ತಮ್ಮ ಸಾಮರ್ಥ್ಯ ಬಳಸಿ ಇಸ್ರೇಲ್‌ ದಾಳಿ ನಿಲ್ಲಿಸಿ! – ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ!

ತಮ್ಮ ಸಾಮರ್ಥ್ಯ ಬಳಸಿ ಇಸ್ರೇಲ್‌ ದಾಳಿ ನಿಲ್ಲಿಸಿ! – ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ!

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ದಾಳಿ ತೀವ್ರ ಸ್ವರೂಪಕ್ಕೆ ತಲುಪಿದೆ. ಹಮಾಸ್‌ ಉಗ್ರರನ್ನು ನಿರ್ನಾಮ ಮಾಡುವುದಾಗಿ ಇಸ್ರೇಲ್‌ ಪಣ ತೊಟ್ಟಿದೆ. ಹೀಗಾಗಿ ಇಸ್ರೇಲ್‌ ಸೇನೆ ಮೇಲಿಂದ ಮೇಲೆ ಗಾಜಾ ಮೇಲೆ ದಾಳಿ ಮಾಡುತ್ತಿದೆ. ಇದೀಗ ಗಾಜಾ ಮೇಲಿನ ಇಸ್ರೇಲ್‌ ದಾಳಿಗಳನ್ನು ಕೊನೆಗೊಳಿಸಲು ಭಾರತ ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಬೇಕು ಎಂದು ಪ್ರಧಾನಿ ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

ಹೌದು, ಇಸ್ರೇಲ್‌ ಗಾಜಾಪಟ್ಟಿ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಈಗಾಗಲೇ ಗಾಜಾ ನಗರವನ್ನು ಎರಡು ಭಾಗಗಳಾಗಿ ವಿಭಜಿಸಿರುವುದಾಗಿ ಇಸ್ರೇಲ್ ಸೇನೆ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್‌ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇರಾನ್‌ ಅಧ್ಯಕ್ಷ, ಪಾಶ್ಚಿಮಾತ್ಯ ವಸಾಹತುಶಾಹಿ ವಿರುದ್ಧ ಭಾರತದ ಹೋರಾಟಗಳು ಹಾಗೂ ವಿಶ್ವದ ಅಲಿಪ್ತ ಚಳವಳಿಯ ಸಂಸ್ಥಾಪಕರ ದೇಶವಾದ ಭಾರತದ ಸ್ಥಾನವನ್ನು ನೆನಪಿಸಿಕೊಂಡಿದ್ದಾರೆ. ಗಾಜಾದ ತುಳಿತಕ್ಕೊಳಗಾದ ಜನರ ವಿರುದ್ಧ ಜಿಯೋನಿಸ್ಟ್‌ ಅಪರಾಧಗಳನ್ನು ಕೊನೆಗೊಳಿಸಲು ಭಾರತವು ತನ್ನೆಲ್ಲಾ ಸಾಮರ್ಥ್ಯ ಬಳಸುವ ನಿರೀಕ್ಷೆ ಇದೆ. ಕದನ ವಿರಾಮಕ್ಕಾಗಿ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ಟೆಹ್ರಾನ್ ಬೆಂಬಲಿಸುತ್ತದೆ. ಸಂಕಷ್ಟದಲ್ಲಿರುವ ಗಾಜಾದ ಜನರಿಗೆ ನೆರವು ನೀಡುತ್ತದೆ ಎಂದು ರೈಸಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಹೂವಿಲ್ಲದ ಬೊಕ್ಕೆ ಕೊಟ್ಟ ಕಾಂಗ್ರೆಸ್‌ ನಾಯಕ! – “ಪುಷ್ಪಗುಚ್ಛ ಹಗರಣ”ಎಂದು ಬಿಜೆಪಿ ನಾಯಕರಿಂದ ಗೇಲಿ!

ಪ್ಯಾಲೆಸ್ತೀನ್‌ ಜನರ ಹತ್ಯೆಯು ಪ್ರಪಂಚದ ಎಲ್ಲಾ ಸ್ವತಂತ್ರ ರಾಷ್ಟ್ರಗಳನ್ನು ಕೆರಳಿಸಿದೆ. ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆ, ಆಸ್ಪತ್ರೆಗಳು, ಶಾಲೆಗಳು, ಮಸೀದಿಗಳು, ಚರ್ಚ್‌ಗಳು ಮತ್ತು ವಸತಿ ಪ್ರದೇಶಗಳ ಮೇಲಿನ ದಾಳಿಗಳು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ದೇಶಗಳು ಸ್ವಾತಂತ್ರ್ಯಕ್ಕಾಗಿ ಪ್ಯಾಲೇಸ್ಟಿನಿ ಜನರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕು. ನಾಜಿ ಜರ್ಮನಿಯ ವಿರುದ್ಧ ಯುರೋಪಿಯನ್ ರಾಷ್ಟ್ರಗಳ ಹೋರಾಟ ಶ್ಲಾಘನೀಯ ಮತ್ತು ವೀರರ ಕೃತ್ಯವಾಗಿದೆ. ಆದರೆ ಮಕ್ಕಳ ಹತ್ಯೆ ಮತ್ತು ಕ್ರಿಮಿನಲ್ ಜಿಯೋನಿಸ್ಟ್ ಆಡಳಿತದ ವಿರುದ್ಧ ಪ್ಯಾಲೇಸ್ಟಿನಿಯನ್ ಜನರು ಹೋರಾಟ ನಡೆಸುವುದು ಖಂಡನೀಯವೇ ಎಂದು ಪ್ರಶ್ನಿಸಿದ್ದಾರೆ.

Shwetha M