2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿ 4 ಗಂಟೆ ತಡ! – ಕಾರಣವೇನು ಗೊತ್ತಾ?

2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿ 4 ಗಂಟೆ ತಡ! – ಕಾರಣವೇನು ಗೊತ್ತಾ?

ಇತ್ತೀಚೆಗೆ ಆನ್‌ಲೈನ್‌ ಪಾವತಿಗಳಲ್ಲಿ ವಂಚನೆ ಪ್ರಕರಣಗಳು ವರದಿಯಾಗುತ್ತಲೇ ಇದೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು, ವಂಚನೆ ಪ್ರಕರಣಗಳನ್ನು ಆದಷ್ಟೂ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೂ ಯುಪಿಐ ಮೂಲಕ ತಪ್ಪಾಗಿ ಬೇರೆ ಐಡಿಗೆ ಹಣ ಕಳುಹಿಸಿ, ಅದನ್ನು ಮರಳಿ ಪಡೆಯಲು ಸಾಧ್ಯವಾಗದ ಸಾಕಷ್ಟು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಲೇ ಇದೆ. ಇಂಥದ್ದೊಂದು ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ದುಡ್ಡು ಜಮೆಯಾಗದ ಮಹಿಳೆಯರ ಮನೆಬಾಗಿಲಿಗೆ ಬಂದು ದಾಖಲೆ ಸಂಗ್ರಹ

ಹೌದು, ಡಿಜಿಟಲ್ ಪಾವತಿಗಳ ವಂಚನೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಪೇಮೆಂಟ್‌ ಮಾಡಿದ 4 ಗಂಟೆಯೊಳಗೆ ಹಣ ಹಿಂಪಡೆಯುವ ಅವಕಾಶ ನೀಡಲಿದೆ. ಇದು ಕೇವಲ ಯುಪಿಐ ಮಾತ್ರವಲ್ಲ, ಇತರ ಡಿಜಿಟಲ್ ವಹಿವಾಟುಗಳಾದ ಐಎಂಪಿಎಸ್, ಆರ್​ಟಿಜಿಎಸ್​ನಲ್ಲೂ 4 ಗಂಟೆ ಮಿತಿಯ ಈ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ.

ಮೊದಲ ಬಾರಿಗೆ ಒಂದು ಖಾತೆಗೆ 2,000 ರೂಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದಾಗ 4 ಗಂಟೆಯ ಮಿತಿಯನ್ನು ಸೇರಿಸಲು ಉದ್ದೇಶಿಸಲಾಗಿದೆ. ಸರ್ಕಾರ ಹಾಗೂ ಉದ್ಯಮದ ಸಂಬಂಧಿತರ ಮಧ್ಯೆ ನಡೆಯುವ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗುವುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಿವಿಧ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು, ಗೂಗಲ್, ರೇಜರ್​ಪೇ ಮೊದಲಾದ ಟೆಕ್ ಕಂಪನಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿವೆ ಎಂದು ವರದಿಯಾಗಿದೆ.

4 ಗಂಟೆ ಟೈಮ್ ಲಿಮಿಟ್ ಹೇಗೆ ಕೆಲಸ ಮಾಡುತ್ತೆ?

ಎನ್​ಇಎಫ್​ಟಿಯಲ್ಲಿ ಕಳುಹಿಸಲಾದ ಹಣ ರವಾನೆಯಾಗಲು ಕೆಲ ಗಂಟೆಗಳಾಗಬಹುದು. ಅದೇ ರೀತಿ 4 ಗಂಟೆ ಕಾಲಮಿತಿಯ ಸೌಲಭ್ಯ ಮಾಡುವ ಪ್ರಸ್ತಾಪ ಇದೆ. ಉದಾಹರಣೆಗೆ, ನೀವು ಈ ಹೊಸ ಯುಪಿಐ ಐಡಿಗೆ ಅಥವಾ ನಂಬರ್​ಗೆ ಮೊದಲ ಬಾರಿಗೆ ಹಣ ಕಳುಹಿಸುತ್ತೀರಿ. ಆ ಹಣ ತತ್​ಕ್ಷಣ ವರ್ಗಾವಣೆ ಆಗದೇ 4 ಗಂಟೆವರೆಗೂ ಉಳಿದಿರುತ್ತದೆ. ನೀವು ತಪ್ಪಾಗಿ ಹಣ ಕಳುಹಿಸಿದ್ದರೆ ಅದನ್ನು ಮರಳಿ ಪಡೆಯುವ ಅವಕಾಶ ಇರುತ್ತದೆ. ಸದ್ಯ 2,000 ರೂ ಮೇಲ್ಪಟ್ಟ ಹಣದ ವಹಿವಾಟಿನಲ್ಲಿ ಈ ಅವಕಾಶ ಕೊಡಲಾಗಿದೆ.

ಮೊದಲಿಗೆ ಎಲ್ಲಾ ಮೊತ್ತಕ್ಕೂ ಈ ಕಾಲಮಿತಿಯನ್ನು ಅಳವಡಿಸಬೇಕು ಎಂದಿದ್ದೆವು. ಆದರೆ, ಆ ರೀತಿ ಮಾಡಿದರೆ ದಿನಸಿ ಮಾರಾಟದಂತಹ ಸಣ್ಣ ವಹಿವಾಟುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ವಿಚಾರವು ಉದ್ಯಮದವರೊಂದಿಗೆ ಔಪಚಾರಿಕವಾಗಿ ಚರ್ಚಿಸುವಾಗ ಗಮನಕ್ಕೆ ಬಂದಿತು. ಹೀಗಾಗಿ, ಎರಡು ಸಾವಿರ ರೂಗಿಂತ ಕಡಿಮೆ ಮೊತ್ತದ ವಹಿವಾಟನ್ನು ಇದರಿಂದ ಹೊರತಾಗಿಸಲು ನಿರ್ಧರಿಸಿದೆವು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.

Shwetha M