ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟಪ್ರತಿಭೆ – ಕರುನಾಡು ಕಂಡ ಪ್ರಬುದ್ಧ ಸಾಹಿತಿ ಯು.ಆರ್ ಅನಂತಮೂರ್ತಿ
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. ಕನ್ನಡದ ಪ್ರಮುಖ ಸಾಹಿತಿ. ಶ್ರೇಷ್ಠ ಸೃಜನಶೀಲ ಚಿಂತಕರು. ಕರುನಾಡು ಕಂಡ ಪ್ರಬುದ್ಧ ಸಾಹಿತಿ ಯು.ಆರ್ ಅನಂತಮೂರ್ತಿ.
ಇದನ್ನೂ ಓದಿ: ಸಮಾಜದಲ್ಲಿ ಪರಿವರ್ತನೆ ತಂದ ವಚನ ಸಾಹಿತ್ಯದ ಮಹತ್ವ – ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರ
ಯು.ಆರ್. ಅನಂತಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932 ಡಿಸೆಂಬರ್ 21ರಂದು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದರು. ತಂತ್ರ ಮತ್ತು ವಸ್ತುವಿನ ದೃಷ್ಟಿಯಿಂದ ಕಥಾಸಾಹಿತ್ಯದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಣ್ಣಕಥೆಯು ಅನಂತಮೂರ್ತಿಯವರಿಗೆ ವಿಶೇಷತಃ ಒಗ್ಗಿದ ಸಾಹಿತ್ಯ ಪ್ರಕಾರ. ಸಣ್ಣ ಕಥೆಯನ್ನಾಧರಿಸಿದ ಇವರ ಘಟಶ್ರಾದ್ದ ಕಥೆ ಸಿನಿಮಾ ಆಗಿ ಕನ್ನಡಿಗರ ಮನಗೆದ್ದಿತ್ತು. ಈ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ಇದೇ ಕಥೆಯನ್ನಾಧರಿಸಿದ ಹಿಂದಿ ಸಿನಿಮಾ ಕೂಡ ಪ್ರಶಸ್ತಿಗೆ ಪಾತ್ರವಾಗಿತ್ತು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಈ ಕಾದಂಬರಿ ಸಾಹಿತ್ಯ ಮತ್ತು ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನೆಬ್ಬಿಸಿತು. ಅನೇಕ ಭಾಷೆಗಳಿಗೆ ಅನುವಾದವಾಗಿತ್ತು. ಚಲನಚಿತ್ರವಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಪ್ರಧಾನವಾಗಿ ಚರ್ಚಿತವಾಗುವ ಸಂಗತಿಗಳು ಎಂದರೆ ರಾಜಕೀಯ ಮೌಲ್ಯಗಳ ಶೋಧ, ಕ್ರಾಂತಿಯ ವೈಫಲ್ಯ, ರಾಜಕೀಯ ಹಾಗೂ ನೈತಿಕತೆಯ ಪ್ರಶ್ನೆ. ಅನಂತಮೂರ್ತಿಯವರು ಮುಖ್ಯವಾಗಿ ವೈಚಾರಿಕ, ಬೌದ್ಧಿಕಚಿಂತಕರು. ಅವರ ಕಾದಂಬರಿಗಳು ಕಥನ ಮಾದರಿಗಳಾಗಿರದೆ, ಥೀಸೀಸ್ ಮಾದರಿಯವಾಗಿರುವುದು ಈ ಕಾರಣಕ್ಕಾಗಿಯೇ. ಇವರು ಬರೆದ ವಿಮರ್ಶಾ, ವೈಚಾರಿಕ ಲೇಖನಗಳು ಕನ್ನಡ ವಿಮರ್ಶೆಗೆ ಹೊಸ ಆಯಾಮಗಳನ್ನು ತಂದುಕೊಟ್ಟವು.
ಕನ್ನಡ ಸಾಹಿತ್ಯ ಸಂಸ್ಕೃತಿಗೆ ಇಂಥ ಮಹತ್ವದ ಕೃತಿಗಳನ್ನು ನೀಡಿರುವ ಅನಂತಮೂರ್ತಿ ಅಂತರರಾಷ್ಟ್ರೀಯ ಮಟ್ಟದ ಬರಹಗಾರ. ದೇಶ ದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ಸಮಗ್ರ ಸಾಹಿತ್ಯಕ್ಕೆ ದೇಶದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಏಕಕಾಲದಲ್ಲಿ ಒಳಗಿನವರಂತೆ ಆಪ್ತವಾಗಿಯೂ, ಹೊರಗಿನವರಂತೆ ವಿಶ್ಲೇಷಣಾತ್ಮಕ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತಿಸುವವರಾಗಿಯೂ ಕಾಣುವ ಅನಂತಮೂರ್ತಿ ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟಪ್ರತಿಭೆ. ಅನಂತಮೂರ್ತಿಯವರು ಆಗಸ್ಟ್ 22, 2014ರಂದು ವಿಧಿವಶರಾದರು.