ಒತ್ತುವರಿ ತೆರವು ವೇಳೆ ತಾಯಿ, ಮಗಳು ಸಜೀವದಹನ – ಅಧಿಕಾರಿಗಳೇ ಗುಡಿಸಲಿಗೆ ಬೆಂಕಿ ಇಟ್ಟು ಕೊಂದ್ರಾ..!?

ಒತ್ತುವರಿ ತೆರವು ವೇಳೆ ತಾಯಿ, ಮಗಳು ಸಜೀವದಹನ – ಅಧಿಕಾರಿಗಳೇ ಗುಡಿಸಲಿಗೆ ಬೆಂಕಿ ಇಟ್ಟು ಕೊಂದ್ರಾ..!?

ಸರ್ಕಾರಿ ಭೂಮಿ ಒತ್ತುವರಿ ಆರೋಪದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಶುರು ಮಾಡಿದ್ದರು. ಗುಡಿಸಲು ಹಾಕಿಕೊಂಡಿದ್ದ ನಿವಾಸಿಗಳು ನಾವು ಇಲ್ಲಿಂದ ತೆರಳಲ್ಲ ಅಂತಾ ಪಟ್ಟು ಹಿಡಿದಿದ್ರು. ಆದರೆ ನೋಡ ನೋಡುತ್ತಲೇ ಅಲ್ಲಿ ಬೆಂಕಿ ಧಗಧಗಿಸತೊಡಿತ್ತು. ಇಬ್ಬರು ಸಜೀವದಹನವಾಗಿದ್ದರು.

ಉತ್ತರ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಭೂಮಿ ತೆರವುಗೊಳಿಸುವ ವೇಳೆ ಘೋರ ದುರಂತವೇ ನಡೆದು ಹೋಗಿದೆ. ತೆರವು ಕಾರ್ಯಾಚರಣೆ ತಾಯಿ, ಮಗಳು ಸಜೀವ ದಹನವಾಗಿದ್ದಾರೆ. ಕಾನ್ಪುರ ದೆಹಾತ್ ಜಿಲ್ಲೆಯ ಗ್ರಾಮವೊಂದರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ 45 ವರ್ಷದ ಮಹಿಳೆ ಮತ್ತು ಆಕೆಯ 20 ವರ್ಷದ ಮಗಳು ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಮಹಿಳೆಯರು ಗುಡಿಸಿಲಿನ ಒಳಗೆ ಇರುವಾಗಲೇ ಪೊಲೀಸರು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಆದರೆ ತಾಯಿ ಹಾಗೂ ಮಗಳು ತಮಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳುತ್ತಿದ್ದಾರೆ. ಆದರೆ ಪ್ರಕರಣ ಸಂಬಂಧ ಉತ್ತರಪ್ರದೇಶ ಪೊಲೀಸರು ಈಗ 13 ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಚಾಲಕರು – ಪೊಲೀಸ್ ಠಾಣೆಯಲ್ಲಿ 1,000 ಬಾರಿ ಬರೆಯುವ ಶಿಕ್ಷೆ!

ಆರೋಪಿಗಳಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಬುಲ್ಡೋಜರ್ ಆಪರೇಟರ್ ಸಹ ಸೇರಿದ್ದಾರೆ. ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ಮತ್ತು ಉದ್ದೇಶಪೂರ್ವಕವಾಗಿ ಗಾಸಿ ಉಂಟುಮಾಡಿದ ಪ್ರಕರಣಗಳನ್ನು ಕೂಡ ದಾಖಲು ಮಾಡಲಾಗಿದೆ. ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಭೀಕರ ದುರಂತ ನಡೆದಿದೆ.

ಮೃತ ಮಹಿಳೆಯ ಪುತ್ರ ಶಿವಂ ದೀಕ್ಷಿತ್ ಮಾತನಾಡಿ ‘ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಿಢೀರನೆ ಬುಲ್ಡೋಜರ್ ಸಮೇತ ಪ್ರತ್ಯಕ್ಷವಾಗಿದ್ದರು. ಅವರು ತೆರವು ಕಾರ್ಯಾಚರಣೆಗೂ ಮುನ್ನ ನೋಟಿಸ್ ನೀಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜನ ಒಳಗೆ ಇರುವಾಗಲೇ ಅವರು ಬೆಂಕಿ ಹಚ್ಚಲು ಆರಂಭಿಸಿದ್ದರು. ನಾವು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಅವರು ನಮ್ಮ ದೇವಸ್ಥಾನವನ್ನು ಒಡೆದಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಯಾರೂ ಏನನ್ನೂ ಮಾಡಲಿಲ್ಲ. ಎಲ್ಲರೂ ಓಡಿದರೂ, ನನ್ನ ತಾಯಿಯನ್ನು ಕಾಪಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

ಗುಡಿಸಿಲಿನ ಒಳಗಿದ್ದ ಪ್ರಮೀಳಾ ದೀಕ್ಷಿತ್ ಮತ್ತು ಅವರ ಮಗಳು ನೇಹಾ ಸ್ವತಃ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಸೋಮವಾರ ವಾದಿಸಿದ್ದರು. ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಗೌತಮ್ ಮತ್ತು ಪ್ರಮೀಳಾ ಅವರ ಪತಿ ಗೆಂದನ್ ಲಾಲ್ ಅವರು ಇಬ್ಬರನ್ನೂ ರಕ್ಷಿಸಲು ಹೋಗಿ ಸುಟ್ಟ ಗಾಯಗಳಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಎಸ್‌ಪಿ ಬಿಬಿಜಿಟಿಎಸ್ ಮೂರ್ತಿ ‘ಮಹಿಳೆ ಮತ್ತು ಆಕೆಯ ಮಗಳು ಗುಡಿಸಲಿನ ಒಳಗಿನಿಂದ ಚಿಲಕ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಇದರ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ನಾವು ಸ್ಥಳಕ್ಕೆ ತೆರಳಿದ್ದೇವೆ. ಸಂಬಂಧಿಸಿದ ಎಲ್ಲ ಅಧಿಕಾರಿಗಳು ಕೂಡ ಇಲ್ಲಿದ್ದಾರೆ. ನಾವು ತನಿಖೆ ನಡೆಸಲಿದ್ದೇವೆ. ಯಾವುದೇ ತಪ್ಪುಗಳು ಕಂಡುಬಂದರೆ ನಾವು ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ. ಎಲ್ಲಿಯೇ ಒತ್ತುವರಿ ತೆರವು ಕಾರ್ಯಾಚರಣೆ ನಡೆದರೂ ಅಲ್ಲಿ ವಿಡಿಯೋ ಚಿತ್ರೀಕರಣ ನಡೆಸಬೇಕು. ನಾವು ವಿಡಿಯೋ ಒದಗಿಸುವಂತೆ ಸೂಚಿಸಿದ್ದೇವೆ. ಅದನ್ನು ತನಿಖೆಗೆ ಒಳಪಡಿಸಲಿದ್ದೇವೆ’ ಎಂದಿದ್ದಾರೆ.

ತಾಯಿ- ಮಗಳ ಸಜೀವ ದಹನದ ಬಳಿಕ ಸ್ಥಳದಲ್ಲಿ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸ್ಥಳದಿಂದ ನಿರ್ಗಮಿಸುತ್ತಿದ್ದ ಪೊಲೀಸರ ಮೇಲೆ ಗ್ರಾಮಸ್ಥರು ಇಟ್ಟಿಗೆಗಳನ್ನು ಎಸೆದಿದ್ದಾರೆ. ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಉಪ- ವಿಭಾಗೀಯ ಮ್ಯಾಜಿಸ್ಟ್ರೇಟ್ ಜ್ಞಾನೇಶ್ವರ್ ಪ್ರಸಾದ್, ಲೇಖಪಾಲ್ ಸಿಂಗ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸ್ಥಳೀಯರು ಒತ್ತಾಯಿಸಿದರು.

suddiyaana