ಗಾಜಾ ಮೇಲಿನ ದಾಳಿಯನ್ನು ಕೊಂಚ ಸಡಿಲಿಸಿದ ಇಸ್ರೇಲ್ – ದಿನಕ್ಕೆ 4 ಗಂಟೆ ಕದನ ವಿರಾಮ!

ಇಸ್ರೇಲ್ ಹಾಗೂ ಹಮಾಸ್ ನಡುವಿನ ಭೀಕರ ಕದನ ಆರಂಭವಾಗಿ ಒಂದು ತಿಂಗಳೇ ಕಳೆದಿದೆ. ಇಸ್ರೇಲ್ ಮೇಲೆ ಏಕಾಏಕಿ ದಾಳಿ ಮಾಡಿ ಕದನ ನಿಯಮ ಉಲ್ಲಂಘಿಸಿದ ಹಮಾಸ್ ಪೀಕಲಾಟಕ್ಕೆ ಸಿಲುಕಿದೆ. ಕದನ ನಿಯಮ ಉಲ್ಲಂಘಿಸಿರುವ ಹಮಾಸ್ ವಿರುದ್ಧ ಇಸ್ರೇಲ್ ಸೇನೆ ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಹಮಾಸ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದ ಇಸ್ರೇಲ್ ಇದೀಗ ಕೊಂಚ ಕದನ ವಿರಾಮಕ್ಕೆ ಒಪ್ಪಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಿಂದಾಗಿ ಗಾಜಾಪಟ್ಟಿ ಸ್ಮಶಾನದಂತೆ ಆಗಿದೆ. ಈ ಸಂಘರ್ಷದಲ್ಲಿ ಬರೋಬ್ಬರಿ 10,812 ಮಂದಿ ಸಾವನ್ನಪ್ಪಿದ್ದಾರೆ. 4,412 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ದಿನಕ್ಕೆ 4 ಗಂಟೆ ಕದನ ವಿರಾಮವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ!
ಗಾಜಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಯುದ್ಧದ ವಲಯದಲ್ಲಿ ನೆಲೆಸಿರುವ ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುವುಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಯುದ್ಧಕ್ಕೆ ಸಂಪೂರ್ಣ ವಿರಾಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ದಿನದಲ್ಲಿ 20 ಗಂಟೆ ಯುದ್ಧ ನಡೆದರೆ 4 ಗಂಟೆ ದಾಳಿ ನಡೆಸುವುದಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.
ಅ.07 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ ಹಬ್ಬದ ಕಾರ್ಯಕ್ರಮದಲ್ಲಿ ತೊಡಗಿದ್ದ 1,400 ಮಂದಿಯನ್ನು ಹತ್ಯೆ ಮಾಡಿತ್ತು 240 ಮಂದಿಯನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿತ್ತು. ಇದರಲ್ಲಿ ಕೆಲವು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಅಂತಾ ಇಸ್ರೇಲ್ ಪ್ರಧಾನಿ ತಿಳಿಸಿದ್ದಾರೆ.