ಭಾರತೀಯ ಕುಸ್ತಿಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ – ಇನ್ನಾದರೂ ಸರ್ಕಾರ ಮಣಿಯುತ್ತಾ?

ಭಾರತೀಯ ಕುಸ್ತಿಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ – ಇನ್ನಾದರೂ ಸರ್ಕಾರ ಮಣಿಯುತ್ತಾ?

ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧದ ಹೋರಾಟವನ್ನ ಇನ್ನಷ್ಟು ತೀವ್ರಗೊಳಿಸಲು ಸಕಲ ತಯಾರಿ ನಡೆಯುತ್ತಿದೆ. ಐದು ದಿನಗಳ ಒಳಗಾಗಿ ಭೂಷಣ್ ವಿರುದ್ಧ ಕ್ರಮಕೈಗೊಳ್ಳದೇ ಇದ್ದಲ್ಲಿ ಗಂಗಾ ನದಿಯಲ್ಲಿ ಪದಕಗಳನ್ನ ವಿಸರ್ಜಿಸೋದಾಗಿ ಈಗಾಗ್ಲೇ ಕುಸ್ತಿಪಟುಗಳನ್ನ ವಾರ್ನಿಂಗ್ ಮಾಡಿದ್ದಾರೆ. ಇದ್ರ ಬೆನ್ನಲ್ಲೇ, ಜೂನ್ 1ರಂದು ಉತ್ತರಪ್ರದೇಶದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಕುಸ್ತಿಪಟುಗಳಿಗೆ ಬೆಂಬಲವಾಗಿ ನಿಂತು ಮಹತ್ವದ ಸಭೆ ನಡೆಸಲಿದೆ. ಈ ವೇಳೆ ಮುಂದಿನ ಹಂತದ ಹೋರಾಟದ ಬಗ್ಗೆ ತೀರ್ಮಾನವಾಗಲಿದೆ. ಅಲ್ಲದೇ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಿಸಾನ್​ ಯೂನಿಯನ್ ನಿರ್ಧರಿಸಿದೆ. ಕಿಸಾನ್ ಯೂನಿಯನ್ ಸಭೆಯಲ್ಲಿ ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಖಾಪ್​ ಪಂಚಾಯತ್ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕುಸ್ತಿಪಟುಗಳು ಗಂಗಾ ನದಿಯಲ್ಲಿ ವಿಸರ್ಜಿಸಲು ಹೊರಟಿದ್ದ ಪದಕಗಳು ಸದ್ಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಬಳಿ ಇವೆ.

ಇದನ್ನೂ ಓದಿ: ಗತವೈಭವ ಸಾರುವ ಅರಮನೆ ಈಗ ಐಷಾರಾಮಿ ಹೋಟೆಲ್ – ಒಂದು ದಿನಕ್ಕೆ 10 ₹ಲಕ್ಷ.. ಏನೆಲ್ಲಾ ವಿಶೇಷತೆ?

ಭಾರತೀಯ ಕುಸ್ತಿಪಟುಗಳಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ ವ್ಯಕ್ತವಾಗಿದೆ. ವಿಶ್ವ ಕುಸ್ತಿ ಒಕ್ಕೂಟ ಮಧ್ಯ ಪ್ರವೇಶಿಸಿದ್ದು, ಜಂತರ್​ಮಂತರ್​ನಲ್ಲಿ ಹೋರಾಟ ಮಾಡುತ್ತಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿರೋದು ಸರಿಯಲ್ಲ. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವ ರೀತಿ ಮತ್ತು ಅದರ ಫಲಿತಾಂಶ ತೃಪ್ತಿದಾಯಕವಾಗಿಲ್ಲ. ಶೀಘ್ರವೇ ಈ ಬಗ್ಗೆ ಸಭೆ ನಡೆಸಿ, ಹೋರಾಟ ನಿರತ ಕುಸ್ತಿಪಟುಗಳ ಸುರಕ್ಷತೆ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ ಅಂತಾ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ ಹೇಳಿದೆ. ಅಷ್ಟೇ ಅಲ್ಲದೆ, ಮುಂದಿನ 45 ದಿನಗಳ ಒಳಗೆ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೇ ಇದ್ದಲ್ಲಿ, ಭಾರತೀಯ ಕುಸ್ತಿ ಒಕ್ಕೂಟವನ್ನ ಅಮಾನತುಗೊಳಿಸುತ್ತೇವೆ ಅಂತಾ ವಿಶ್ವ ಕುಸ್ತಿ ಒಕ್ಕೂಟ ಎಚ್ಚರಿಕೆ ಕೊಟ್ಟಿದೆ.

ಇವೆಲ್ಲದ್ರ ಮಧ್ಯೆ, ಕುಸ್ತಿ ಪಟುಗಳು ಗಂಗಾ ನದಿಯಲ್ಲಿ ಪದಕಗಳನ್ನ ವಿಸರ್ಜಿಸೋಕೆ ಮುಂದಾದ ಬಗ್ಗೆ ಬ್ರಿಜ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ. ಹರಿದ್ವಾರದಲ್ಲಿ ಗಂಗಾ ನದಿಗೆ ಮೆಡಲ್​ಗಳನ್ನ ಎಸೆಯೋಕೆ ಹೋದವರು ಕೊನೆಗೆ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಕೈಗೆ ಮೆಡಲ್​ಗಳನ್ನ ಒಪ್ಪಿಸಿದ್ದಾರೆ. ಅದು ಅವರ ನಿರ್ಧಾರ. ನಾವೇನು ಮಾಡೋಕೆ ಆಗುತ್ತೆ ಅಂತಾ ಬ್ರಿಜ್ ಭೂಷಣ್ ಹೇಳಿದ್ದಾರೆ. ಅಷ್ಟೇ ಅಲ್ಲ, ನನ್ನ ಮೇಲಿನ ಆರೋಪದ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪ ಸಾಬೀತಾದಲ್ಲಿ ನನ್ನನ್ನ ಬಂಧಿಸುತ್ತಾರೆ ಅಂತಾ ಭೂಷಣ್ ಹೇಳಿದ್ದಾರೆ. ಆದ್ರೆ ಬಿಜೆಪಿ ಸಂಸದನ ಮಾತಿನ ಧಾಟಿ ಮಾತ್ರ ನನ್ನನ್ನ ಯಾರಿಗೂ ಏನೂ ಮಾಡೋಕೆ ಆಗಲ್ಲ ಎಂಬಂತೆಯೇ ಇತ್ತು.

ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಸ್ತಿಪಟುಗಳ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಕುಸ್ತಿಪಟುಗಳಿಗೆ ನ್ಯಾಯ ನೀಡಲು ಕೇಂದ್ರ ಸರ್ಕಾರ ಇಷ್ಟೊಂದು ಹಠಮಾರಿತನದ ಧೋರಣೆ ಅನುಸರಿಸುತ್ತಿರೋದು ಯಾಕೆ?  ಮಹಿಳೆಯರಿಗೆ ಗೌರವ ನೀಡಬೇಕು ಅಂತಾ ಮೋದಿ ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡ್ತಾರೆ. ಆದ್ರೆ ಅದೇ ಮಹಿಳೆಯರು ದೌರ್ಜನ್ಯದ ವಿರುದ್ಧ ಹೋರಾಟ ನಡೆಸ್ತಿರೋವಾಗ ಮೋದಿ ಮೌನವಾಗಿದ್ದಾರೆ ಅಂತಾ ಖರ್ಗೆ ಹೇಳಿದ್ರು. ಅಷ್ಟೇ ಅಲ್ಲದೆ, ಭಾರತದ ಹೆಣ್ಣು ಮಕ್ಕಳು ಪೊಲೀಸರು ಮತ್ತು ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಹೆಣ್ಣು ಮಕ್ಕಳಿಗೆ ಏನಾಗಿದೆ ಅನ್ನೋದನ್ನ ಇಡೀ ದೇಶವೇ ನೋಡುತ್ತಿದೆ. ಇಷ್ಟಾದ್ರೂ ಮೋದಿ ತಮ್ಮ ಸಂಸದನ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಯಾಕೆ ಅಂತಾ ಖರ್ಗೆ ಪ್ರಶ್ನಿಸಿದ್ದಾರೆ.

suddiyaana