ವಿಶ್ವದಾದ್ಯಂತ ಪತನಗೊಂಡಿದ್ದ UFO, ಅನ್ಯಗ್ರಹ ಜೀವಿಗಳ ಶವಗಳು ಅಮೆರಿಕ ವಶದಲ್ಲಿ!

ವಿಶ್ವದಾದ್ಯಂತ ಪತನಗೊಂಡಿದ್ದ UFO, ಅನ್ಯಗ್ರಹ ಜೀವಿಗಳ ಶವಗಳು ಅಮೆರಿಕ ವಶದಲ್ಲಿ!

ಅನ್ಯಗ್ರಹಗಳಲ್ಲಿ ಮಾನವರಂಥ ಜೀವಿಗಳು ಇರಬಹುದೇ ಎಂಬ ಪ್ರಶ್ನೆ ಸದಾ ಕಾಲ ಕುತೂಹಲ ಮತ್ತು ಜಿಜ್ಞಾಸೆ ಯನ್ನು ಮೂಡಿಸಿದೆ. ಕೆಲವರು ವಿಶ್ವದಲ್ಲಿ ಮನುಷ್ಯರು ಇರುವುದು ನಮ್ಮ ಭೂಮಿಯಲ್ಲಿ ಮಾತ್ರ ಎನ್ನುತ್ತಾರೆ. ಆದರೆ, ವಿಜ್ಞಾನಿಗಳಿಗೆ ಮಾತ್ರ ಇನ್ನೆಲ್ಲಾದರೂ ನಮ್ಮಂಥೋರು ಇರಬಹುದು ಎನ್ನುವ ಆಶಯ. ಹಾಗಾಗಿಯೇ ವಿಜ್ಞಾನಿಗಳ ನೂರಾರು ಪೀಳಿಗೆಗಳು ಕಳೆದರೂ ಹುಡುಕಾಟ ಮುಂದುವರಿದಿದೆ. ಕಳೆದ ಕೆಲವು ತಿಂಗಳ ಹಿಂದೆ ಯುಎಫ್‌ಒಗಳು ಮತ್ತು ಏಲಿಯನ್ಸ್‌ಗಳು ಅಮೆರಿಕ ಸರ್ಕಾರದ ವಶದಲ್ಲಿ ಇವೆ ಎಂದು ಅಮೆರಿಕದ ಮಾಜಿ ಗುಪ್ತಚರ ಇಲಾಖೆ ಅಧಿಕಾರಿ ಡೇವಿಡ್ ಗ್ರುಸ್ಚ್ ಹೇಳಿದ್ದರು. ಮೆಕ್ಸಿಕೋ ದೇಶದ ಸಂಸತ್‌ ಭವನದಲ್ಲಿ ಅನ್ಯ ಗ್ರಹ ಜೀವಿಗಳ ಮೃತ ದೇಹ ಎನ್ನಲಾದ ವಿಚಿತ್ರ ವಸ್ತುಗಳನ್ನು ಪ್ರದರ್ಶನ ಮಾಡಲಾಗಿತ್ತು. ಇದು ವಿಶ್ವದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಪತನಗೊಂಡಿದ್ದ ಯುಎಫ್‌ಒ (ಗುರುತಿಸಲಾಗದ ಹಾರುವ ವಸ್ತು) ವಾಹನಗಳು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ವಶದಲ್ಲಿದೆ ಎಂದು ಡೇಲಿ ಮೇಲ್ ವರದಿ ಮಾಡಿದೆ.

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು 1‌ ದಿನ ಮಾತ್ರ ಅವಕಾಶ! – ಯಾವ ಯಾವ ದಾಖಲೆಗಳು ಬೇಕು?

ಹೌದು, ಯುಎಫ್‌ಒ ಹಾಗೂ ಏಲಿಯನ್‌ ಶವಗಳನ್ನು ವಿಶ್ವದ ದೊಡ್ಡಣ್ಣ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಇಟ್ಟುಕೊಂಡಿದೆ ಎಂಬ ವಿಚಾರ ಆಗಾಗ ವಿಶ್ವದಾದ್ಯಂತ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಪತನಗೊಂಡಿದ್ದ 9 ಯುಎಫ್‌ಒ ವಾಹನಗಳು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ವಶದಲ್ಲಿದೆ. ಯುಎಫ್‌ಒಗಳನ್ನು ಅಮೆರಿಕದ ಸಿಐಎ ತನ್ನ ವಶಕ್ಕೆ ತೆಗೆದುಕೊಂಡಿದ್ದು, ರಹಸ್ಯ ಸ್ಥಳದಲ್ಲಿ ಸಂಗ್ರಹಿಸಿದೆ ಎಂದು ಡೇಲಿ ಮೇಲ್ ವರದಿಯಲ್ಲಿ ವಿವರಿಸಲಾಗಿದೆ.

ಅಮೆರಿಕದ ಬೇಹುಗಾರಿಕಾ ಪಡೆ ಸಿಐಎ, ಒಂದು ರಹಸ್ಯ ತಂಡವನ್ನು ಹೊಂದಿದೆ. ಈ ತಂಡಕ್ಕೆ ಆಫೀಸ್ ಆಫ್ ಗ್ಲೋಬಲ್ ಅಕ್ಸೆಸ್ (ಒಜಿಎ) ಎಂದು ಕರೆಯಲಾಗುತ್ತದೆ. ಈ ತಂಡದ ಸದಸ್ಯರು ವಿಶ್ವಾದ್ಯಂತ ಯುಎಫ್‌ಒ ಪತನವಾದ ಸ್ಥಳಕ್ಕೆ ಧಾವಿಸಿ ಅಲ್ಲಿ ಸಿಗುವ ಭಗ್ನಗೊಂಡ ಯುಎಫ್‌ಒ ವಾಹನಗಳನ್ನು ಸಂಗ್ರಹಿಸಿ ಅಮೆರಿಕಕ್ಕೆ ತಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದೊಂದು ಅತ್ಯಂತ ರಹಸ್ಯ ಕಾರ್ಯಾಚರಣೆಯಾಗಿದ್ದು, ಈವರೆಗೂ ಈ ತಂಡದ ಸದಸ್ಯರು ‘ಮಾನವೇತರ ವಾಹನ’ಗಳಾದ 9 ಯುಎಫ್‌ಒಗಳನ್ನ ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಸಂಬಂಧ ಹಲವು ತಜ್ಞರು ಹಾಗೂ ನಂಬಲರ್ಹ ಮೂಲಗಳಿಂದ ಮಾಹಿತಿ ಸಂಗ್ರಹಿಸಿರೋದಾಗಿ ಡೇಲಿ ಮೇಲ್ ಹೇಳಿಕೊಂಡಿದೆ. ಇನ್ನು ಸಿಐಎ ಸಂಗ್ರಹಿಸಿರುವ ಯುಎಫ್‌ಒ ವಾಹನಗಳ ಪೈಕಿ ಬಹುತೇಕ ವಾಹನಗಳು ಭೂಮಿಯ ಮೇಲೆ ಅಪ್ಪಳಿಸಿ ಛಿದ್ರಗೊಂಡಿದ್ದವು. ಆದ್ರೆ, ಕನಿಷ್ಟ ಎರಡು ವಾಹನಗಳಾದರೂ ಸುಸ್ಥಿತಿಯಲ್ಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಐಎ ಸಂಸ್ಥೆಯ ಆಫೀಸ್ ಆಫ್ ಗ್ಲೋಬಲ್ ಅಕ್ಸೆಸ್ ತಂಡವು ಅಮೆರಿಕದ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯದ ಒಂದು ಸಣ್ಣ ಘಟಕವಾಗಿದೆ. ಈ ತಂಡವು 2003 ರಿಂದಲೂ ಪತನಗೊಂಡ ಯುಎಫ್‌ಒಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಪತನಗೊಂಡ ಯುಎಫ್‌ಒಗಳನ್ನು ಸಂಗ್ರಹಿಸುವ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿದ್ದ ವ್ಯಕ್ತಿಗಳೇ ತಮಗೆ ನೇರವಾಗಿ ಈ ಮಾಹಿತಿ ನೀಡಿದ್ದಾರೆ ಎಂದು ಡೇಲಿ ಮೇಲ್ ಸುದ್ದಿ ಸಂಸ್ಥೆ ಹೇಳಿಕೊಂಡಿದೆ. ಇನ್ನು ಯುಎಫ್‌ಒಗಳು ಭೂಮಿಗೆ ಅಪ್ಪಳಿಸಿ ಪತನಗೊಂಡ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಈ ವಾಹನಗಳು ನೆಲದೊಳಗೆ ಮುಚ್ಚಿ ಹೋಗಿದ್ದರೂ ಗುರುತಿಸಿ ಸುಸ್ಥಿತಿಯಲ್ಲಿ ಹೊರಗೆ ತೆಗೆಯುವ ವ್ಯವಸ್ಥೆ ಅಮೆರಿಕದಲ್ಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದ್ದು, ಈ ತಂಡದಲ್ಲಿ ಅಮೆರಿಕ ಸೇನೆಯ ಯೋಧರ ತಂಡವೂ ಇದೆ ಎಂದು ಹೇಳಿದೆ.

ಅಮೆರಿಕ ಸೇನೆಯ ಪ್ರಖ್ಯಾತ ಸೀಲ್ ತಂಡ (ಒಸಾಮಾ ಬಿನ್ ಲಾಡೆನ್‌ ಹೊಡೆದುರುಳಿಸಿದ್ದ ತಂಡ) ಕೂಡಾ ಈ ಕಾರ್ಯಾಚರಣೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ರೀತಿ ಅಮೆರಿಕ ತನ್ನ ವಶಕ್ಕೆ ಪಡೆದ ಯುಎಫ್‌ಒ ಅವಶೇಷಗಳನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಗೌಪ್ಯವಾಗಿ ಇಟ್ಟಿದೆ ಎಂಬ ಮಾಹಿತಿಗಳಿವೆ. ಇನ್ನು ಯುಎಫ್‌ಒಗಳ ಒಳಗೆ ಹಲವು ರೀತಿಯ ಅನ್ಯ ಗ್ರಹ ಜೀವಿಗಳ ಮೃತ ದೇಹಗಳೂ ಸಿಕ್ಕಿವೆ ಎನ್ನಲಾಗಿದೆ. ಆದರೆ ಈ ಎಲ್ಲಾ ವಿಚಾರಗಳ ಕುರಿತಾಗಿ ಅಮೆರಿಕ ಸರ್ಕಾರ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಮಾಡಿಲ್ಲ.

Shwetha M