ಕಳ್ಳರ ಪತ್ತೆಗೆ ಕಾಲೇಜು ಶೌಚಾಲಯದಲ್ಲಿ ಸಿಸಿಟಿವಿ! – ಬೆಚ್ಚಿ ಬಿದ್ದ ಸ್ಟೂಡೆಂಟ್ಸ್

ಕಳ್ಳರ ಪತ್ತೆಗೆ ಕಾಲೇಜು ಶೌಚಾಲಯದಲ್ಲಿ ಸಿಸಿಟಿವಿ! – ಬೆಚ್ಚಿ ಬಿದ್ದ ಸ್ಟೂಡೆಂಟ್ಸ್

ಲಖನೌ: ಪ್ರಪಂಚದ ಪ್ರತಿ ಮೂಲೆ ಮೂಲೆಯಲ್ಲೂ ಕಳ್ಳರ ಹಾವಳಿ ಇದ್ದೇ ಇರುತ್ತೆ. ಕೆಲ ಕಳ್ಳರು ಸಣ್ಣ ಪುಟ್ಟ ವಸ್ತುಗಳನ್ನು ಕದ್ದರೆ, ಇನ್ನು ಕೆಲವರು ಬೆಲೆಬಾಳುವ ವಸ್ತುಗಳಿಗೆ ಕನ್ನ ಹಾಕುತ್ತಾರೆ. ಹೀಗಾಗಿ ಕಳ್ಳರ ಉಪಟಳ ಕಡಿಮೆ ಮಾಡಲು ಅಲ್ಲಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ. ಇದೇ ರೀತಿ ಉತ್ತರ ಪ್ರದೇಶದ ಕಾಲೇಜೊಂದರಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ಯಂತೆ. ಇದರಿಂದ ಬೇಸತ್ತ ಕಾಲೇಜಿನ ಭದ್ರತಾ ತಂಡ ಕಳ್ಳರನ್ನು ಹಿಡಿಯೋಕೆ ಹೋಗಿ ಎಡವಟ್ಟು ಮಾಡಿಕೊಂಡಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆಯಾದರೂ ಪರೀಕ್ಷೆಯದ್ದೇ ಚಿಂತೆ – ಆಂಬ್ಯುಲೆನ್ಸ್‌ನಲ್ಲೇ SSLC ಎಕ್ಸಾಂ ಬರೆದ ವಿದ್ಯಾರ್ಥಿನಿ

ಉತ್ತರ ಪ್ರದೇಶದ ಅಜಂಗಢದಲ್ಲಿರುವ ಡಿಎವಿ ಪಿಜಿ ಕಾಲೇಜಿನಲ್ಲಿ ಆಗಾಗ ನಲ್ಲಿ ಕಳ್ಳತನವಾಗುತ್ತಿದೆಯಂತೆ. ಎಷ್ಟು ಬಾರಿ ನಲ್ಲಿ ತಂದು ಹಾಕಿದರೂ ಕೂಡ ಕಳ್ಳರು ಬಿಡುತ್ತಿಲ್ಲವಂತೆ. ಇದರಿಂದ ಬೇಸತ್ತ ಕಾಲೇಜು ಭದ್ರತಾ ತಂಡ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಈ ವೇಳೆ ದೊಡ್ಡ ಎಡವಟ್ಟೊಂದನ್ನು ಮಾಡಿದೆ.

ಕಾಲೇಜು ಭದ್ರತಾ ತಂಡ ಕಳ್ಳರ ಹಾವಳಿ ತಪ್ಪಿಸಲು ಕಾಲೇಜು ಆವರಣದಲ್ಲಿ ಸಿಸಿಟಿವಿ ಅಳವಡಿಸಿದೆ. ಈ ವೇಳೆ ಶೌಚಾಲಯದಲ್ಲೂ ಒಂದು ಸಿಸಿಟಿವಿ ಅಳವಡಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯ ಹೊರಗೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದಾರೆ. ಇದು ನಮ್ಮ ಗೌಪ್ಯತೆಯ ಉಲ್ಲಂಘನೆ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ಕ್ಯಾಂಪಸ್‌ನಿಂದ ನಿರಂತರವಾಗಿ ನೀರಿನ ನಲ್ಲಿಗಳನ್ನು ಕಳ್ಳತನ ಮಾಡಲಾಗುತ್ತಿದೆ. ಈ ಹಿನ್ನೆಲೆ ಇದನ್ನು ತಡೆಯಲು ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಒಂದು ಕ್ಯಾಮರಾ ತಪ್ಪಾಗಿ ಟಾಯ್ಲೆಟ್‌ನೊಳಗೆ ಹಾಕಲಾಗಿದೆ. ಅದನ್ನು ತೆಗೆದು ಬೇರೆ ಸ್ಥಳದಲ್ಲಿ ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

suddiyaana