ಭಾರತಕ್ಕೆ ಆಗಮಿಸಿದ ಅಮೆರಿಕಾ ಉಪಾಧ್ಯಕ್ಷ – ಭಾರತೀಯ ಉಡುಗೆಯಲ್ಲಿ ಜೆಡಿ ವ್ಯಾನ್ಸ್ ಮಕ್ಕಳ ಜಾಲಿ

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಮೂವರು ಮಕ್ಕಳು ಹಾಗೂ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ಪಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಡಿ ವ್ಯಾನ್ಸ್ ಅವರ ಕುಟುಂಬವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಇಲ್ಲಿ ಜೆಡಿ ವ್ಯಾನ್ಸ್ ಅವರಿಗೆ ಭಾರತೀಯ ಮೂರು ಸೇನೆಯಿಂದ ಔಪಚಾರಿಕ ಗೌರವ ರಕ್ಷೆ ನೀಡಲಾಯ್ತು. ಇದೇ ವೇಳೆ ಜೆಡಿ ವ್ಯಾನ್ಸ್ ಅವರ ಪತ್ನಿ ಹಾಗೂ ಪೋಷಕರು ಹಾಗೂ ಮೂವರು ಮಕ್ಕಳಲ್ಲಿ ಪುತ್ರರಾದ ಇವಾನ್, ವಿವೇಕ್ ಹಾಗೂ ಮಗಳು ಮಿರಾಬೆಲ್ ವ್ಯಾನ್ಸ್ ಅವರು ಭಾರತೀಯ ಧಿರಿಸಿನಲ್ಲಿ ಕಂಗೊಳಿಸಿದರು. ಗಂಡು ಮಕ್ಕಳಾದ ಇವಾನ್ ಹಾಗೂ ವಿವೇಕ್ ಕುರ್ತಾ ಫೈಜಾಮ್ ಧರಿಸಿದ್ದರೆ, ಪುತ್ರಿ ನೀಲಿ ಬಣ್ಣದ ಸೂಟ್ ಧರಿಸಿದ್ದಳು.
ವ್ಯಾನ್ಸ್ ಮಕ್ಕಳಲ್ಲಿ ಹಿರಿಯವನಾದ ಇವಾನ್ ಭಾರತ ಪ್ರವಾಸಕ್ಕೆ ನೀಲಿ ಬಣ್ಣದ ಕುರ್ತಾ ಧರಿಸಿದ್ದರೆ, ಆತನ ಸಹೋದರ ವಿವೇಕ್ ಹಳದಿ ಬಣ್ಣದ ಕುರ್ತಾ ಧರಿಸಿದ್ದರು. ಮೊದಲಿಗೆ ಜೆಡಿ ವ್ಯಾನ್ಸ್ ಹಾಗೂ ಪತ್ನಿ ವಿಮಾನವಿಳಿದು ಬಂದರೆ ನಂತರ ಗಂಡು ಮಕ್ಕಳಾದ ಇವಾನ್ ಹಾಗೂ ವಿವೇಕ್ ಆಗಮಿಸಿದರು. ನಂತರ 3 ವರ್ಷದ ಪುತ್ರಿ ಮೀರಾಬೆಲ್ ವ್ಯಾನ್ಸೆಯನ್ನು ಅವರ ಕುಟುಂಬದ ಸದಸ್ಯರೊಬ್ಬರು ಕೈ ಹಿಡಿದುಕೊಂಡು ವಿಮಾನದಿಂದ ಇಳಿಸುತ್ತಿದ್ದರು. ಈ ವೇಳೆ ಜೆಡಿ ವ್ಯಾನ್ಸೆ ಅವರು ಮೇಲೆ ಹೋಗಿ ಮಗಳನ್ನು ಎತ್ತಿಕೊಂಡು ಕೆಳಗೆ ಬಂದರು. ಇಡೀ ಕುಟುಂಬವನ್ನು ಸಚಿವ ಅಶ್ವಿನ್ ವೈಷ್ಣವ್ ತಾಮ್ರಕ್‌ನಲ್ಲಿ ನಿಂತು ಸ್ವಾಗತಿಸಿದರು.
ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕುಟುಂಬದೊಂದಿಗೆ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿ ವ್ಯಾನ್ಸ್ ಕುಟುಂಬಕ್ಕೆ ಇಂದು ಸಂಜೆ ಔತಣಕೂಟ ಆಯೋಜಿಸಿದ್ದಾರೆ. ಜೆಡಿ ವ್ಯಾನ್ಸ್ ಅವರ ಜೊತೆ ಐದು ಸದಸ್ಯರ ನಿಯೋಗವೂ ಇದೆ. ಇವರಲ್ಲಿ ಪೆಂಟಗಾನ್ ಹಾಗೂ ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟನ್ನು ಪ್ರತಿನಿಧಿಸುವ ಸದಸ್ಯರು ಇದ್ದಾರೆ.