ಮುಹೂರ್ತಕ್ಕೂ ಮುನ್ನವೇ ಉರಿಗೌಡ-ನಂಜೇಗೌಡ ಚಿತ್ರಕ್ಕೆ ಬ್ರೇಕ್ – ಮುನಿರತ್ನಗೆ ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದೇನು..? 

ಮುಹೂರ್ತಕ್ಕೂ ಮುನ್ನವೇ ಉರಿಗೌಡ-ನಂಜೇಗೌಡ ಚಿತ್ರಕ್ಕೆ ಬ್ರೇಕ್ – ಮುನಿರತ್ನಗೆ ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದೇನು..? 

ರಾಜ್ಯ ರಾಜಕೀಯದಲ್ಲಿ ಉರಿಗೌಡ-ನಂಜೇಗೌಡ ಹೆಸರು ಕೋಲಾಹಲ ಎಬ್ಬಿಸಿದೆ. ಟಿಪ್ಪುವನ್ನ ಕೊಂದಿದ್ದೇ ಈ ಇಬ್ಬರು ಎಂದು ಬಿಜೆಪಿ ಹಚ್ಚಿದ್ದ ಕಿಚ್ಚಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಡೆ ಕೆರಳಿ ಕೆಂಡವಾಗಿತ್ತು. ಇದರ ನಡುವೆ ಸಚಿವ ಮುನಿರತ್ನ ಉರಿಗೌಡ ನಂಜೇಗೌಡ ಹೆಸ್ರಲ್ಲಿ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿದ್ರು. ಆದರೆ ಚಿತ್ರಕ್ಕೆ ಮುಹೂರ್ತ ಇಡೋ ಮೊದಲೇ ಬ್ರೇಕ್ ಬಿದ್ದಿದೆ.

ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಉರಿಗೌಡ-ನಂಜೇಗೌಡ ಸಿನಿಮಾಕ್ಕೆ(Urigowda Nanjegowda Movie) ಬ್ರೇಕ್​ ಬಿದ್ದಿದೆ. ನಿರ್ಮಲಾನಂದನಾಥ ಸ್ವಾಮಿಗಳ ಭೇಟಿ ಬಳಿಕ ಸಚಿವ ಮುನಿರತ್ನ (Munirathna) ಯೂಟರ್ನ್ ಹೊಡೆದಿದ್ದು, ಉರಿಗೌಡ ನಂಜೇಗೌಡ ಚಿತ್ರದ ನಿರ್ಮಾಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಉರಿಗೌಡ-ನಂಜೇಗೌಡ ವಿವಾದಿತ ಚಲನಚಿತ್ರ ಗೊಂದಲಗಳಿಗೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮಂಡ್ಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಚರ್ಚೆ ಮಾಡಿದ್ದು, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿನಿಮಾ ಚಿತ್ರೀಕರಣ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಉರಿಗೌಡ, ನಂಜೇಗೌಡರೇ ಟಿಪ್ಪುವನ್ನ ಕೊಂದರಾ – ಮಂಡ್ಯ ಪುಸ್ತಕದಲ್ಲಿ ಸಿಕ್ಕಿತಾ ಸಾಕ್ಷಿ..?

ನಿರ್ಮಾಲನಾಂದ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಮುನಿರತ್ನ, ಉರಿಗೌಡ- ನಂಜೇಗೌಡ ಸಿನಿಮಾ ಮಾಡುವುದನ್ನ ಕೈ ಬಿಡುವಂತೆ ಸ್ವಾಮೀಜಿ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯ ಮಾತಿನಂತೆ ಸಿನಿಮಾ ನಿರ್ಮಾಣ ಮಾಡದಿರಲು ನಿರ್ಧರಿಸಿರೋದಾಗಿ ಮುನಿರತ್ನ ಘೋಷಣೆ ಮಾಡಿದರು. ಮೊದಲು ಉರಿಗೌಡ, ನಂಜೇಗೌಡ ಚಿತ್ರ ನಿರ್ಮಾಣದ ಆಲೋಚನೆ ಇರಲಿಲ್ಲ. ಆದ್ರೆ, ಹೆಚ್.​ಡಿ ಕುಮಾರಸ್ವಾಮಿ ಹೇಳಿದ ಬಳಿಕ ಚಿತ್ರ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕೆಂದು ಯೋಚನೆ ಮಾಡಿದ್ದೆ. ಆದ್ರೆ, ಇದೀಗ ಈ ಚಿತ್ರ ನಿರ್ಮಾಣ ಮಾಡಲ್ಲ ಎಂದು ನಾನು ಶ್ರೀಗಳಿಗೆ ತಿಳಿಸಿದ್ದೇನೆ. ನಾನೊಬ್ಬ ನಿರ್ಮಾಪಕನಾಗಿ ಈ ಚಿತ್ರ ಮಾಡುತ್ತೇನೆ ಎಂದು ಹೇಳಿದ್ದೆ. ಎಲ್ಲವೂ ಸತ್ಯ ಘಟನೆ ಎಂದು ಸಿನಿಮಾ ಮಾಡಲು ಆಗಲ್ಲ. ಉರಿಗೌಡ, ದೊಡ್ಡ ನಂಜೇಗೌಡ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.

ಉರಿಗೌಡ-ನಂಜೇಗೌಡ (Urigowda Nanjegowda) ಅವರುಗಳನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ (Munirathna) ಟೈಟಲ್ ರಿಜಿಸ್ಟರ್​ಗೆ ಅರ್ಜಿ ಹಾಕಿದ್ದರು. ಅಲ್ಲದೇ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ದರು. ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಮುನಿರತ್ನ, ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದಿದ್ದರು. ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಅವರು ಟ್ವೀಟ್‌ ಮೂಲಕ ತಿಳಿಸಿದ್ದರು.

ಮತ್ತೊಂದೆಡೆ ಉರಿಗೌಡ ನಂಜೇಗೌಡ ಟೈಟಲ್​ಗೆ ಅರ್ಜಿ ಸಲ್ಲಿಸಿದ್ದರ ವಿರುದ್ಧ ಈಗಾಗಲೇ ಆಕ್ಷೇಪ ವ್ಯಕ್ತವಾಗಿದ್ದವು. ಒಕ್ಕಲಿಗ ಯುವಬ್ರಿಗೇಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೇಡ್ ವಿರೋಧಿಸಿತ್ತು. ಅಲ್ಲದೇ ಇದಕ್ಕೆ ಅನುಮತಿ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿತ್ತು. ‘ವೃಷಭಾದ್ರಿ ಪ್ರೊಡಕ್ಷನ್ಸ್ ಅವರು ಉರಿಗೌಡ, ನಂಜೇಗೌಡ ಚಲನಚಿತ್ರ ನಿರ್ಮಿಸಲು ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ, ಇತಿಹಾಸದ ದಾಖಲೆಗಳಲ್ಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಲ್ಲಿ ಇಲ್ಲ ಎಂದು ಒಕ್ಕಲಿಗ ಯುವಬ್ರಿಗೇಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೇಡ್ ಹೇಳಿದ್ದವು.

suddiyaana