ನನ್ನ ದೇಹ.. ನನ್ನ ಇಷ್ಟ ನಿಮಗ್ಯಾಕೆ ಕಷ್ಟ.. ಬಟ್ಟೆ ಅಲರ್ಜಿಯಾಗಿದ್ದೇ ಇದಕ್ಕಾ? – ನಿಮಗೆ ಗೊತ್ತಿರದ ಉರ್ಫಿ Story..!

ನನ್ನ ದೇಹ.. ನನ್ನ ಇಷ್ಟ ನಿಮಗ್ಯಾಕೆ ಕಷ್ಟ.. ಬಟ್ಟೆ ಅಲರ್ಜಿಯಾಗಿದ್ದೇ ಇದಕ್ಕಾ? – ನಿಮಗೆ ಗೊತ್ತಿರದ ಉರ್ಫಿ Story..!

ನಟಿ, ಮಾಡೆಲ್‌ ಉರ್ಫಿ ಜಾವೇದ್‌ ಯಾರಿಗೆ ಗೊತ್ತಿಲ್ಲ ಹೇಳಿ.. ಸೋಶಿಯಲ್‌ ಮೀಡಿಯಾ ಫಾಲೋ ಮಾಡೋರಿಗೆ ಈಕೆ ಪರಿಚಯ ಇದ್ದೇ ಇದೆ.. ಈಕೆಗೆ ಬಟ್ಟೆ ಅಂದ್ರೆ ಅಲರ್ಜಿ.. ಹೀಗಾಗಿ ಅಂಗೈ ಅಗಲದ ಡ್ರೆಸ್‌ಗಳನ್ನೇ ಹಾಕಿ ಪಬ್ಲಿಕ್‌ ಪ್ಲೇಸ್‌ನಲ್ಲಿ ಕಾಣಿಸಿಕೊಳ್ತಿರ್ತಾರೆ.. ಈಕೆ ಹೀಗೆ ಕಾಣಿಸಿಕೊಳ್ಳೋದನ್ನ ನೋಡಿದ ಅನೇಕರು, ಈಕೆಗೇನು.. ದುಡ್ಡಿದೆ ಅಲ್ವಾ.. ಅದಕ್ಕೆ ಹಿಂಗೆಲ್ಲಾ ಆಡ್ತಾಳೆ.. ಕಷ್ಟ ಅಂದ್ರೆ ಏನು ಅಂತಾ ಗೊತ್ತಿರ್ತಿದ್ರೆ ಹಿಂಗೆಲ್ಲಾ ಆಡ್ತಿದ್ಲಾ ಅಂತಾ ಹೇಳ್ತಾರೆ.. ಆದ್ರೆ ಉರ್ಫಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವಳಲ್ಲ.. ಸಾಲು ಸಾಲು ಕಷ್ಟ, ಸವಾಲುಗಳನ್ನ ಫೇಸ್‌ ಮಾಡಿ ಬಂದವಳು.. ಅದೆಷ್ಟೋ ಅವಮಾನಗಳನ್ನ ಸಹಿಸಿಕೊಂಡು ಬಂದವಳು. ಹೌದು, ಉರ್ಫಿ ಬಾಳು ನಾವಂದುಕೊಂಡಷ್ಟು ಚೆನ್ನಾಗಿರ್ಲಿಲ್ಲ.. ಸದಾ ಕಷ್ಟಗಳನ್ನೇ ಫೇಸ್ ಮಾಡ್ತಾ ಬಂದವಳು.. ಕುಟುಂಬದವರು ಕೂಡ ಈಕೆಯನ್ನ ದೂರ ಮಾಡಿದ್ರು.. ಸಾಕಷ್ಟು ಅವಮಾನ ಮಾಡಿದ್ರು.. ಆದ್ರೀಗ ಉರ್ಫಿ ಎಲ್ಲವನ್ನ ಮೆಟ್ಟಿ ನಿಂತಿದ್ದಾಳೆ.. ಇಂದು ಸೋಶಿಯಲ್ ಮೀಡಿಯಾದಲ್ಲಿ ತನ್ನ ಬಟ್ಟೆಗಳಿಂದಲೇ ಸದ್ದು ಮಾಡುತ್ತಿರುವ, ವಿವಾದಕ್ಕೆ ಸಿಲುಕುತ್ತಿರುವ ಉರ್ಫಿ ಜಾವೇದ್ ಎಂಬ ಯುವನಟಿಯ ಸೋಲು – ಗೆಲುವಿನ ಕಥೆಯಿದು.. ಅಷ್ಟಕ್ಕೂ ಉರ್ಫಿ ಲೈಫ್ ನಲ್ಲಿ ಏನೆಲ್ಲಾ ಆಗಿತ್ತು? ಆಕೆಯ ಬಾಳಲ್ಲಿ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದು ಯಾವಾಗ? ಕುಟುಂಬದವರು ಆಕೆಯನ್ನ ದೂರ ಮಾಡಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕ್ರಿಕೆಟ್​ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್​ರನ್ನೇ ಮೀರಿಸಿದ್ದೇಗೆ Mr. ICC?

ಯಾರ್ ಏನೇ ಹೇಳ್ಲಿ.. ಏನ್‌ ಬೇಕಾದ್ರು ಅಂದ್ಕೊಳ್ಲಿ.. ನಾನಿರೋದೇ ಹೀಗೆ.. ಇದು ಉರ್ಫಿ ಸಿದ್ಧಾಂತ.. ಚೋಟುದ್ದ ಡ್ರೆಸ್‌.. ಚಿತ್ರ ವಿಚಿತ್ರ ಕಾಸ್ಟೂಮ್‌.. ಕ್ಯಾಮರಾದವರಿಗೆ ದರ್ಶನ ಕೊಡೋದೇ ಈಕೆಯ ಫುಲ್ ಟೈಮ್ ಜಾಬ್..‌ ಉರ್ಫಿಗೆ ಬಹುಶ: ಕ್ಯಾಮರಾ ಗುಂಪು ಒಂದು ದಿನವೂ ತನ್ನನ್ನು ಹಿಂಬಾಲಿಸದೇ ಇದ್ದರೆ ನಿದ್ದೆ ಬರುವುದಿಲ್ಲವೇನೋ. ಹೀಗೆ ಕ್ಯಾಮೆರಾ ಮುಂದೆ ಚಿತ್ರ ವಿಚಿತ್ರ ಕಾಸ್ಟ್ಯೂಮ್‌ ನಲ್ಲಿ ಕಾಣಿಸಿಕೊಳ್ಳೋ ಉರ್ಫಿ ಜರ್ನಿ ನಿಜಕ್ಕೂ ರೋಚಕ..

ಅದು 1997 ರ ಇಸವಿ. ಲಕ್ನೋದಲ್ಲಿ ಮಧ್ಯಮ ವರ್ಗದ ಮುಸ್ಲಿಂ ಕುಟುಂಬವೊಂದರಲ್ಲಿ ಹೆಣ್ಣು ಮಗುವೊಂದು ಜನಿಸುತ್ತೆ. ಆ ಕುಟುಂಬಕ್ಕೆ ಅದು ಮೂರನೇ ಹೆಣ್ಣು ಮಗು. ಆ ಮಗುವೇ ಉರ್ಫಿ ಜಾವೇದ್. ಶಿಸ್ತಿನ ಅಪ್ಪ.‌. ಅವರ  ಕಣ್ಣು ತಪ್ಪಿಸಿ ಮಕ್ಕಳ ಆಸೆಗಳನ್ನು ಈಡೇರಿಸುವ ತಾಯಿ. ಬಹಳ ಸಣ್ಣ ವಯಸಿನಲ್ಲಿ ಮದುವೆಯಾದ ಉರ್ಫಿ ತಾಯಿಗೆ ನೆಮ್ಮದಿಯ ದಿನಗಳು ಸಿಕ್ಕಿದ್ದು ಬರೀ ಅಷ್ಟೋ ಇಷ್ಟೋ.. ಯಾಕಂದ್ರೆ ಉರ್ಪಿ ತಂದೆಗೆ ಮೂಗಿನ ತುದಿಯಲ್ಲೇ ಸಿಟ್ಟು.. ಸದಾ ಜೋರು ಮಾಡ್ತಾ.. ಮನಬಂದಂತೆ ಹೊಡೆಯುವ ಗಂಡನೊಂದಿಗೆ ಬಾಳು ಕಳೆದ ಉರ್ಫಿ ತಾಯಿ ಮಕ್ಕಳಿಗೆ ಯಾವತ್ತು ಮಮತೆಯನ್ನು ಕಡಿಮೆ ಮಾಡಿಲ್ಲ. ಬಾಲ್ಯದಲ್ಲೇ ಉರ್ಫಿಗೆ ಟಿ.ವಿ ನೋಡುವುದಂದ್ರೆ ತುಂಬಾ ಇಷ್ಟ.. ಅಮ್ಮನೊಂದಿಗೆ ಕುಳಿತು ಧಾರಾವಾಹಿ ನೋಡುವುದರಲ್ಲೇ ಬಾಲ್ಯದ ಆಟ -ಪಾಠ ಕಳೆದು ಹೋಯ್ತು..

ಆದ್ರೆ ಬಾಲ್ಯದಲ್ಲಿ ಯಾರೊಂದಿಗೂ ಅಷ್ಟಾಗಿ ಮಾತನಾಡದೇ ನಾಚಿಕೆ ಸ್ವಭಾವದಿಂದ ಬೆಳೆದ ಉರ್ಫಿಗೆ ಅಪ್ಪ ಎಂದರೆ ತುಂಬಾನೇ ಭಯ. ತಂದೆ ಎದುರಿಗೆ ಬಂದ್ರೆ ಉರ್ಫಿಗೆ ಕೈ ಕಾಲು ನಡುಗುತ್ತಂತೆ. ಅಪ್ಪನ ದೌರ್ಜನ್ಯ, ಹಿಂಸೆಯನ್ನು ನೋಡುತ್ತಾ ಬೆಳೆದ ಉರ್ಫಿ ಮನೆಯಲ್ಲೂ ಹೆಚ್ಚು ಮೌನವಾಗಿಯೇ ಇರುತ್ತಿದ್ದಳು. ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗಿ ಹೊಡೆದು, ಜೋರು ಮಾಡಿ ಮನಸ್ಸಿನೊಳಗೆ ಭೀತಿ ಹುಟ್ಟಿಸುವ ಅಪ್ಪ ಬೇಗ ಸಾಯಬೇಕು, ಹೊರಗೆ ಹೋದವರು ಬರಲೇ ಬಾರದು  ಅಂತಾ ಉರ್ಫಿ 2ನೇ ತರಗತಿಯಲ್ಲೇ ಅಂದುಕೊಂಡಿದ್ರಂತೆ. ಮನೆಯ ಹೊರಗೆ ಹೋಗಬೇಡ, ಯಾವ ಡ್ರೆಸ್ ಹಾಕಬೇಕು, ಜೀನ್ಸ್ ಹಾಕಬೇಡ ಹೀಗೆ ಎಲ್ಲಾ ವಿಚಾರದಲ್ಲೂ ಕಂಟ್ರೋಲ್‌ ಮಾಡ್ತಿದ್ದ ಅಪ್ಪನನ್ನು ಉರ್ಫಿ ಇಷ್ಟಪಟ್ಟದ್ದಕ್ಕಿಂತ ದ್ವೇಷಿಸಿದ್ದೇ ಹೆಚ್ಚು.

ಮೊದಲೇ ನಾಚಿಕೆ ಸ್ವಭಾವದ ಹುಡುಗಿಯಾಗಿರುವ ಉರ್ಫಿ, ಶಾಲೆಯಲ್ಲಿ ತಾನಾಯ್ತು.. ತನ್ನ ಕಲಿಕೆಯಾಯಿತು. ಯಾರೊಂದಿಗೂ ಜಾಸ್ತಿ ಮಾತಿಲ್ಲ, ಫ್ರೆಂಡ್ಸ್‌ ಅಂತೂ ಇಲ್ಲವೇ ಇಲ್ಲ ಎನ್ನುವ ಹಾಗೆ ಇರ್ತಿದ್ಲು.. ಯಾರ ತಂಟೆಗೂ ಹೋಗದ ಈ ಬಾಲೆಯ ಬಾಳಲ್ಲಿ ಒಂದು ಕರಾಳ ಘಟನೆ ನಡೆದೇ ಹೋಯ್ತು.. ಫಸ್ಟ್  ಪಿಯುಸಿಯಲ್ಲಿ ಇದ್ದಾಗ ಉರ್ಫಿಯ ಕೆಲ ಸ್ನೇಹಿತರು  ಮೊಬೈಲ್ ನಲ್ಲಿ ಆಕೆಯ ಫೋಟೋ ತೆಗೆದುಕೊಂಡು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡುತ್ತಾರೆ. ಇದರಲ್ಲಿ ಉರ್ಫಿಯದೇನು ತಪ್ಪು ಇಲ್ಲ.. ಆದ್ರೆ ಮನೆ – ಶಾಲೆ, ಊರು ಹೀಗೆ ಎಲ್ಲರ ಕಣ್ಣಲ್ಲೂ ಉರ್ಫಿ ಕೆಟ್ಟವಳಾಗ್ತಾಳೆ.. ಆಕೆಯನ್ನ ಕಂಡ ಕೂಡಲೇ ಎಲ್ಲರೂ ಅವಮಾನ ಮಾಡ್ತಾರೆ.. ಕೆಟ್ಟ  ದೃಷ್ಟಿಯಿಂದ ನೋಡಿ, ಹೀಯಾಳಿಸುತ್ತಾರೆ. ಅಪ್ಪನಂತೂ ಹೊಡೆದು ಹೊಡೆದು ಸಾಯಿಸೋದೊಂದು ಬಾಕಿ ಇತ್ತು.. ಕೆಲ ಕಾಲ ಕಾಲೇಜು – ಓದು ಬರಹ ಎಲ್ಲವೂ ಬಂದ್ ಆಗಿ, ರೂಮ್ ವೊಂದರಲ್ಲಿ ಕಾಲ ಕಳಿತಾಳೆ.. ಮಾನಸಿಕವಾಗಿ ಕುಗ್ಗಿ ಹೋಗ್ತಾಳೆ. ಮತ್ತೆ ವಾಪಾಸ್ ಕಾಲೇಜಿಗೆ ಹೋಗುವ ವೇಳೆ ಪ್ರಾಂಶುಪಾಲರು ಫೋಟೋ ವಿಷಯದಿಂದ ಅವರನ್ನು ಶಾಲೆಯಿಂದ ತೆಗೆದು ಹಾಕುತ್ತಾರೆ. ಮತ್ತೆ ಉರ್ಫಿ ಮನೆಯೊಳಗೆ ಬಂಧಿ ಆಗ್ತಾಳೆ.

ಅಪ್ಪನ ಹಿಂಸೆ, ಹೊಡೆತ, ಬೈಗಳ ಕೇಳುವುದು ಒಂದು ಕಡೆಯಾದರೆ, ಇನ್ನೊಂದೆಡೆ ಉರ್ಫಿಯ ಸಂಬಂಧಿಕರು ಉರ್ಫಿಯನ್ನು ಹೀಯಾಳಿಸುತ್ತಾರೆ. ಅವಳ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ ಹಣ ಬಂದಿರಬಹುದು. ಏಕೆಂದರೆ ಅವಳು ತಾನೇ ಫೋಟೋಗಳನ್ನು ತೆಗೆದು ಲೀಕ್ ಮಾಡಿದ್ದು.. ಒಳ್ಳೆ ಹಣಗಳಿಸಿದ್ದಾಳೆ ಅಂತಾ ಹೀಯಾಳಿಸ್ತಾರೆ.. ಇದ್ರಿಂದ ಮೊದಲೇ  ಕುಗ್ಗಿ ಹೋಗಿದ್ದ ಉರ್ಫಿ ಆತ್ಮಹತ್ಯೆಯ ಯೋಚನೆ ಮಾಡುತ್ತಾರೆ. ಆದರೆ ಆ ಕ್ಷಣದಲ್ಲೇ ಆಕೆಗೆ ತಾನು ಏನಾದರೂ ಮಾಡಬೇಕೆನ್ನುವ ಆಲೋಚನೆ ಬರುತ್ತೆ.

ಬೇರೊಂದು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿದ ಬಳಿಕ, ಅಮೇಠಿ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮವನ್ನು ಕಲಿತಾಳೆ.  ಕೆಲಸ ಮಾಡಿ ದುಡ್ಡು ಮಾಡ್ಬೇಕು ಅಂತಾ ಉರ್ಫಿ ಒಂದೇ ಸೆಮಿಸ್ಟರ್ ಗೆ ವಿದ್ಯಾಭ್ಯಾಸ ನಿಲ್ಲಿಸಿಬಿಡ್ತಾಳೆ..

17 ವಯಸ್ಸಿನಲ್ಲಿ ಇಬ್ಬರು ಅಕ್ಕಂದಿರೊಂದಿಗೆ ಮನೆ ಬಿಟ್ಟು ಓಡಿ ಬರುತ್ತಾರೆ. ಲಕ್ನೋ ವುಮೆನ್ಸ್ ಹೆಲ್ಪ್ ಲೈನ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಸಹೋದರಿಯರು ಇರುತ್ತಾರೆ.  ವಿಷಯ ತಿಳಿದು ಅಲ್ಲಿಗೆ ತಂದೆ  ತಾಯಿ ಬರ್ತಾರೆ.. ಆದ್ರೆ ಅವ್ರ ಜೊತೆ ಉರ್ಫಿ ಬರಲು ಒಪ್ಪುವುದಿಲ್ಲ.

ಅಪಾರ್ಟ್ ಮೆಂಟ್ ನಲ್ಲಿ ಇಬ್ಬರು ಅಕ್ಕಂದಿರು ಶಾಲಾ ಮಕ್ಕಳಿಗೆ ಟ್ಯೂಷನ್ ಕೊಡುತ್ತಾರೆ. ಇದರಿಂದ ತಿಂಗಳಿಗೆ 3 ಸಾವಿರ ರೂಪಾಯಿ ಬರುತ್ತಿತ್ತು. ಇದು ಎಂದಿಗೂ ಸಾಕಾಗಲ್ಲ ಎಂದು ಯೋಚಿಸಿ ಉರ್ಫಿ ಅಲ್ಲಿಂದ ಕೆಲಸ ಹುಡುಕುತ್ತಾ ದಿಲ್ಲಿಗೆ ಬರ್ತಾಳೆ. ದಿಲ್ಲಿಯಲ್ಲಿ ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾಳೆ. ಇದೇ ಟೈಮ್‌ ನಲ್ಲಿ ಉರ್ಫಿ ತಂದೆ ಬೇರೆ ಮದುವೆ ಆಗ್ತಾರೆ.. ಹೀಗಾಗಿ ಆಕೆಯ ತಾಯಿ ತಾನು ಒಬ್ಬಂಟಿ ನೀನು ಇಲ್ಲಿಗೆ ಬಂದು ಬಿಡು ಅಂತಾ ಹೇಳ್ತಾರೆ.. ಆದರೆ ಆಗಷ್ಟೇ ಸ್ವತಂತ್ರವಾಗಿ ಹೆಜ್ಜೆಯಿಟ್ಟು ನಡೆಯಲು ಆರಂಭಿಸಿದ ಉರ್ಫಿ ತಾಯಿಯೊಂದಿಗೆ ಮಾತಾನಾಡುತ್ತಾರೆ ವಿನಃ ಮತ್ತೆ ತಿರುಗಿ ಊರಿಗೆ ಹೋಗಲ್ಲ.

ಒಂದು ದಿನ ಮುಂಬೈನಿಂದ ಸ್ನೇಹಿತರೊಬ್ಬರು ಕರೆ ಮಾಡಿ , ‘9XM ಚಾನೆಲ್ ನಲ್ಲಿ ನಿರೂಪಕಿ ಬೇಕು, ನಿನಗೆ ಕೆಲಸ ಬೇಕಾದರೆ ಬಾ ಎನ್ನುತ್ತಾರೆ. ಮುಂಬಯಿಗೆ ಹೋಗುವಷ್ಟೇ ಹಣವನ್ನು ಹೊಂದಿದ್ದ ಉರ್ಫಿ ಅಲ್ಲಿಗೆ ಹೋಗಿ ಆಡಿಷನ್ ನೀಡುತ್ತಾಳೆ.. ಆದ್ರೆ ಆಕೆ ಅಲ್ಲಿ ಸೆಲೆಕ್ಟ್‌ ಆಗಲ್ಲ. ಅದೇ ಸ್ನೇಹಿತನೊಂದಿಗೆ ಇದ್ದು, ಉರ್ಫಿ ಪ್ರತಿದಿನ ಗೂಗಲ್ ನಲ್ಲಿ ಹುಡುಕಿ 200 ಧಾರಾವಾಹಿ ಪ್ರೊಡಕ್ಷನ್ ಗಳಿಗೆ ಕರೆ ಮಾಡಿ ಅಡಿಷನ್ ಇದೇಯಾ ಎಂದು ಕೇಳಿ, ಅಡಿಷನ್ ಇದ್ದ ಜಾಗಕ್ಕೆ ಹೋಗುತ್ತಿದ್ದಳು. ಪ್ರತಿಸಲವೂ ಆಕೆ ರಿಜೆಕ್ಟ್ ಆಗ್ತಿದ್ಲು..

ಕುಗ್ಗಿ ಹೋಗಿದ್ದ ಉರ್ಫಿಗೆ 2015 ರಲ್ಲಿ ಬಿಗ್ ಮ್ಯಾಜಿಕ್  ಚಾನೆಲ್ ವೊಂದರಲ್ಲಿ ಒಂದು ದಿನದ ಕೆಲಸ ಸಿಗುತ್ತದೆ. ಆ ಕೆಲಸಕ್ಕಾಗಿ ಅವರಿಗೆ 1500 ಸಾವಿರ ಸಂಬಳ ಸಿಗುತ್ತದೆ. ಇದಾದ ಬಳಿಕ ಹಿಂದಿಯ ಬಡೇ ಭಯ್ಯಾ ಕಿ ದುಲ್ಹನಿಯಾ ಅನ್ನೋ ಸೀರಿಯಲ್‌ ನಲ್ಲಿ ಉರ್ಫಿಗೆ ನೆಗಟಿವ್ ರೋಲ್ ವೊಂದು ಸಿಗುತ್ತದೆ. ಬಳಿಕ  ಮೇರಿ ದುರ್ಗಾ,  ಬೇಪನ್ನಾ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿಗೆ ನೆಗೆಟಿವ್ ಪಾತ್ರಗಳೇ ಹುಡುಕಿಕೊಂಡು ಬರುತ್ತೆ. ಬಳಿಕ ಹಿಂದಿಯ ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಉರ್ಫಿ ಒಂದೇ ವಾರದಲ್ಲಿ ಸಹ ಸ್ಪರ್ಧಿಯೊಂದಿಗೆ ದೊಡ್ಡ ಗಲಾಟೆ ಮಾಡಿ ಕಾರ್ಯಕ್ರಮದಿಂದ ಹೊರ ಬೀಳ್ತಾಳೆ..

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ವಾಪಸ್ ಬರುವಾಗ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್ ಅನ್ನ ನೋಡಿ ಎಲ್ಲರೂ ಒಮ್ಮೆ ಶಾಕ್ ಆಗುತ್ತಾರೆ.  ಏಕಂದರೆ ಉರ್ಫಿ ಆವತ್ತು ಅರ್ಧ ಮೈ ಕಾಣುವ, ಅಂಗಾಂಗ ಕಾಣುವ ಬಟ್ಟೆಯನ್ನು ಹಾಕಿರ್ತಾಳೆ.. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತೆ. ತಿಳಿದೋ ತಿಳಿಯದೆಯೋ ಆಕೆಯ ಲೈಫ್‌ ನಲ್ಲಿ ಅಲ್ಲಿಂದ ತಿರುವು ಸಿಗುತ್ತೆ..

ಕೆಲವೇ ದಿನಗಳ ನಂತರ ಉರ್ಫಿ ಮತ್ತೊಮ್ಮೆ ಅದೇ ರೀತಿಯ ಅರೆ ಬರೆ ಬಟ್ಟೆಯನ್ನು ಹಾಕಿಕೊಂಡು ಜನರ ಮುಂದೆ ಬರ್ತಾಳೆ.  ಮಾಧ್ಯಮದ ಮುಂದೆ ಹೊಸ ಬಗೆಯ ಫ್ಯಾಶನ್ ರೀತಿಯ ಬಟ್ಟೆಯನ್ನು ಹಾಕಿಕೊಂಡು ಕಾಣುವ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾಳೆ. ದಿನ ಕಳದಂತೆ ಆಕೆಗೆ ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆಗಳನ್ನು ಬರಲು ಶುರುವಾಗುತ್ತೆ. ಆಗ ಉರ್ರ್ಫಿ ಖಡಕ್‌ ಆಗಿಯೇ ವಾರ್ನ್‌ ಮಾಡ್ತಾಳೆ.. ಇದು ತನ್ನ ದೇಹ.. ತಾನು ಯಾವ ಬಗೆಯ ಬಟ್ಟೆ ಬೇಕಾದರೆ ಹಾಕುವೆ.. ಬೇರೆಯವರಿಗೆ ಯಾಕೆ ಚಿಂತೆ  ಅಂತಾ ಹೇಳ್ತಾಳೆ.. ಬಳಿಕ ಉರ್ಫಿ, ಇದನ್ನೇ ಫ್ಯಾಷನ್ ಟ್ರೆಂಡ್ ನಂತೆ ಮುಂದುವರೆಸುತ್ತಾಳೆ.

ಅಂಗೈ ಅಗಲದ ಬಟ್ಟೆ  ಹಾಕಿಕೊಂಡು ಪೋಸ್, ವೈಯರ್ ಗಳನ್ನೇ ಸುತ್ತಿಕೊಂಡು ಬಟ್ಟೆಯನ್ನಾಗಿ ಮಾಡಿದ ಪೋಸ್, ಗೋಣಿ ಚೀಲವನ್ನು ಸುತ್ತಿಕೊಂಡಿರುವ ಫೋಟೋ, ಅಕ್ಟೋಪಸ್‌ ಡ್ರೆಸ್‌.. ಇಂತಹ ಕಾಸ್ಟ್ಯೂಮ್‌ ನಲ್ಲಿ ಉರ್ಫಿ ಕಾಣಿಸಿಕೊಳ್ತಿರ್ತಾಳೆ.. ಚಿತ್ರ ವಿಚಿತ್ರವಾಗಿ ಕಾಣಿಸಿಕೊಂಡು ಉರ್ಫಿ ಟ್ರೋಲ್ ಪೇಜ್‌ ಗಳಿಗೆ ಆಹಾರ ಆಗೋದು.. ವಿವಾದದ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗೋದು ಕಾಮನ್‌ ಆಗಿದೆ..

ಕಾರ್ಯಕ್ರಮವೊಂದರಲ್ಲಿ ರಣ್ವೀರ್ ಸಿಂಗ್ ಉರ್ಫಿಯನ್ನು ಫ್ಯಾಷನ್ ಐಕಾನ್ ಅಂತ ಕರೆದಿದ್ದರು. ಇಂದು ಭಾರತದಲ್ಲಿ ಉರ್ಫಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದ್ದಾಳೆ. ಲಕ್ಷಾಂತರ ಫಾಲೋವರ್ಸ್ ನ್ನು ಹೊಂದಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ  ಟ್ರೆಂಡ್ ಸ್ಟಾರ್ ಆಗಿದ್ದಾಳೆ.. ಅಂದ ಹಾಗೆ ಉರ್ಫಿ ಜಾವೇದ್ ಅಖ್ತರ್ ಅವರ ಮೊಮ್ಮಗಳು ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಆದರೆ ಅದು ಸತ್ಯಕ್ಕೆ ದೂರವಾದದ್ದು ಉರ್ಫಿಯೇ ಸ್ಪಷ್ಟನೆ ನೀಡಿದ್ದಾಳೆ.

Shwetha M