ಮಗುವಿಗೆ ಜನ್ಮ ಕೊಟ್ಟ ಮೇಲೆ ಕೈ ಕಾಲು ಕಳೆದುಕೊಂಡ ಅಮ್ಮ- ಎರಡು ಮಕ್ಕಳ ತಾಯಿ ಬದುಕಿದ್ದೇ ಹೆಚ್ಚು

ಮಗುವಿಗೆ ಜನ್ಮ ಕೊಟ್ಟ ಮೇಲೆ ಕೈ ಕಾಲು ಕಳೆದುಕೊಂಡ ಅಮ್ಮ- ಎರಡು ಮಕ್ಕಳ ತಾಯಿ ಬದುಕಿದ್ದೇ ಹೆಚ್ಚು

ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ತಾಯಿಯೊಬ್ಬರು ಮುದ್ದು ಕಂದಮ್ಮನಿಗೆ ಜನ್ಮ ನೀಡಿದ್ದರು. ಆದರೆ, ಒಂದು ಜೀವಕ್ಕೆ ಜನ್ಮ ಕೊಟ್ಟ ಆ ತಾಯಿ ಜೀವಮಾನ ಪೂರ್ತಿ ನಡೆಯಲಾರದ ಸ್ಥಿತಿಗೆ ತಲುಪಿದ್ದಾರೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ.  ಎರಡನೇ ಮಗುವಿಗೆ ಜನ್ಮನೀಡಿದ್ದ ಮಹಿಳೆ, ನಂತರ ಉಂಟಾದ ಸೋಂಕಿನಿಂದಾಗಿ ತನ್ನ ಎರಡೂ ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಟೆಕ್ಸಾಸ್‌ನ ಪ್ಲೆಸೆಂಟಾನ್‌ನ 29 ವರ್ಷದ ಕ್ರಿಸ್ಟಿನಾ ಪಾಚೆಕೊ, ಸಿ- ಸೆಕ್ಷನ್‌ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ನಂತರ ಲ್ವಾಡ್ರಪಲ್ ಆಂಪ್ಯುಟೀ ಅಂದರೆ, ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಮೊದಲ ಮಗುವಿಗೆ ಎರಡು ವರ್ಷವಾಗಿತ್ತು. 2022ರ ಅಕ್ಟೋಬರ್ 24ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ ಆಗ ನಡೆಸಿದ್ದ ಸಿಸೇರಿಯನ್ ನಿಂದ ಭವಿಷ್ಯವೇ ಕತ್ತಲಾಗಿ ಹೋಗಿದೆ.

ಇದನ್ನೂ ಓದಿ:  ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಿದ್ದ 11 ವರ್ಷದ ಬಾಲಕಿ ದಿಢೀರ್ ನಿವೃತ್ತಿಗೆ ಮುಂದಾಗಿದ್ದೇಕೆ..?  

ಸಿಸೇರಿಯನ್ ಮೂಲಕ ಹೆರಿಗೆಯಾದ ಕ್ರಿಸ್ಟಿನಾಗೆ ಎರಡು ದಿನಗಳ ಬಳಿಕ ಜ್ವರ ಶುರುವಾಗಿತ್ತು. ಸಿ- ಸೆಕ್ಷನ್‌ ಚೇತರಿಕೆ ವೇಳೆ ಜ್ವರ ಬರುವುದು ಕೂಡ ಸಾಮಾನ್ಯ ಎಂದು ಅವರು ಭಾವಿಸಿದ್ದರು. ಅವರಿಗೆ ನರ್ಸ್ ಒಬ್ಬರು ಐಬುಪ್ರೊಫೆನ್ ಮಾತ್ರೆ ನೀಡಿದ್ದರು. ಆದರೆ ಅವರ ಅನಾರೋಗ್ಯ ಸ್ಥಿತಿ ಮುಂದುವರಿದಿತ್ತು. ಬಳಿಕ ವೈದರೊಬ್ಬರ ಬಳಿ ಪರೀಕ್ಷೆಗೆ ತೆರಳಿದಾಗ ಅವರು ಸ್ಥಳೀಯ ಎಮರ್ಜೆನ್ಸಿ ಕೊಠಡಿಗೆ ಕಳುಹಿಸಿದ್ದರು. ಅಲ್ಲಿಂದ ಕ್ರಿಸ್ಟಿನಾ ಅವರನ್ನು ಸಾನ್ ಆಂಟೋನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಆಕೆಯ ದೇಹವು ಸೆಪ್ಟಿಕ್ ಶಾಕ್‌ಗೆ ಒಳಗಾಗಿರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಅವರ ದೇಹದಲ್ಲಿ ನಂಜಿನ ಅಂಶಗಳು ಹೆಚ್ಚಾಗಿತ್ತು. “ನನಗೆ ಉಸಿರಾಡಲೂ ಸಾಧ್ಯವಾಗುತ್ತಿರಲಿಲ್ಲ. ಏನನ್ನೂ ನೋಡುವುದಕ್ಕೂ ಆಗುತ್ತಿರಲಿಲ್ಲ. ಎಲ್ಲವೂ ನಿಧಾನವಾಗಿ ಮಸುಕಾಗಲು ಆರಂಭಿಸಿತ್ತು. ದಯವಿಟ್ಟು ನಮ್ಮ ಬಳಿ ವಾಪಸ್ ಬಾ, ನಿನ್ನ ಮಕ್ಕಳಿಗೆ ನಿನ್ನ ಅಗತ್ಯವಿದೆ. ನನಗೆ ನೀನು ಬೇಕು. ನನಗೆ ಮತ್ತು ನಮ್ಮ ಮಕ್ಕಳಿಗೆ ಸಹಾಯ ಮಾಡಲು ನಿನ್ನ ಅಗತ್ಯವಿದೆ’ ಎಂದು ನನ್ನ ಗಂಡ ಹೇಳುವುದು ಕೇಳಿಸಿತ್ತಷ್ಟೇ. ನಾನು ನೆನಪಿನಲ್ಲಿಟ್ಟುಕೊಂಡಿರುವ ಕೊನೆಯ ಮಾತುಗಳಿವು ಎಂದು ಕ್ರಿಸ್ಟಿನಾ ಹೇಳಿದ್ದಾರೆ.
ಕ್ರಿಸ್ಟಿನಾ ಅವರ ಪ್ರಕರಣದಲ್ಲಿ ಸೋಂಕು ಅವರ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳಿಗೆ ಹಾನಿ ಮಾಡಲು ಆರಂಭಿಸಿತ್ತು. ಕೊನೆಗೂ ಕ್ರಿಸ್ಟಿನಾರನ್ನು ಉಳಿಸಲು ವೈದ್ಯರು ಅವರ ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದರು. ಮೂರು ತಿಂಗಳು ಆಸ್ಪತ್ರೆಯಲ್ಲಿದ್ದ ಕ್ರಿಸ್ಟಿನಾ ಜನವರಿಯಲ್ಲಿ ಮನೆಗೆ ಮರಳಿದ್ದಾರೆ. ಗಾಯಗಳು ಗುಣಮುಖವಾಗಿದ್ದು, ಬದುಕುವ ಛಲ ಬಲಗೊಂಡಿದೆ. ಅಂಗವೈಕಲ್ಯದ ನಡುವೆಯೇ ಮಕ್ಕಳ ಜತೆ ಆಡಲು ಪ್ರಯತ್ನಿಸುತ್ತಿದ್ದಾರೆ.

suddiyaana