ಅಯೋಧ್ಯಾ ನಗರಕ್ಕೆ ಆಧುನಿಕತೆಯ ಸ್ಪರ್ಶ! – ಪ್ರವಾಸಿಗರನ್ನು ಸೆಳೆಯಲು ಯೋಗಿ ಸರ್ಕಾರದಿಂದ ನವ್ಯ ಅಯೋಧ್ಯಾ ಯೋಜನೆ!
ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಜನವರಿ 22 ರಂದು ಉದ್ಘಾಟನೆಯಾಗಲಿರುವ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಜೊತೆಯಲ್ಲೇ ಇಡೀ ಅಯೋಧ್ಯೆ ನಗರವನ್ನೇ ಆಧುನೀಕರಣಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಹೌದು, ಅಯೋಧ್ಯೆ ರಾಮಮಂದಿರ ಹಲವು ವೈಶಿಷ್ಠ್ಯಗಳಿಂದ ಕೂಡಿದೆ. 2017ರಿಂದ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪೋತ್ಸವ ಈಗಾಗಲೇ ಗಿನ್ನೆಸ್ ಪುಸ್ತಕದಲ್ಲೂ ದಾಖಲಾಗಿದೆ. ಇದೀಗ ಅಯೋಧ್ಯೆಗೆ ಪ್ರತಿ ನಿತ್ಯ ಭೇಟಿ ನೀಡಲಿರುವ ಲಕ್ಷಾಂತರ ಪ್ರವಾಸಿಗರು, ಭಕ್ತಾದಿಗಳನ್ನು ಸೆಳೆಯಲು ವಿವಿಧ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಅಯೋಧ್ಯೆಗೆ ಆಧುನಿಕ ಸ್ಪರ್ಶ ನೀಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದ ಹಲವು ಯೋಜನೆಗಳನ್ನು ರೂಪಿಸಿದೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಜೊತೆಯಲ್ಲೇ ಅಯೋಧ್ಯೆಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಶ್ರೀಮಂತಿಕೆಯನ್ನೂ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ದೀಪಾವಳಿಯಂದೇ ದಾಖಲೆ ಬರೆಯಲಿದೆ ಅಯೋಧ್ಯೆ ರಾಮಮಂದಿರ – ರಾಮನಗರಿಯನ್ನು ಬೆಳಗಲಿವೆ 24 ಲಕ್ಷ ದೀಪಗಳು!
ಇನ್ನು ಅಯೋಧ್ಯೆಗೆ ಪ್ರವಾಸಿಗರು ಆಗಮಿಸಲು ಹಾಗೂ ನಿರ್ಗಮಿಸಲು ಅನುಕೂಲ ಆಗುವಂತೆ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಕೂಡಾ ಶೀಘ್ರದಲ್ಲೇ ನಿರ್ಮಾಣ ಆಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಏರ್‌ಪೋರ್ಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೆಲವೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಈ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ.
ನವ್ಯ ಅಯೋಧ್ಯಾ ಯೋಜನೆ ಅಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅಯೋಧ್ಯೆಯ ಹಸಿರೀಕರಣ ಕಾಮಗಾರಿಯೂ ಭರದಿಂದ ಸಾಗಿದೆ. ಅತ್ಯಾಧುನಿಕ ನಗರೀಕರಣ ಸೌಲಭ್ಯ ಉಳ್ಳ ಪ್ರದೇಶದ ಕಾಮಗಾರಿ 1,893 ಎಕರೆ ಪ್ರದೇಶದಲ್ಲಿ ನಡೆಯುತ್ತಿದ್ದ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜೊತೆಯಲ್ಲೇ ಅಯೋಧ್ಯೆಯನ್ನು ದೇಶದ ಅತಿ ದೊಡ್ಡ ಸೋಲಾರ್ ನಗರವನ್ನಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅಯೋಧ್ಯೆಯ ಸರಯೂ ನದಿ ತೀರದಲ್ಲಿ 40 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ನಿರ್ಮಿಸಲಾಗುತ್ತಿದೆ.
ಜೊತೆಯಲ್ಲೇ ಅಯೋಧ್ಯೆ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲೂ ಅಭಿವೃದ್ದಿ ಮಾಡಲಾಗುತ್ತಿದೆ. ನಗರದ ಟ್ರಾಫಿಕ್ ನಿರ್ವಹಣೆಗೆ ಎಐ ತಂತ್ರಜ್ಞಾನ ಆಧರಿತ ಸಂಚಾರ ನಿರ್ವಹಣಾ ವ್ಯವಸ್ಥೆ ಸಿಗಲಿದೆ. ಜೊತೆಯಲ್ಲೇ ಅಯೋಧ್ಯಾ ನಗರದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಲಭ್ಯ ಆಗಲಿದೆ. ಹನುಮಾನ್ ಘರಿ, ನಯಾ ಘಾಟ್, ಅಯೋಧ್ಯೆ ರೈಲ್ವೆ ನಿಲ್ದಾಣ ಹಾಗೂ ಗುಪ್ತಾರ್ ಘಾಟ್‌ನಲ್ಲಿ ಈ ಸೌಲಭ್ಯ ಇರಲಿದೆ.
ಇನ್ನು ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ 13 ಕಿ. ಮೀ. ಉದ್ದದ ರಾಮ ಪಥ ನಿರ್ಮಾಣ ಆಗುತ್ತಿದೆ. ಸಹಾದತ್ ಗಂಜ್‌ನಿಂದ ನಯಾ ಘಾಟ್‌ವರೆಗೆ ಈ ಪಥ ನಿರ್ಮಾಣ ಆಗಲಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನು ಅಯೋಧ್ಯಾ ಶ್ರೀರಾಮ ಮಂದಿರದ ಆಸುಪಾಸಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಹಲವು ನಿಯಮಗಳನ್ನು ರೂಪಿಸಲಾಗಿದ್ದು, ಏಕರೂಪದಲ್ಲಿ ಕಟ್ಟಡಗಳ ನಿರ್ಮಾಣ ಮಾಡಲು ಆದೇಶಿಸಲಾಗಿದೆ.