ಬೆಳಗಾವಿಯಲ್ಲಿ ಸಿಲಿಂಡರ್ ಕೊರತೆಗೆ ಪರ್ಯಾಯ ಪರಿಹಾರ – ಹೋಟೆಲ್ ಮಾಲೀಕರಿಂದ ಬಯೋಮಾಸ್ ಒಲೆಗಳ ಬಳಕೆ

ಈಗ ಎಲ್ಲಿ ನೋಡಿದರೂ ಗ್ಯಾಸ್ ಪ್ರಾಬ್ಲಂ. ಸಿಲಿಂಡರ್ ಕೊರತೆಯಿಂದ ಹೋಟೆಲ್ ಮಾಲೀಕರ ಸಂಕಷ್ಟ ಹೇಳತೀರದಾಗಿದೆ. ಈಗ ಸರಿಹೋಗುತ್ತೆ, ನಾಳೆ ಸರಿ ಹೋಗುತ್ತೆ ಅಂತಾ ಕಾಯುತ್ತಿದ್ದವರಿಗೆ ಒಂದು ತಿಂಗಳಾದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ಇದೀಗ ಬೆಳಗಾವಿಯಲ್ಲಿ ಹೋಟೆಲ್ ಮಾಲೀಕರು ಈ ಸಮಸ್ಯೆಗೆ ಪರ್ಯಾಯ ಪರಿಹಾರ ಕಂಡುಕೊಂಡಿದ್ದಾರೆ.
ಇದನ್ನೂ ಓದಿ:ಗ್ರಾಹಕರಿಗೆ ಏಪ್ರಿಲ್ ಶಾಕ್! – ಎಲ್‌ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 195.50 ರೂ. ಏರಿಕೆ
ಬೆಳಗಾವಿಯಲ್ಲಿ ಸುಮಾರು 350ಕ್ಕೂ ಅಧಿಕ ಹೋಟೆಲ್‌ಗಳಿವೆ. ಪ್ರತಿದಿನ ಸುಮಾರು 1600 ಕಮರ್ಷಿಯಲ್ ಸಿಲಿಂಡರ್‌ಗಳ ಅಗತ್ಯವಿದೆ. ಆದರೆ, ಸದ್ಯ ಪೂರೈಕೆ ಆಗುತ್ತಿರುವುದು ಕೇವಲ 600 ಸಿಲಿಂಡರ್‌ಗಳು ಮಾತ್ರ. ಈ ದೊಡ್ಡ ಮಟ್ಟದ ಕೊರತೆಯಿಂದ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಈ ರೀತಿಯಾದರೆ ಹೋಟೆಲ್ ಉದ್ಯಮಕ್ಕೂ ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿಯೇ ಬೆಳಗಾವಿಯಲ್ಲಿ ಹೋಟೆಲ್ ಮಾಲೀಕರು ಬಯೋಮಾಸ್ ಒಲೆಗಳಿಗೆ ಮೊರೆ ಹೋಗಿದ್ದಾರೆ.
ಬೆಳಗಾವಿ ನಗರದಲ್ಲಿ ಮೊದಲು ಕೇವಲ 30 ಹೋಟೆಲ್‌ಗಳಲ್ಲಿ ಮಾತ್ರ ಬಯೋಮಾಸ್ ಒಲೆಗಳನ್ನು ಬಳಸಲಾಗುತ್ತಿತ್ತು. ಇದೀಗ 180ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಬಯೋಮಾಸ್ ಒಲೆಗಳನ್ನು ಬಳಕೆ ಮಾಡಲಾಗುತ್ತಿದೆ. ಬಯೋಮಾಸ್ ಒಲೆಗಳನ್ನು ಟಿಇಆರ್‌ಐ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿಯ ಉದ್ಯಮಿ ಸಮೀರ್ ಸುರೇಂದ್ರ ಕಣಬರಗಿ ಅವರು ತಮ್ಮ ಫಿನಿಕ್ಸ್ ಪ್ರೊಡಕ್ಟ್ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ಈ ಒಲೆಗಳನ್ನು ತಯಾರಿಸಿ ಪೂರೈಕೆ ಮಾಡುತ್ತಿದ್ದಾರೆ. ಕೃಷಿ ತ್ಯಾಜ್ಯ, ತೆಂಗಿನ ಚಿಪ್ಪು, ಕಟ್ಟಿಗೆ ಮುಂತಾದ ಜೈವಿಕ ಇಂಧನವನ್ನು ಬಳಸಿ ಕಾರ್ಯನಿರ್ವಹಿಸುವ ಈ ಒಲೆಗಳು ಸಾಮಾನ್ಯ ಕಟ್ಟಿಗೆ ಒಲೆಗಿಂತ ಸುಮಾರು ಶೇ.75ರಷ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿವೆ. ಗ್ಯಾಸ್ ವೆಚ್ಚದ ಹೋಲಿಕೆಯಲ್ಲಿ ಶೇ.70-80ರಷ್ಟು ಕಡಿಮೆ ಖರ್ಚಾಗುತ್ತದೆ. ಸ್ಟೀಮ್ ಉತ್ಪಾದನೆ ಮೂಲಕ ಇಡ್ಲಿ, ಹಾಲು ಹಾಗೂ ನೀರು ಕಾಯಿಸಲು ಸಹ ಉಪಯೋಗವಾಗುತ್ತಿದ್ದು, ಪರಿಸರ ಸ್ನೇಹಿ ಪರ್ಯಾಯವಾಗಿ ಸಹಕಾರಿಯಾಗಿದೆ. ಕಳೆದ ಒಂದು ದಶಕದಲ್ಲಿ ಬಂದಿದ್ದ ಬೇಡಿಕೆ, ಈಗ ಕೆಲವೇ ದಿನಗಳಲ್ಲಿ ಹೆಚ್ಚಾಗಿದೆ. ಹೋಟೆಲ್‌ಗಳ ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಬಯೋಮಾಸ್ ಗ್ಯಾಸಿಫೈರ್ ಬಳಕೆಗೆ ಮುಂದಾಗುತ್ತಿವೆ. ಈಗಾಗಲೇ ದೇಶಾದ್ಯಂತ ಸುಮಾರು 200 ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಕೆಯಲ್ಲಿದೆ.

ನೋಡಿರಿ

