ಭಾರತ ರಷ್ಯಾದಿಂದ ಇಂಧನ ಖರೀದಿಸಲ್ಲಎಂದ ಟ್ರಂಪ್ – ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ

ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ವಾಷಿಂಗ್ಟನ್ ಜೊತೆಗೆ ನವದೆಹಲಿ ಶಕ್ತಿ ಸಹಕಾರ ಹೆಚ್ಚಿಸುವ ಕುರಿತು ಆಸಕ್ತಿ ತೋರಿಸಿದ್ದು, ಈ ಕುರಿತು ಸದ್ಯ ಎರಡು ದೇಶಗಳ ನಡುವೆ ಚರ್ಚೆ ಸಾಗಿದೆ ಎಂದು ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, ಅಮೆರಿಕಕ್ಕೆ ಸಂಬಂಧಿಸಿದಂತೆ ನಾವು ಹಲವು ವರ್ಷಗಳಿಂದ ನಮ್ಮ ಇಂಧನ ಸಂಗ್ರಹಣೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದೊಂದು ದಶಕದಿಂದ ಇದು ಸ್ಥಿರವಾದ ಪ್ರಗತಿ ಕಾಣುತ್ತಿದ್ದು, ಸದ್ಯದ ಆಡಳಿತವೂ ಭಾರತದೊಂದಿಗೆ ಶಕ್ತಿಯುತ ಸಹಕಾರದಲ್ಲಿ ಆಳವಾದ ಆಸಕ್ತಿ ಹೊಂದಿದ್ದು, ಚರ್ಚೆ ಸಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದೆ.
ಇದನ್ನೂ ಓದಿ: ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ಅವರನ್ನು ನೋಡಿ ಭಯಗೊಂಡಿದ್ದಾರೆ – ರಾಹುಲ್ ಗಾಂಧಿ
ಬುಧವಾರ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್, ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಭರವಸೆ ನೀಡಿದೆ. ಅದನ್ನು ತಕ್ಷಣಕ್ಕೆ ಮಾಡಲಾಗುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದರು. ಭಾರತವೂ ಗಮನಾರ್ಹ ಪ್ರಮಾಣದಲ್ಲಿ ತೈಲ ಮತ್ತು ಗ್ಯಾಸ್ ಆಮದು ಮಾಡಿಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದ್ದು, ಇಂಧನದ ಅಸ್ಥಿರ ಸನ್ನಿವೇಶದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ಆಮದು ನೀತಿಗಳು ಸಂಪೂರ್ಣವಾಗಿ ಈ ಉದ್ದೇಶದಿಂದ ಮಾರ್ಗದರ್ಶಿತವಾಗಿವೆ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಪ್ರಮುಖ ಎರಡು ಗುರಿಗಳಾಗಿವೆ. ಇದು ನಮ್ಮ ಇಂಧನ ಮೂಲವನ್ನು ವಿಶಾಲ ಆಧಾರದ ಮೇಲೆ ಪಡೆಯುವುದಾಗಿದೆ. ಅಷ್ಟೇ ಅಲ್ಲ ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ಸೂಕ್ತವಾದಂತೆ ವೈವಿಧ್ಯಗೊಳಿಸುವುದನ್ನು ಒಳಗೊಂಡಿರುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಟ್ರಂಪ್ ಆಡಳಿತವು ವಿಧಿಸಿದ ಸುಂಕ ಹೆಚ್ಚಳ ಪ್ರಸಕ್ತ ಹಣಕಾಸು ವರ್ಷದ (ಏಪ್ರಿಲ್-ಸೆಪ್ಟೆಂಬರ್) ಮೊದಲಾರ್ಧದಲ್ಲಿ ಅಮೆರಿಕಕ್ಕೆ ಭಾರತದ ರಫ್ತು 45.82 ಬಿಲಿಯನ್ ಡಾಲರ್ಗೆ ಏರಿಕೆ ಕಾಣುವಂತೆ ಮಾಡಿದೆ . ಇದು ಕಳೆದ ವರ್ಷದ ಇದೇ ಅವಧಿಯಲ್ಲಿನ 40.42 ಬಿಲಿಯನ್ ಡಾಲರ್ಗೆ ಹೋಲಿಸಿದರೆ ಶೇಕಡಾ 13.3 ರಷ್ಟು ಹೆಚ್ಚಳವಾಗಿದೆ.
ಭಾರತವು ಸಂಸ್ಕರಣಾಗಾರಗಳ ಸಂರಚನೆಯನ್ನು ಬದಲಾಯಿಸದೆಯೇ ಅಮೆರಿಕದಿಂದ 12ರಿಂದ 13 ಬಿಲಿಯನ್ ಡಾಲರ್ ಮೌಲ್ಯದ ಹೆಚ್ಚಿನ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳಬಹುದು. ಸರ್ಕಾರವು ಸರಿಯಾದ ಬೆಲೆಯಲ್ಲಿ ಲಭ್ಯತೆಗೆ ಒಳಪಟ್ಟು ದೇಶದ ಇಂಧನ ಆಮದು ಬಂಡವಾಳವನ್ನು ವೈವಿಧ್ಯಗೊಳಿಸಲು ಉತ್ಸುಕವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ನಡುವೆ ಭಾರತದ ಮುಖ್ಯ ಸಮಾಲೋಚಕ ರಾಜೇಶ್ ಅಗರ್ವಾಲ್ ಬುಧವಾರ ಅಮೆರಿಕಕ್ಕೆ ತೆರಳಿದ್ದಾರೆ. ಈಗಾಗಲೇ ಮಾತುಕತೆ ತಂಡವು ಅಮೆರಿಕದಲ್ಲಿದ್ದು, ದ್ವಿಪಕ್ಷೀಯ ಬದ್ಧತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಭಾರತವು ಅಮೆರಿಕದಿಂದ ಹೆಚ್ಚಿನ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇದು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡುವ ಒಂದು ಹೆಜ್ಜೆಯಾಗಿದೆ.

ನೋಡಿರಿ

