ಕಿಡ್ನಿ ಸ್ಟೋನ್ ಅಂತಾ ಬಂದವನ ಮೂತ್ರಪಿಂಡವನ್ನೇ ತೆಗೆದ ವೈದ್ಯರು! –ರೋಗಿ ಸಾವು
ಘಾಜಿಯಾಬಾದ್: ಅನಾರೋಗ್ಯ ಉಂಟಾದಾಗ ನಾವು ವೈದ್ಯರ ಬಳಿ ತೆರಳುತ್ತೇವೆ. ವೈದ್ಯರು ನಮ್ಮ ರೋಗ ಲಕ್ಷಣಗಳನ್ನು ಪರಿಶೀಲಿಸಿ ಔಷಧಿಗಳನ್ನ ನೀಡಿ ಕಾಯಿಲೆಗಳನ್ನು ಗುಣಪಡಿಸುತ್ತಾರೆ. ಆದರೆ ಕೆಲವು ವೈದ್ಯರು ಕಾಯಿಲೆಗಳನ್ನು ಗುಣಪಡಿಸುತ್ತೇವೆ ಅಂತಾ ಹೇಳಿ ಜೀವಕ್ಕೆ ಕುತ್ತು ತಂದಿರುವ ಅನೇಕ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದೀಗ ಇಲ್ಲೊಬ್ಬ ವೈದ್ಯ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಲು ಹೋಗಿ ಆತನ ಜೀವವನ್ನೇ ತೆಗೆದಿದ್ದಾನೆ.
ಇದನ್ನೂ ಓದಿ: ವಾಷಿಂಗ್ ಮಷಿನ್ ಸ್ಫೋಟ.. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು – ಅಬ್ಬಬ್ಬಾ ದೃಶ್ಯವೇ ಭಯಾನಕ!
ಉತ್ತರ ಪ್ರದೇಶದ ಘಾಜಿಯಾಬಾದ್ ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿರುವ ಸ್ಪರ್ಶ್ ಆಸ್ಪತ್ರೆಗೆ ವ್ಯಕ್ತಿಯೊಬ್ಬ ಕಿಡ್ನಿ ಸ್ಟೋನ್ ಇದೆ ಅಂತಾ ಚಿಕಿತ್ಸೆಗೆ ದಾಖಲಾಗಿದ್ದ. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಅಂತಾ ಹೇಳಿದ್ದಾರೆ. ಕುಟುಂಬಸ್ಥರ ಸಮ್ಮತಿ ಪಡೆದು ಹದಿನೈದು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿ ಡಿಸ್ಚಾರ್ಜ್ ಮಾಡಿದ್ದರು. ಆದರೆ ರೋಗಿಯ ಕಾಲುಗಳಲ್ಲಿ ಊತ ಕಾಣಿಸಿಕೊಂಡಿದ್ದರಿಂದ, ಸೋಮವಾರ ಮಧ್ಯಾಹ್ನ ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸತ್ಯ ಬಯಲಾಗಿದೆ.
ವೈದ್ಯರು ಶಸ್ಕ್ರಚಿಕಿತ್ಸೆ ವೇಳೆ ಕಿಡ್ನಿ ಸ್ಟೋನ್ ತೆಗೆಯುವ ಬದಲು ಆತನ ಮೂತ್ರಪಿಂಡವನ್ನೇ ತೆಗೆದುಹಾಕಿದ್ದಾರೆ. ಇದರಿಂದಾಗಿ ರೋಗಿ ಸೋಮವಾರ ಸಾವನ್ನಪ್ಪಿದ್ದಾನೆ.
ರೋಗಿಯ ತಂದೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಮಗನ ಸಾವಿನ ಕುರಿತಂತೆ ವೈದ್ಯರು ಸತ್ಯವನ್ನು ಮರೆಮಾಚಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಆತನ ಮೂತ್ರಪಿಂಡವನ್ನೇ ತೆಗೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಅಂತಾ ದೂರಿನಲ್ಲಿ ತಿಳಿಸಿದ್ದಾರೆ.
ಸ್ಪರ್ಶ್ ಆಸ್ಪತ್ರೆಯನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಆಸ್ಪತ್ರೆ ನಡೆಸುತ್ತಿರುವ ದಾಖಲೆಗಳು ಹಾಗೂ ವೈದ್ಯರ ವೈದ್ಯಕೀಯ ಪದವಿಗಳ ಸಿಂಧುತ್ವವನ್ನು ಪರಿಶೀಲಿಸಲು ನಾಲ್ಕು ವೈದ್ಯರ ಸಮಿತಿಯನ್ನು ರಚಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಎಂಒಗೆ ರವಾನಿಸಲಾಗಿದೆ ಅಂತಾ ಎಸಿಪಿ ಸಾಹಿಬದಾದ್ ಭಾಸ್ಕರ್ ರಾವ್ ತಿಳಿಸಿದ್ದಾರೆ.