ಸಿಖ್ ಬಂಡುಕೋರನನ್ನು ಉಳಿಸಿ ಭಾರತಕ್ಕೆ ಎಚ್ಚರಿಕೆ ಕೊಟ್ಟ ಅಮೆರಿಕ – ಬಣ್ಣ ಬದಲಿಸಿದ್ದೇಕೆ ದೊಡ್ಡಣ್ಣ?
ಭಾರತ ಎಷ್ಟೇ ಬಲಿಷ್ಠವಾಗಿದ್ದರೂ ಬೆನ್ನ ಹಿಂದೆ ಚೂರಿ ಹಾಕುವ ಕುತಂತ್ರಿಗಳೂ ಜಗತ್ತಿನೆಲ್ಲೆಡೆ ಇದ್ದಾರೆ. ಪಾಕಿಸ್ತಾನ, ಕೆನಡಾ ಸೇರಿದಂತೆ ವಿದೇಶಿ ನೆಲಗಳಲ್ಲಿ ನೆಲೆಯೂರಿರುವ ಭಾರತ ವಿರೋಧಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಲೇ ಇರುತ್ತಾರೆ. ಅಲ್ಲಿಂದಲೇ ಎಚ್ಚರಿಕೆ ನೀಡುತ್ತಾ ಭಾರತದ ನೆಮ್ಮದಿ ಕೆಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇಂತದ್ದೇ ಸಾಲಿಗೆ ಸೇರಿದ್ದ 2020ರಲ್ಲಿ ಉಗ್ರಗಾಮಿ ಎಂದು ಘೋಷಿಸಿದ್ದ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ, ಕೆನಡಾ ಪ್ರಜೆ, ಹಾಗೂ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ನನ್ನು ಇತ್ತೀಚೆಗಷ್ಟೇ ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಬಳಿಕ ಭಾರತ ಮತ್ತು ಕೆನಡಾಗಳ ನಡುವೆ ಭಾರೀ ಉದ್ವಿಗ್ನತೆ ತಲೆದೋರಿತ್ತು. ಉಭಯ ರಾಷ್ಟ್ರಗಳ ನಡುವಿನ ಈ ಬಿಕ್ಕಟ್ಟು ಇಂದಿಗೂ ಮುಂದುವರಿದಿದೆ. ಈಗಿರುವಾಗ್ಲೇ ಅಮೆರಿಕದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂಗ್ ಸಿಂಗ್ ಪನ್ನು ಹತ್ಯೆಗೆ ಯತ್ನಿಸಲಾಗಿದೆ. ಈ ಸಂಚನ್ನ ಅಮೆರಿಕ ವಿಫಲಗೊಳಿಸಿದೆ ಎನ್ನಲಾಗಿದೆ. ಪನ್ನು ಹತ್ಯೆಗೈಯುವ ಸಂಚಿನಲ್ಲಿ ಭಾರತ ಶಾಮೀಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಅಮೆರಿಕನ್-ಕೆನಡಿಯನ್ ಪೌರನಾಗಿರುವ ಗುರುಪತ್ವಂತ್ ಸಿಂಗ್ ಪನ್ಸು ಅಮೆರಿಕಾದ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಮುಖಂಡನಾಗಿದ್ದಾನೆ. ಭಾರತ ಸರ್ಕಾರವು ಈ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಗುರುತಿಸಿದೆ. ಅಮೆರಿಕಾದಲ್ಲಿ ಪನ್ನು ಹತ್ಯೆಗೆ ಸಂಚು ನಡೆದಿತ್ತಾ, ಅಮೆರಿಕ ಸರ್ಕಾರ ಎಚ್ಚರಿಕೆ ನೀಡಿತ್ತೇ ಎಂಬ ಕುರಿತು ತಿಳಿಸಲು ಪನ್ನು ನಿರಾಕರಿಸಿದ್ದಾನೆ. ಹತ್ಯೆಯಾದ ನಿಜ್ಜರ್ ನಂತೆಯೇ ಪನ್ನು ದಶಕಗಳ ಕಾಲದ ಸಿಖ್ ಪ್ರತ್ಯೇಕತಾವಾದಿ ಪ್ರತಿಪಾದಕರಾಗಿದ್ದಾನೆ. ಸಾಲದು ಎಂಬಂತೆ ಖಲಿಸ್ತಾನ್ ಎಂಬ ಹೆಸರಿನ ಸ್ವತಂತ್ರ ಸಿಖ್ ಸಂಘಟನೆಯೊಂದಿಗೆ ಭಾರತದಿಂದ ಪ್ರತ್ಯೇಕ ದೇಶಕ್ಕೆ ಬೇಡಿಕೆಯಿಟ್ಟಿದ್ದಾನೆ. ಎನ್ಐಎಗೆ ಮೋಸ್ಟ್ ವಾಂಟೆಡ್ ಅಗಿರುವ ಈ ಪಾಪಿ ವಿದೇಶಿ ನೆಲದಲ್ಲಿ ಇದ್ದುಕೊಂಡೇ ಭಾರತದ ವಿರುದ್ಧ ಉಗ್ರ ಕೃತ್ಯ ಎಸಗುತ್ತಿದ್ದಾನೆ. ಇದೀಗ ಈತನ ಅಮೆರಿಕದಲ್ಲಿ ಹತ್ಯೆ ಯತ್ನ ನಡೆದಿದ್ದು, ಇದೇ ವಿಚಾರ ಈಗ ಎರಡೂ ರಾಷ್ಟ್ರಗಳ ನಡುವೆ ಗೊಂದಲ ಸೃಷ್ಟಿ ಮಾಡಿದೆ ಎನ್ನಲಾಗ್ತಿದೆ.
ಇದನ್ನೂ ಓದಿ : ಮುಂಬೈ ದಾಳಿಕೋರ LeT ಉಗ್ರ ಸಂಘಟನೆ ನಿಷೇಧಿಸಿದ ಇಸ್ರೇಲ್ – ಭಾರತಕ್ಕಾಗಿ ಪಾಕಿಸ್ತಾನಕ್ಕೆ ಪೆಟ್ಟು..?
ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಯತ್ನಿಸಲಾಗಿದೆ. ಘೋಷಿತ ಖಾಲಿಸ್ತಾನಿ ಉಗ್ರ ಹಾಗೂ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಮುಖ್ಯಸ್ಥನಾಗಿರುವ ಪನ್ನು ಹತ್ಯೆ ಯತ್ನವನ್ನು ವಿಫಲಗೊಳಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಹಾಗೂ ಹತ್ಯೆ ಯತ್ನದ ಹಿಂದೆ ಭಾರತದ ಕೈವಾಡವಿತ್ತು ಎಂಬ ಕಳವಳ ವ್ಯಕ್ತಪಡಿಸಿರುವ ಅಮೆರಿಕ ಇದೇ ವಿಚಾರವಾಗಿ ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. ವರದಿಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರಿಕೆ ಮನವಿ ಮಾಡಿದ್ದು, ತಕ್ಷಣಕ್ಕೆ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಪ್ರಕಟಿಸಿದೆ. ರಾಜತಾಂತ್ರಿಕ ವಿಷಯಗಳು, ಗುಪ್ತಚರ ಸೇರಿದಂತೆ ವಿವಿಧ ಸಂಸ್ಥೆಗಳ ವಿಚಾರವಾಗಿ ತನ್ನ ಪಾಲುದಾರ ರಾಷ್ಟ್ರಗಳೊಂದಿಗೆ ನಡೆಸಿರುವ ಮಾತುಕತೆ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯೂ ತಿಳಿಸಿದೆ. ಇತ್ತೀಚೆಗಷ್ಟೇ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಕೆನಡಾ ಆರೋಪ ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ತನ್ನ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಯತ್ನವನ್ನು ವಿಫಲಗೊಳಿಸಿರೋದಾಗಿ ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕ ಹಂಚಿಕೊಂಡಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತಕ್ಕೆ ರಾಜತಾಂತ್ರಿಕ ಎಚ್ಚರಿಕೆಯ ಹೊರತಾಗಿ, ಅಮೆರಿಕ ಫೆಡರಲ್ ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ ಒಬ್ಬ ಶಂಕಿತನ ವಿರುದ್ಧ ಮೊಹರು ಮಾಡಿದ ದೋಷಾರೋಪಣೆಯನ್ನು ಸಹ ಸಲ್ಲಿಸಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ತಿಳಿಸಿದೆ. ಇನ್ನು ಇತ್ತೀಚೆಗಷ್ಟೇ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಕಳೆದ ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ನಡೆದ ಶೂಟೌಟ್‌ನಲ್ಲಿ ಹತನಾಗಿದ್ದ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಈ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ್ದರು. ಈ ಘೋಷಣೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ನಿಜ್ಜರ್ ಹತ್ಯೆ ಸಂಬಂಧದ ಸಾಕ್ಷಿಯನ್ನು ಬಹಿರಂಗಪಡಿಸುವಂತೆ ಕೆನಡಾಗೆ ಭಾರತ ಸವಾಲು ಹಾಕಿದೆ. ಗುರುಪತ್ವಂತ್ ಸಿಂಗ್ ಪನ್ನು ಕಳೆದ ಕೆಲವು ದಿನಗಳಿಂದ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ನಲ್ಲಿ ಖಲಿಸ್ತಾನ್ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದಾನೆ. ಆತ ಹಲವಾರು ಸಂದರ್ಭಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೈ ಶಂಕರ್ ಮತ್ತು ಅಜಿತ್ ದೋವಲ್‌ಗೆ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಬ್ಲಾಸ್ಟ್ ಮಾಡೋದಾಗಿ ಬೆದರಿಕೆ ಹಾಕಿದ್ದ.
ಭಾರತದ ವಿರುದ್ಧ ಪದೇಪದೆ ಕಾನೂನು ಬಾಹಿರ ಕೃತ್ಯ ಎಸಗುವ ಗುರುಪತ್ವಂತ್ ಸಿಂಗ್ ಪನ್ನು ನವೆಂಬರ್ 4ರಂದು ವಿಡಿಯೋ ಬಿಡುಗಡೆ ಮಾಡಿದ್ದ. ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಸಿಖ್ಖರಿಗೆ ಬೆದರಿಕೆ ಹಾಕಿದ್ದ. ನವೆಂಬರ್ 19ರಂದು ಏರ್ ಇಂಡಿಯಾ ವಿಮಾನವನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ. ಅಸಲಿಗೆ ನವೆಂಬರ್ 19ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ಆಯೋಜನೆಗೊಂಡಿತ್ತು. ಆವತ್ತೇ ಉಗ್ರ ಕೃತ್ಯ ಎಸಗೋದಾಗಿ ಪನ್ನು ವಿಡಿಯೋ ರಿಲೀಸ್ ಮಾಡಿದ್ದ. ಏರ್ ಇಂಡಿಯಾ ವಿಶ್ವದಾದ್ಯಂತ ತನ್ನ ವಿಮಾನಗಳ ಸಂಚಾರವನ್ನು ನಿಲ್ಲಿಸಬೇಕು. ನವೆಂಬರ್ 19ರಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಬೇಕು ಎಂದು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಪನ್ನು ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು.
ಈಗಾಗಲೇ NIA ವಿಶೇಷ ನ್ಯಾಯಾಲಯವು 2021ರ ಫೆಬ್ರವರಿಯಲ್ಲೇ ಪನ್ನು ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಿತ್ತು. 2022ರ ನವೆಂಬರ್ ನಲ್ಲಿ ಆತನ ಹೆಸರನ್ನು ಘೋಷಿತ ಅಪರಾಧಿ ಎಂದು ಘೋಷಿಸಿತ್ತು. ಭಾರತದ ಮೇಲೆ ವಿಷ ಕಾರುವ ಖಲಿಸ್ತಾನಿ ಉಗ್ರರಿಗೆ ಭಾರತವನ್ನು ವಿಭಜಿಸಿ ಹಲವು ದೇಶಗಳನ್ನ ಸೃಷ್ಟಿಸಬೇಕು ಅನ್ನೋದು ಇವರ ಅಜೆಂಡಾ ಆಗಿದೆ. ಗುರುಪತ್ವಂತ್ ಸಿಂಗ್ ಪನ್ನು ಕೂಡ ಭಾರತವನ್ನು ವಿಭಜಿಸುವ ಹುನ್ನಾರ ನಡೆಸಿದ್ದ ಅನ್ನೋದು ತನಿಖಾ ಸಂಸ್ಥೆಗಳ ಮೂಲಗಳಿಂದ ಹೊರಬಿದ್ದಿತ್ತು. ಇದೇ ಕಾರಣಕ್ಕೆ ಪನ್ನುಗೆ ಸೇರಿದ ಆಸ್ತಿಗಳನ್ನು ಎನ್‌ಐಎ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಪಂಜಾಬ್ ರಾಜ್ಯದ ಚಂಡೀಗಢ ಹಾಗೂ ಅಮೃತಸರದಲ್ಲಿ ಇದ್ದ ಆತನ ಮನೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಷ್ಟಕ್ಕೂ ಈತನಿಗೆ ಭಾರತದ ಮೇಲೆ ಸಿಟ್ಟೇಕೆ..? ಆತನ ಉದ್ಧಟತನ ಎಂಥಾದ್ದು ಅನ್ನೋದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನಾಗಿರುವ ಪನ್ನು, ಭಾರತ ದೇಶದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ರೀತಿ ಹಾಗೂ ಸವಾಲೊಡ್ಡುವ ರೀತಿ ಆಡಿಯೋ ಸಂದೇಶಗಳನ್ನು ರವಾನಿಸುತ್ತಿದ್ದ. ಅದ್ರಲ್ಲೂ ಪಂಜಾಬ್ ರಾಜ್ಯವನ್ನು ಖಲಿಸ್ತಾನ ದೇಶ ಮಾಡುವ ಜೊತೆಯಲ್ಲೇ ಕಾಶ್ಮೀರ ಪ್ರತ್ಯೇಕ ರಾಷ್ಟ್ರ ಆಗಬೇಕು, ಮುಸ್ಲಿಮರ ದೇಶ ಆಗಬೇಕು ಎಂದು ಬಯಸಿದ್ದ ಅನ್ನೋ ಮಾಹಿತಿ ಇದೆ. ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ದ್ವೇಷ, ಭೀತಿ ಹರಡುವ ಕೆಲಸ ಮಾಡುತ್ತಿರುವ ಪನ್ನು, ಭಯೋತ್ಪಾದಕ ಕೃತ್ಯಗಳ ಮೂಲಕ ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಡ್ ಆಗಿದ್ದ. 2019ರಿಂದಲೂ ಗುರುಪತ್ವಂತ್ ಸಿಂಗ್ ಪನ್ನು ಎನ್‌ಐಎ ವಾಂಟೆಡ್ ಲಿಸ್ಟ್‌ನಲ್ಲಿ ಇದ್ದಾನೆ. ಹಾದಿ ತಪ್ಪಿದ ಯುವಕರನ್ನೇ ಗುರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಪನ್ನು, ತನ್ನ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಹೆಸರಲ್ಲಿ ಇಂಟರ್ನೆಟ್ ಮೂಲಕವೂ ದ್ವೇಷ ಹಾಗೂ ಮತಾಂಧತೆ ಹರಡುವ ಕೆಲಸ ಮಾಡುತ್ತಿದ್ದ. ಯುವಕರು ಭಯೋತ್ಪಾದಕ ಕೃತ್ಯ ಎಸಗಲು ಪ್ರಚೋದಿಸುತ್ತಿದ್ದ. ಈ ಮೂಲಕ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ಮಾಡಲು ಹುರಿದುಂಬಿಸುತ್ತಿದ್ದ. ಹೀಗಾಗಿ, 2019ರಲ್ಲೇ ಭಾರತ ಸರ್ಕಾರವು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯನ್ನು ನಿಷೇಧ ಮಾಡಿತ್ತು. ಇನ್ನು ಜುಲೈ 2020ರಲ್ಲೇ ಭಾರತ ಸರ್ಕಾರದ ಗೃಹ ಇಲಾಖೆ ಗುರುಪತ್ವಂತ್ ಸಿಂಗ್ ಪನ್ನುನನ್ನು ಉಗ್ರಗಾಮಿ ಎಂದು ಹೆಸರಿಸಿತ್ತು. ಈತನ ಮಾಹಿತಿಯನ್ನು ಇಂಟರ್‌ಪೋಲ್‌ಗೂ ನೀಡಿತ್ತು. ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಆಗ್ರಹಿಸಿತ್ತು. ಆದರೆ, ಭಾರತದ ಮನವಿಯನ್ನು ಇಂಟರ್‌ಪೋಲ್ ತಿರಸ್ಕರಿಸಿತ್ತು. ಇತ್ತೀಚೆಗಷ್ಟೇ ಗುರುಪತ್ವಂತ್ ಸಿಂಗ್ ಪನ್ನು ಕೆನಡಾದ ಭಾರತೀಯ ಹೈಕಮಿಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ. ಇದೇ ವೇಳೆ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಭಾರತ ಸರ್ಕಾರದ ಏಜೆಂಟರೇ ಹತ್ಯೆ ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪ ಮಾಡಿದ್ದರು. ಭಾರತ ಸರ್ಕಾರದ ವಿರುದ್ಧ ಯಾವುದೇ ಸಾಕ್ಷ್ಯ ನೀಡದೆ ನಿರಾಧಾರ ಆರೋಪ ಮಾಡಿದ್ದ ಕೆನಡಾ ಪ್ರಧಾನಿ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾರತ ಸರ್ಕಾರ ಕೆನಡಾ ದೇಶದ ವಿರುದ್ಧ ರಾಜತಾಂತ್ರಿಕ ಸಮರವನ್ನೇ ನಡೆಸಿತ್ತು.
ಪಾಕಿಸ್ತಾನ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಯೂರಿರುವ ಉಗ್ರರು ಅಲ್ಲಿಂದಲೇ ವಿಧ್ವಂಸಕ ಕೃತ್ಯಗಳನ್ನ ಎಸಗುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ, ಕೆನಡಾ ಸೇರಿದಂತೆ ಹಲವೆಡೆ 16 ಉಗ್ರರು ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಹತ್ಯೆಗಳೆಲ್ಲ ಆಕಸ್ಮಿಕವೇ ಅಥವಾ ಯೋಜಿತ ಹತ್ಯೆಗಳೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಅದ್ರಲ್ಲೂ ಭಾರತದ ಬೇಹುಗಾರಿಕೆ ಸಂಸ್ಥೆಗಳಿಂದ ನಿಯೋಜಿತರಾದ ಏಜೆಂಟರು ವಿದೇಶಿ ನೆಲದಲ್ಲಿ ಈ ಉಗ್ರರನ್ನು ಕೊಲ್ಲುತ್ತಿದ್ದಾರೆಯೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಯಾಕಂದ್ರೆ ಹತ್ಯೆಗೀಡಾದವರೆಲ್ಲಾ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾದವರು ಅಥವಾ ಸಂಚಿನಲ್ಲಿ ಪಾಲ್ಗೊಂಡವರೇ ಆಗಿದ್ದರು. ಒಂದಿಲ್ಲೊಂದು ದಿನ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾದವರೇ ಆಗಿದ್ದರು. ಇದೀಗ ಪನ್ನುವಿನ ಹತ್ಯೆ ಯತ್ನ ಬೇರೆಯದ್ದೇ ರೂಪ ಪಡೆದಿದೆ. ಭಾರತದ ಕೈವಾಡದ ಶಂಕೆಯಲ್ಲಿ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ. ಹೀಗಾಗಿ ದೇಶದ ಹಿತದೃಷ್ಟಿಯಿಂದ ಭಾರತ ಯಾವ ರೀತಿಯ ಹೆಜ್ಜೆ ಇಡುತ್ತೆ ಅನ್ನೋದನ್ನ ಕಾದು ನೋಡಬೇಕು.