ಮಾನವ ಮೊದಲು ಬೆಂಕಿ ಬಳಸಿದ್ದು ಯಾವಾಗ ಅಂತಾ ತೋರಿಸಿಕೊಟ್ಟಿದ್ದು ಮೀನಿನ ಪಳೆಯುಳಿಕೆ..!
ಸಾವಿರಾರು ಮೀನಿನ ಪಳೆಯುಳಿಕೆಗಳ ಅಧ್ಯಯನದಿಂದ ಹೊರಬಂದ ಸತ್ಯ..!

ಮಾನವ ಮೊದಲು ಬೆಂಕಿ ಬಳಸಿದ್ದು ಯಾವಾಗ ಅಂತಾ ತೋರಿಸಿಕೊಟ್ಟಿದ್ದು ಮೀನಿನ ಪಳೆಯುಳಿಕೆ..!ಸಾವಿರಾರು ಮೀನಿನ ಪಳೆಯುಳಿಕೆಗಳ ಅಧ್ಯಯನದಿಂದ ಹೊರಬಂದ ಸತ್ಯ..!

ಮನುಷ್ಯ ಮೊದಲು ಬೆಂಕಿಯನ್ನು ಅಡುಗೆಗಾಗಿ ಬಳಸಿದ್ದು ಯಾವಾಗ ಈ ಬಗ್ಗೆ ಈಗಲೂ ಅನೇಕರಲ್ಲಿ ನಾನಾ ಥರ ಪ್ರಶ್ನೆಗಳು, ಕುತೂಹಲ ಇದ್ದೇ ಇದೆ. ಇದೀಗ ಮಾನವ ಮೊದಲ ಬಾರಿಗೆ ಅಡುಗೆ ಮಾಡಲು ಬೆಂಕಿಯನ್ನ ಬಳಸಿದ ಬಗ್ಗೆ ಇಸ್ರೇಲ್ ನ ಅಧ್ಯಯನಕಾರರು ಆಸಕ್ತಿದಾಯಕ ಸಂಗತಿಯನ್ನ ಹೊರಹಾಕಿದ್ದಾರೆ. ಸಾವಿರಾರು ಮೀನಿನ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ಅಧ್ಯಯನಕಾರರು, 7,80,000 ವರ್ಷಗಳ ಹಿಂದೆಯೇ ಮಾನವರು ಅಡುಗೆಗೆ ಬೆಂಕಿಯನ್ನ ಬಳಸಿದ್ದರು ಎಂಬ ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಈ ಹಿಂದೆ ನಿಯಾಂಡರ್ತಾಲ್ಸ್ ಮತ್ತು ಹೋಮೋ ಸೇಪಿಯನ್ಸ್  1,70,000 ವರುಷಗಳ ಹಿಂದೆ ಬೆಂಕಿಯನ್ನ ಮೊದಲ ಬಾರಿಗೆ ಬಳಸಲು ಆರಂಭಿಸಿದ್ದರು ಎಂಬ ಥಿಯರಿಗೇ ತಿರುವು ಕೊಡುವಂತಹ ಇನ್ನೊಂದು ಥಿಯರಿ ಹುಟ್ಟಿಕೊಂಡಿದೆ.

ಇದನ್ನೂ ಓದಿ:  ರಸ್ತೆಯಲ್ಲಿ ಹೊರಟ ಕೆಂಪು ಅತಿಥಿಗಳ ಮೆರವಣಿಗೆ ನೋಡುವುದೇ ಚೆಂದ..!

ಪ್ರಪಂಚದಲ್ಲಿ ಮೊದಲ ಬಾರಿಗೆ ಮಾನವ ಉಗಮದ ನಂತರ ಮಾನವನ ವಿಕಸನ ಯಾವಾಗ ಪ್ರಾರಂಭವಾಯ್ತು ಅನ್ನೋದು ಇವತ್ತಿಗೂ ವಿಜ್ಞಾನಿಗಳಿಗೆ ಅಧ್ಯಯನದ ಒಂದು ಭಾಗವಾಗಿದೆ. ಆದಿ ಮಾನವನೂ ಆಧುನಿಕ ಮಾನವನಾಗಿ ಬದಲಾಗುವ ಮೊದಲು ಹಲವಾರು ಹಂತಗಳನ್ನ ದಾಟಿ ಬರಬೇಕಾಗಿತ್ತು. ಮೊದಲ ಬಾರಿಗೆ 2.4 ಮಿಲಿಯನ್ ವರುಷಗಳ ಹಿಂದೆ ಆಫ್ರಿಕಾದಲ್ಲಿ ಹೋಮೋ ಹ್ಯಾಬಿಲೀಸ್ (Homo Habilis ) ಎಂಬ ಮಾನವ ಜಾತಿ ಕಂಡು ಬಂದಿತ್ತು ಎಂದೂ ನಂಬಲಾಗುತ್ತದೆ. ಮುಂದೆ ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಮನುಷ್ಯ ವಿಕಸನಗೊಳ್ಳುತ್ತಾ ನಾಗರೀಕತೆಗೆ ಹೊಂದಿಕೊಳ್ಳುತ್ತಾನೆ. ಆಹಾರದ ಬಗ್ಗೆ ಹೆಚ್ಚು ಜ್ಞಾನವಿಲ್ಲದ ಮಾನವ ಜಾತಿ ಕಾಡಿನಲ್ಲಿ ಸಿಕ್ಕ ಹಣ್ಣು ಗಳನ್ನ ತಿನ್ನುತ್ತಾ ಜೀವನ ನಡೆಸುತ್ತಾ ಇದ್ದ. ನಂತರ ಮೊದಲ ಬಾರಿಗೆ ಬೆಂಕಿಯನ್ನ ಬಳಸಿ ಅಡುಗೆ ಮಾಡಲು ಶುರು ಮಾಡಿದ್ದು ಯಾವಾಗ ಅನ್ನೋದು ಒಂದು ವೈಜ್ಞಾನಿಕ ಪ್ರಶ್ನೆಯಾಗಿದೆ.

ಅಂದ ಹಾಗೇ ಈ ಅಧ್ಯಯನ, 16 ವರುಷಗಳ ನಿರಂತರ ಸಂಶೋಧನೆಯ ನಂತರ ಕಂಡುಕೊಂಡ ಅಂಶವಾಗಿದ್ದು, ಇದೂ ಜೋರ್ಡನ್ (Jordan ) ನದಿಯ ದಡದಲ್ಲಿ ಕಂಡು ಬಂದಿದ್ದ ಮೀನುಗಳ ಪಳೆಯುಳಿಕೆಗಳ ಮೇಲೆ ನಡೆಸಿದ ಅಧ್ಯಯನವಾಗಿದೆ. ಇಲ್ಲಿ ಪಳೆಯುಳಿಕೆಗಳಲ್ಲಿ ಕೇವಲ ಮೀನಿನ ಹಲ್ಲುಗಳು ಮಾತ್ರ ಕಂಡುಬಂದಿದೆ. ಈ ಪಳೆಯುಳಿಕೆಗಳು ಅಡುಗೆಗೆ ಬಳಸಿದ ಸುಳಿವನ್ನ ಕೊಟ್ಟಿದೆ. ಅಧ್ಯಯನಕಾರರ ಪ್ರಕಾರ 500 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮೀನಿನ ಮೂಳೆಗಳು ಮೃದುಗೊಂಡು ಕರಗಿಹೋಗಿರುವ ಸಾಧ್ಯತೆ ಇರುವುದರಿಂದ ಕೇವಲ ಮೀನಿನ ಹಲ್ಲುಗಳು ಮಾತ್ರ ಕಂಡುಬಂದಿದೆ ಎಂದೂ ವಿಶ್ಲೇಷಣೆ ಮಾಡುತ್ತಾರೆ. ಎಕ್ಸ್ -ರೇ ಪೌಡರ್ ಡಿಫ್ರಾಕ್ಷನ್ ತಂತ್ರಜ್ಞಾನವನ್ನ ಬಳಸಿಕೊಂಡು ಮೀನಿನ ಹಲ್ಲಿನಲ್ಲಿರುವ ಎನಮೆಲ್ (Enamel ) ಎಂಬ ಪದರದ ಮೇಲೆ ಅಧ್ಯಯನ ಮಾಡಿದಾಗ ಮೀನು ಅಡುಗೆಗೆ ಸೂಕ್ತವಾದ 500 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಒಡ್ಡಿಕೊಂಡಿತ್ತು ಎಂದೂ ತಿಳಿದು ಕೊಳ್ಳುವಲ್ಲಿ ಸಹಕಾರಿಯಾಯಿತು ಎಂದೂ ನೇಚರ್, ಇಕಾಲಜಿ ಮತ್ತೂ ಎವೊಲ್ಯೂಷನ್ ಎಂಬ ವಿಜ್ಞಾನ ಪತ್ರಿಕೆಯಲ್ಲಿ ವರದಿಯಾಗಿದೆ.

suddiyaana