ಫ್ರೆಂಡ್ ಮೋದಿಗೆ ಟ್ರಂಪ್ ಬರ್ತ್‌ಡೇ ವಿಶ್‌ – ಮುನಿಸು ಮರೆತು ಖುಷಿ ಹಂಚಿಕೊಂಡ ದೋಸ್ತಿಗಳು

ಫ್ರೆಂಡ್ ಮೋದಿಗೆ ಟ್ರಂಪ್ ಬರ್ತ್‌ಡೇ ವಿಶ್‌ – ಮುನಿಸು ಮರೆತು ಖುಷಿ ಹಂಚಿಕೊಂಡ ದೋಸ್ತಿಗಳು

ಪಾರ ಸುಂಕಗಳ ಕಾರಣಕ್ಕೆ ಭಾರತದ ವಿರುದ್ಧ ಮುನಿಸಿಕೊಂಡಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ,  ಪ್ರಧಾನಿ ನರೇಂದ್ರ ಮೋದಿ ಅವರಿಗೆ  75ನೇ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.  ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ ಟ್ರಂಪ್‌, ಬರ್ತ್‌ಡೇ ವಿಶಸ್‌ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಅವರ ಶುಭಾಶಯಗಳಿಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

Xನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್‌ಗೆ ಧನ್ಯವಾದ ಹೇಳುತ್ತಾ, ನಿಮ್ಮ ಕರೆ ಮತ್ತು ಹುಟ್ಟುಹಬ್ಬದ ಶುಭಾಶಯಗಳಿಗೆ ಧನ್ಯವಾದಗಳು. ನಿಮ್ಮಂತೆಯೇ, ಭಾರತ-ಯುಎಸ್‌ಎ ನಡುವಿನ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮ ʼಟ್ರುತ್‌ʼನಲ್ಲಿ ಹಂಚಿಕೊಂಡ ಅಧ್ಯಕ್ಷ ಟ್ರಂಪ್, ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅದ್ಭುತವಾದ ಸಂಭಾಷಣೆ ನಡೆಯಿತು. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಈ ಸಂದೇಶ, ಅಮೆರಿಕವು ಭಾರತದ ಮೇಲೆ ತೀವ್ರ ವ್ಯಾಪಾರ ಸುಂಕಗಳನ್ನು ವಿಧಿಸಿರುವ ಸಮಯದಲ್ಲಿ ಬಂದಿದೆ. ಭಾರತೀಯ ಆಮದುಗಳ ಮೇಲೆ ಶೇ. 50 ರಷ್ಟು ಸುಂಕವನ್ನು ವಿಧಿಸಲಾಗಿದೆ. ಇದರಲ್ಲಿ ದೆಹಲಿಯು ರಷ್ಯಾದಿಂದ ಖರೀದಿಸುವ ತೈಲದ ಮೇಲಿನ ಶೇ. 25ರಷ್ಟು ಸುಂಕ ಸೇರಿದೆ. ಇದು ಯಾವುದೇ ದೇಶದ ಮೇಲೆ ವಿಧಿಸಲಾದ ಅತ್ಯಧಿಕ ಸುಂಕಗಳಲ್ಲಿ ಒಂದಾಗಿದೆ. ಇದರ ನಂತರ ಈ ವಾರದ ಆರಂಭದಲ್ಲಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು ಅಮೆರಿಕದಲ್ಲಿ ಬೆಳೆದ ಜೋಳವನ್ನು ಖರೀದಿಸಲು ನಿರಾಕರಿಸಿದರೆ, ಅಮೆರಿಕದ ಮಾರುಕಟ್ಟೆಗೆ ಭಾರತ ಪ್ರವೇಶ ಕಳೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ – ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ರಾಹುಲ್‌ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ ಎಂದು ಬರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಖರ್ಗೆ ಅವರು X ನಲ್ಲಿ ಪೋಸ್ಟ್‌ನಲ್ಲಿ, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ದೇವರು ಕರುಣಿಸಲಿ ಎಂದು ಹಾರೈಸಿದ್ದಾರೆ. ಇನ್ನು ವಿರೋಧ ಪಕ್ಷದ ಹಲವು ನಾಯಕರು ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. “ಮಾನ್ಯ ಪ್ರಧಾನಿ @narendramodi ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ” ಎಂದು ವಿಜಯನ್ X ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Kishor KV