಂಬಯಿ ಪೊಲೀಸರಿಗೆ ಯಾವುದೇ ಪ್ರಮುಖ ಪುರಾವೆಗಳು ಸಿಗಲಿಲ್ಲ. ಕೊನೆಗೆ ಅಲ್ಲಿದ್ದ ಒಂದು ಕನ್ನಡಕದ ಬಾಕ್ಸ್‌ನಿಂದ ಎರಡು ಕೊಲೆ ಕೇಸ್‌ಗಳನ್ನು ಪತ್ತೆ ಮಾಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: 11 ವರ್ಷದ ಬಾಲಕನ ಕುತ್ತಿಗೆ ಹಿಸುಕಿ ಬೆಡ್ ಕೆಳಗಿನ ಬಾಕ್ಸ್ ನಲ್ಲಿ ಅಡಗಿಸಿಟ್ಟ ಮಹಿಳೆ – ಪರಿಚಯಸ್ಥಳೇ ಕೃತ್ಯ ಎಸಗಿದ್ದೇಕೆ..?

ರಸ್ತೆ ಬದಿ ಬಿದ್ದಿದ್ದ ಶವದ ಮೇಲಿದ್ದ ಎಲ್ಲ ಆಭರಣಗಳನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದರು. ಮಹಿಳೆಯ ತಲೆಗೆ ಎರಡು ಗುಂಡು ಹೊಕ್ಕಿದ್ದರೂ, ಕುತ್ತಿಗೆಯನ್ನು ಸೀಳಿ ಹಾಕಲಾಗಿತ್ತು. ಇದು ಪೊಲೀಸರಿಗೆ ಸಾಕಷ್ಟು ಅನುಮಾನ ತರಿಸಿತ್ತು. ಹಂತಕರು ಯಾವುದೇ ಕುರುಹು ಸಿಗದಂತೆ ನೋಡಿಕೊಂಡಿದ್ದರು. ಆದರೆ ಕೊಲೆಯಾದ ಜಾಗದಲ್ಲಿ ಪೊಲೀಸರಿಗೆ ಕನ್ನಡಕದ ಬಾಕ್ಸ್‌  ಸಿಕ್ಕಿದೆ. ಆಗಲೇ ಈ ಕೊಲೆಯ ಸತ್ಯ ಬಯಲಾಗಿದೆ.

ಕೊಲೆಯಾದ ಜಾಗದಲ್ಲಿ ಸಿಕ್ಕ ಕನ್ನಡಕ್ಕದ ಬಾಕ್ಸ್‌ನಲ್ಲಿ ಡೊಂಬಿವಲಿಯ ಸ್ಪೆಕ್ಸ್‌ ಮೇಕರ್ಸ್ ಅಂಗಡಿಯ ವಿಳಾಸವಿತ್ತು. ತಕ್ಷಣವೇ ತನಿಖಾಧಿಕಾರಿಗಳು ಅಂಗಡಿಗೆ ತೆರಳಿ ವಿಚಾರಿಸಿದಾಗ ಕೊಲೆಯಾದ ಮಹಿಳೆ ಭಾರತಿ ಅಂಬೋಕರ್‌ ತಮ್ಮ ಗ್ರಾಹಕರಾಗಿದ್ದು, ಅವರು ಡೊಂಬಿವಲಿಯ ನಿವಾಸಿ. ಅವರ ವಿಳಾಸ ಹಾಗೂ ಮೊಬೈಲ್‌ ನಂಬರ್‌ ತಮ್ಮ ಬಳಿ ಇದೆ ಎಂದು ಹೇಳಿಕೆ ಕೊಟ್ಟರು.

ಅಲ್ಲಿಂದ ತನಿಖಾ ತಂಡವು, ಕೊಲೆಯಾದ ಮಹಿಳೆ ಭಾರತಿ ಅವರ ಡೊಂಬಿವಲಿಯಲ್ಲಿರುವ ಮನೆಗೆ ಹೋಗಿ ನೆರೆಹೊರೆಯವರನ್ನು ವಿಚಾರಣೆಗೊಳಪಡಿಸಿದ್ದಾರೆ. ”ಅಲಿಬಾಗ್‌ನಲ್ಲಿರುವ ಪೊಯ್ನಾಡ್‌ನಲ್ಲಿರುವ ತಮ್ಮ ಮಗಳ ಮನೆಗೆ ಭೇಟಿಯಾಗಲು ಹೋಗುವುದಾಗಿ ನಮ್ಮ ಬಳಿ ಹೇಳಿದ್ದರು. ಅತ್ತೆಯನ್ನು ಕರೆದುಕೊಂಡು ಹೋಗಲು ಅಳಿಯ ಮಯೂರೇಶ್‌ ಕೂಡ ಬಂದಿದ್ದರು ಎಂಬ ಮಾಹಿತಿಯನ್ನು ನಮ್ಮ ಬಳಿ ಹಂಚಿಕೊಂಡಿದ್ದರು,” ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು.

ಮಯೂರೇಶ್‌ ಮೇಲೆ ಅನುಮಾನ ಭಾರತಿ ಮನೆಯ ನೆರೆಹೊರೆಯವರಿಂದ ಈ ಮಾಹಿತಿ ಪಡೆದುಕೊಂಡ ಬಳಿಕ ಪೊಲೀಸರು ಕೂಡಲೇ ಮಯೂರೇಶ್‌ ಹಾಗೂ ಆತನ ಮೂವರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು. ಆಗ, ಅತ್ತೆ ಭಾರತಿಯನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ”ಮಗಳು ಪ್ರೀತಿಯನ್ನು ನೋಡಬೇಕೆಂದು ಭಾರತಿ ಅವರು ನನಗೆ ಪದೇಪದೆ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದರು. ಅವಳು ಗರ್ಭಿಣಿಯಾಗಿದ್ದು, ಎಲ್ಲೂ ಬರುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರೂ ಕೇಳಲಿಲ್ಲ. ಹಾಗಾಗಿಯೇ ಅವರನ್ನು ಕೊಲೆ ಮಾಡಿ ರಸ್ತೆ ಬದಿ ಬಿಸಾಡಿದ್ದೆ,” ಎಂದು ಮಯೂರೇಶ್‌ ವಿಚಾರಣೆ ವೇಳೆ ಹೇಳಿದ್ದಾನೆ.

”ನಿಮ್ಮ ಪತ್ನಿ ಪ್ರೀತಿ ಎಲ್ಲಿ?” ಎಂದು ಪೊಲೀಸರು ಪ್ರಶ್ನಿಸಿದಾಗ, ಮಯೂರೇಶ್‌, ”ನಾನು ಬೇರೊಂದು ಕೊಲೆ ಪ್ರಕರಣದಲ್ಲಿ 2014ರಲ್ಲಿಯೇ ಜೈಲಿಗೆ ಹೋಗಿ ಅಲಿಬಾಗ್‌ ಕೋರ್ಟ್‌ ತೀರ್ಪಿನ ಬಳಿಕ 2022ರಲ್ಲಿ ಹೊರಬಂದೆ. ಬಹಳ ಹಿಂದೆಯೇ ಪತ್ನಿ ಪ್ರೀತಿ ಕೈಗೆ ನೀಡಿದ್ದ 9 ಲಕ್ಷ ರೂ.ವನ್ನು ವಾಪಸ್‌ ಕೊಡುವಂತೆ ಕೇಳಿದೆ. ಆದರೆ ಆಕೆ ನಿರಾಕರಿಸಿದಳು. ಹೀಗಾಗಿಯೇ 2022ರ ಆಗಸ್ಟ್‌ನಲ್ಲಿ ಅಲಿಬಾಗ್‌ನ ಲಾಡ್ಜ್‌ನಲ್ಲಿ ಪ್ರೀತಿಯನ್ನು ಕೊಲೆ ಮಾಡಿ, ಮೃತದೇಹವನ್ನು ಕಣಿವೆಯೊಂದಕ್ಕೆ ಎಸೆದಿದ್ದೆ,” ಎಂದು ಹೇಳಿದ್ದಾನೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಯೂರೇಶ್‌ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ತನಿಖಾಧಿಕಾರಿಗಳಿಗೆ ತಿಳಿದುಬಂದಿದೆ.

suddiyaana