ಸ್ಮಾರ್ಟ್ ಫೋನ್ ಖರೀದಿಸಿದರೆ 2 ಕ್ಯಾನ್ ಬಿಯರ್ ಫ್ರೀ – ಮೊಬೈಲ್ ಗಾಗಿ ಬಂದವರಿಗೆ ಸಿಕ್ಕಿದ್ದು ಲಾಠಿ ಏಟು!

ಸ್ಮಾರ್ಟ್ ಫೋನ್ ಖರೀದಿಸಿದರೆ 2 ಕ್ಯಾನ್ ಬಿಯರ್ ಫ್ರೀ – ಮೊಬೈಲ್ ಗಾಗಿ ಬಂದವರಿಗೆ ಸಿಕ್ಕಿದ್ದು ಲಾಠಿ ಏಟು!

ಲಕ್ನೋ: ವಿಶೇಷ ದಿನಗಳಲ್ಲಿ  ನಾವು ಖರೀದಿಸುವ ವಸ್ತುಗಳಿಗೆ ರಿಯಾಯಿತಿ, ಕೋಂಬೋ ಆಫರ್, ಬೈ ಟೂ ಗೆಟ್ ಒನ್ ಫ್ರೀ ಅಂತಾ ಕೆಲವೊಂದು ಅಂಗಡಿಗಳ ಮುಂದೆ ಬ್ಯಾನರ್ ಹಾಕಿರುವುದನ್ನು ನೋಡಿರುತ್ತೇವೆ. ಈ ವೇಳೆ ಜನರು ಮುಗಿಬಿದ್ದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಆಫರ್ ಅನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಉತ್ತರ ಪ್ರದೇಶದಲ್ಲೊಬ್ಬ ತನ್ನ ಅಂಗಡಿ ಮುಂದೆ ವಿಶೇಷ ಆಫರ್ ಕುರಿತಾದ ಬ್ಯಾನರ್ ಅಳವಡಿಸಿದ್ದಾನೆ. ಈ ಆಫರ್ ನಿಂದಾಗಿ ಆತ ಕಂಬಿ ಎಣಿಸುವಂತೆ ಆಗಿದೆ.

ಹೌದು, ಉತ್ತರ ಪ್ರದೇಶದ ಭದೋಹಿಯಲ್ಲಿ ಅಂಗಡಿ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಸ್ಮಾರ್ಟ್ ಫೋನ್ ಖರೀದಿಸಿದರೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುತ್ತೇನೆ ಅಂತಾ ಘೋಷಿಸಿದ್ದಾನೆ. ಇದರ ಪರಿಣಾಮ ಮೊಬೈಲ್ ಶೋ ರೂಮ್ ಎದುರು ಭಾರೀ ಪ್ರಮಾಣದಲ್ಲಿ ಜನ ಸೇರಿ ದೊಡ್ಡ ರಾದ್ದಾಂತವೇ ಆಗಿದೆ.

ಇದನ್ನೂ ಓದಿ: 22 ವರ್ಷದಿಂದ ಪತ್ನಿಯ ತವರು ಮನೆಗೆ ಹೋಗಿಲ್ಲ, 10 ದಿನ ರಜೆ ಕೊಡಿ ಎಂದು ಇನ್ಸ್​ಪೆಕ್ಟರ್ ಪತ್ರ – ಮುಂದೇನಾಯ್ತು ಗೊತ್ತಾ?

ಭದೋಹಿಯ ಚೌರಿ ರಸ್ತೆ ಸಮೀಪ ಮೊಬೈಲ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಎಂಬಾತ ಮೊಬೈಲ್ ಶೋರೂಮ್ ನಡೆಸುತ್ತಿದ್ದಾನೆ.  ತನ್ನ ಶೋರೂಮ್ ನಲ್ಲಿ ಮಾರ್ಚ್ 3ರಿಂದ 7ರವರೆಗೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುವುದಾಗಿ ಪೋಸ್ಟರ್, ಕರಪತ್ರದ ಮೂಲಕ ಪ್ರಚಾರ ಮಾಡಿದ್ದಾನೆ.  ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ಎರಡು ಕ್ಯಾನ್ ಬಿಯರ್ ಪಡೆಯಿರಿ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ ಪರಿಣಾಮ ಶೋರೂಂನತ್ತ ಜನರು ಲಗ್ಗೆ ಹಾಕತೊಡಗಿದ್ದರು. ಇದರಿಂದಾಗಿ ಅಂಗಡಿ ಎದುರು ನೂಕು ನುಗ್ಗಲು ಉಂಟಾಗಿದೆ. ಸುದ್ದಿ ತಿಳಿದ ಕೋಟ್ವಾಲಿ  ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿಚಾರ್ಜ್ ನಡೆಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರು ಶೋರೂಮ್  ಮಾಲೀಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಬಳಿಕ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಸಂಜೆ ಮೊಬೈಲ್ ಶೋರೂಮ್ ಮುಂಭಾಗ ನೆರೆದಿದ್ದ ಜನರ ಗುಂಪನ್ನು ಲಾಠಿಚಾರ್ಜ್ ಮಾಡುವ ಮೂಲಕ ಚದುರಿಸಲಾಗಿದೆ. ಬಳಿಕ ಮಾಲೀಕ ಮೌರ್ಯನನ್ನು ಸಾರ್ವಜನಿಕ ಶಾಂತಿ ಕದಡಿದ ಆರೋಪದಡಿ ಬಂಧಿಸಿರುವುದಾಗಿ ಕೋಟ್ವಾಲಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸೇಠ್ ತಿಳಿಸಿದ್ದಾರೆ.

suddiyaana