ಬೇಗ ಮದುವೆಯಾಗಲಿ ಅಂತಾ ವ್ರತ ಮಾಡಿದ.. – ತನ್ನ ಕೋರಿಕೆ ಈಡೇರಿಸಿಲ್ಲ ಎಂದು ಶಿವಲಿಂಗವನ್ನೇ ಕದ್ದ ಭೂಪ!

ಬೇಗ ಮದುವೆಯಾಗಲಿ ಅಂತಾ ವ್ರತ ಮಾಡಿದ.. – ತನ್ನ ಕೋರಿಕೆ ಈಡೇರಿಸಿಲ್ಲ ಎಂದು ಶಿವಲಿಂಗವನ್ನೇ ಕದ್ದ ಭೂಪ!

ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಅನ್ನೋದು ಯುವಕರ ದೊಡ್ಡ ಗೋಳಾಗಿದೆ. ಹೀಗಾಗಿ ಪರಿಚಯಸ್ಥರಲ್ಲಿ, ಮ್ಯಾರೆಜ್‌ ಬ್ರೋಕರ್‌ಗಳಲ್ಲಿ ಮದುವೆಯಾಗಲು ಹೆಣ್ಣು ಹುಡುಕಿಕೊಡಿ ಅಂತಾ ಕೇಳುತ್ತಾರೆ. ತಮ್ಮ ಪ್ರಯತ್ನಕ್ಕೆ ದೇವರ ಅನುಗ್ರಹ ಕೂಡ ಇರಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಷ್ಟೇ ಅಲ್ಲದೇ ತಮ್ಮ ಕೋರಿಕೆ ಆದಷ್ಟು ಬೇಗ ಈಡೇರಲಿ ಅಂತಾ ಹರಕೆ ಹೊರುತ್ತಾರೆ. ಇಲ್ಲೂ ಒಬ್ಬ ತನ್ನ ಮದುವೆ ಆದಷ್ಟು ಬೇಗ ಆಗಲಿ ಎಂದು ಬೇಡಿಕೊಂಡಿದ್ದಾನೆ. ಆದರೆ ಆತನ ಬೇಡಿಕೆಯನ್ನು ದೇವರು ಈಡೇರಿಸಿಲ್ಲ ಎಂದು ರೊಚ್ಚಿಗೆದ್ದು, ಶಿವಲಿಂಗವನ್ನೇ ಹೊತ್ತೊಯ್ದಿದ್ದಾನೆ!

ಇದನ್ನೂ ಓದಿ: ಮಗಳ ಮದುವೆಗೆ ಕೇವಲ 2 ಗಂಟೆ ಇರುವಾಗಲೇ ಕುಸಿದು ಬಿದ್ದ ಅಪ್ಪ – ಆಮೇಲೆ ನಡೆದಿದ್ದು ಘೋರ ದುರಂತ!

ಏನಿದು ಘಟನೆ?

ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಯುವಕನೊಬ್ಬ ತನಗೆ ಬೇಗ ಮದುವೆಯಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾನೆ. ಆತನ ಬೇಡಿಕೆಯನ್ನು ದೇವರು ಈಡೇರಿಸಿಕೊಂಡಿಲ್ಲ ಎಂದು ರೊಚ್ಚಿಗೆದ್ದಿದ್ದಾನೆ. ಬಳಿಕ ಆತನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶಿವಲಿಂಗವನ್ನೇ ಹೊತ್ತೊಯ್ದಿದ್ದಾನೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಎಂದಿನಂತೆ ಅರ್ಚಕರು ಹಾಗೂ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ವೇಳೆ ಗರ್ಭಗುಡಿಯಲ್ಲಿ ಶಿವಲಿಂಗ ಇಲ್ಲದಿರುವುದು ಬೆಳಕಿಗೆ ಬಂದಿದೆ. ಶಿವಲಿಂಗ ನಾಪತ್ತೆಯಾಗಿರುವ ಸಂಬಂಧ ಗ್ರಾಮದ ಅಧ್ಯಕ್ಷ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೆ ಭಾನುವಾರ ಕುಮ್ಹಿಯಾವಾಹಾದಿಂದ ಆರೋಪಿ ಚೋಟು ಎಂಬಾತನನ್ನು ಬಂಧಿಸಿದ್ದಾರೆ.

ಯುವಕ ಕದ್ದ ಶಿವಲಿಂಗವನ್ನು ಬಿದಿರಿನ ರಾಶಿಯ ಅಡಿಯಲ್ಲಿ ಬಚ್ಚಿಟ್ಟಿದ್ದನು ಎಂದು ಮಹೇವಾ ಘಾಟ್ ಪೊಲೀಸ್ ಠಾಣೆಯ ಅಧಿಕಾರಿ ರಜನಿಕಾಂತ್ ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೈಲಿಗಟ್ಟಲಾಗಿದೆ.

ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಶಿವಲಿಂಗ ಕದಿಯಲು ಕಾರಣವೇನು ಎಂಬುದನ್ನು ರಿವೀಲ್ ಮಾಡಿದ್ದಾನೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ತಾನು ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಉಪವಾಸ ಮಾಡುತ್ತಿದ್ದೆ. ಆದರೂ ಶಿವನು ನನ್ನ ಮದುವೆಯ ಆಸೆ ಈಡೇರಿಸಲಿಲ್ಲ. ಹೀಗಾಗಿ ನೊಂದು ಈ ಕೆಲಸ ಮಾಡಿದ್ದೆನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

suddiyaana